ಸಾರಾಂಶ
ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಅಧಿಕಾರಾವಧಿಯಲ್ಲಿಯೇ ಐಟಿ ಮತ್ತು ಟೆಲಿಕಾಂ ಕ್ರಾಂತಿಯ ಬೀಜ ಬಿತ್ತಲಾಯಿತು. ರಾಜೀವ್ ಅವರ ಕಾಲದಲ್ಲಿ ಕಂಪ್ಯೂಟರ್‌ಗಳು ಮನೆಯ ಮಾತಾದವು.
ಹುಬ್ಬಳ್ಳಿ:
ವಿಜ್ಞಾನವು ಮಾನವಕುಲಕ್ಕೆ ಒಂದು ದೊಡ್ಡ ಆಶೀರ್ವಾದ. ನಮ್ಮ ಅಜ್ಞಾನ, ಮೌಢ್ಯವನ್ನು ತೆಗೆದುಹಾಕಲು ವಿಜ್ಞಾನ ಮತ್ತು ನಮ್ಮ ಶ್ರಮವನ್ನು ಹಗುರಗೊಳಿಸಲು ತಂತ್ರಜ್ಞಾನ ಬಂದಿದೆ ಎಂದು ಸ್ಲಂ ಬೋರ್ಡ್ ಅಧ್ಯಕ್ಷ, ಶಾಸಕ ಪ್ರಸಾದ ಅಬ್ಬಯ್ಯ ಹೇಳಿದರು.ಅವರು ಇಲ್ಲಿನ ಕೇಶ್ವಾಪುರ ಆಜಾದ್ ಕಾಲನಿಯಲ್ಲಿರುವ ಉರ್ದು ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ಕರ್ನಾಟಕ ಉರ್ದು ಅಕಾಡೆಮಿ ಹುಬ್ಬಳ್ಳಿ ಎಹೆಸಾಸ್ ಫೌಂಡೇಶನ್, ವಿಜನ್ ಎಜ್ಯುಕೇಷನ್ ಮತ್ತು ವೆಲ್ಫೇರ್ ಅಸೋಸಿಯೇಷನ್ ಆಶ್ರಯದಲ್ಲಿ ಉರ್ದು ಶಾಲೆಗಳ ವಿಜ್ಞಾನ ವಸ್ತು ಪ್ರದರ್ಶನ ಮತ್ತು ಪ್ರಬಂಧ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದರು.
ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಅಧಿಕಾರಾವಧಿಯಲ್ಲಿಯೇ ಐಟಿ ಮತ್ತು ಟೆಲಿಕಾಂ ಕ್ರಾಂತಿಯ ಬೀಜ ಬಿತ್ತಲಾಯಿತು. ರಾಜೀವ್ ಅವರ ಕಾಲದಲ್ಲಿ ಕಂಪ್ಯೂಟರ್‌ಗಳು ಮನೆಯ ಮಾತಾದವು. ದೂರವಾಣಿ ಸಂಪರ್ಕ ಹೊಂದುವುದು ಐಷಾರಾಮಿ ಎಂದು ಪರಿಗಣಿಸಲ್ಪಟ್ಟ ಸಮಯದಲ್ಲಿ, ರಾಜೀವ್ ಭಾರತವನ್ನು ಸೆಲ್ಯುಲಾರ್ ನೆಟ್‌ವರ್ಕ್‌ಗೆ ಸೇರಿಸಿದ್ದರು ಎಂದರು.ವಿಜ್ಞಾನ ಪ್ರದರ್ಶನಗಳು ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವ ಉಂಟುಮಾಡುತ್ತದೆ, ಅವರ ಆಲೋಚನೆ ಮತ್ತು ತಾರ್ಕಿಕ ಶಕ್ತಿ ಹೆಚ್ಚಿಸುತ್ತದೆ. ಇಂತಹ ಪ್ರದರ್ಶನಗಳು ನಿಯಮಿತವಾಗಿ ನಡೆಯಲಿದೆ ಎಂದು ಹೇಳಿದರು.
ಸಭಾಪತಿ ಬಸವರಾಜ ಹೊರಟ್ಟಿ ಮಾತನಾಡಿ, ಇಂದಿನ ದಿನದಲ್ಲಿ ಶಿಕ್ಷಣ ಬಹಳ ಮುಖ್ಯ. ಪ್ರತಿಯೊಬ್ಬರೂ ಶಿಕ್ಷಣ ಪಡೆಯುವ ಅನಿವಾರ್ಯತೆಯೂ ಇದೆ. ಆ ನಿಟ್ಟಿನಲ್ಲಿ ಮುಸ್ಲಿಂ ಸಮುದಾಯದಲ್ಲಿ ಹೆಣ್ಣುಮಕ್ಕಳು ಕೂಡ ಉನ್ನತ ವ್ಯಾಸಂಗ ಮಾಡಬೇಕು. ಅಂದಾಗ ಮಾತ್ರ ಸಮಾಜದ ಏಳಿಗೆ ಸಾಧ್ಯ ಎಂದರು.ವಿಜ್ಞಾನ ವಸ್ತು ಪ್ರದರ್ಶನದಲ್ಲಿ 40ಕ್ಕೂ ಅಧಿಕ ಉರ್ದು ಪ್ರಾಥಮಿಕ ಮತ್ತು ಪ್ರೌಢಶಾಲೆಗಳು ಭಾಗವಹಿಸಿದ್ದರು. ಚಂದ್ರಯಾನ ಮಾದರಿ ಸೇರಿದಂತೆ ಹತ್ತಾರ ಹೊಸ ಆವಿಷ್ಕಾರಗಳನ್ನು ವಿದ್ಯಾರ್ಥಿಗಳು ಪ್ರಸ್ತುತಪಡಿಸಿದರು.
ಈ ವೇಳೆ ಪಾಲಿಕೆ ಸದಸ್ಯರಾದ ಪ್ರಕಾಶ ಕುರಟ್ಟಿ, ರಾಜಣ್ಣ ಕೊರವಿ, ಕ್ಷೇತ್ರ ಶಿಕ್ಷಣಾಧಿಕಾರಿ ಚನ್ನಪ್ಪಗೌಡ ಪಾಟೀಲ, ಡಿಡಿಪಿಐ ಎಸ್.ಎಂ. ಹುಡೇದಮನಿ, ಪ್ರಮುಖರಾದ ಡಾ. ಅಬ್ದುಲ್ ಕರೀಮ್, ಅಬ್ದುಲ್ ಸಾದಿಕ್, ಹಾಷಮ್ ಮುಲ್ಲಾ, ಜುಬೇರ್ ಅಹ್ಮದ್, ಖುರ್ಶಿದ್ ಕಲೈಗಾರ್ ಸೇರಿದಂತೆ ಹಲವರಿದ್ದರು.