ಮಾಜಿ ಪ್ರಧಾನಿ ವಾಜಪೇಯಿ ಮಾದರಿ ರಾಜಕಾರಣಿ : ವಿಧಾನ ಪರಿಷತ್ ಸದಸ್ಯ ಸಿ. ಟಿ. ರವಿ

| N/A | Published : Feb 25 2025, 12:48 AM IST / Updated: Feb 25 2025, 12:27 PM IST

ಸಾರಾಂಶ

ಚಿಕ್ಕಮಗಳೂರು, ಅಜಾತಶತ್ರು, ಜನಪರ ಆಡಳಿತಗಾರ, ಸ್ನೇಹಜೀವಿ, ಮಾಜಿ ಪ್ರಧಾನಿ ದಿ.ಅಟಲ್ ಬಿಹಾರಿ ವಾಜಪೇಯಿ ಅವರ ನೆನಪು ಸದಾ ಕಾಲ ಈ ರಾಷ್ಟ್ರಕ್ಕೆ ಇರುತ್ತದೆ. ಅವರೊಬ್ಬ ಮಾದರಿ ರಾಜಕಾರಣಿ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಅಭಿಪ್ರಾಯಿಸಿದರು.

 ಚಿಕ್ಕಮಗಳೂರು : ಅಜಾತಶತ್ರು, ಜನಪರ ಆಡಳಿತಗಾರ, ಸ್ನೇಹಜೀವಿ, ಮಾಜಿ ಪ್ರಧಾನಿ ದಿ.ಅಟಲ್ ಬಿಹಾರಿ ವಾಜಪೇಯಿ ಅವರ ನೆನಪು ಸದಾ ಕಾಲ ಈ ರಾಷ್ಟ್ರಕ್ಕೆ ಇರುತ್ತದೆ. ಅವರೊಬ್ಬ ಮಾದರಿ ರಾಜಕಾರಣಿ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಅಭಿಪ್ರಾಯಿಸಿದರು.ಸೊಮವಾರ ತಮ್ಮ ನಿವಾಸದಲ್ಲಿ ಜಿಲ್ಲಾ ಬಿಜೆಪಿ ಏರ್ಪಡಿಸಿದ್ದ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮ ಶತದಿನೋತ್ಸವ ಅಂಗವಾಗಿ ನೀಡಿದ ಸನ್ಮಾನ ಸ್ವೀಕರಿಸಿ ಮಾತನಾಡಿದರು.

ಅಟಲ್ ಬಿಹಾರಿ ವಾಜಪೇಯಿ ಅವರಿಗೂ ಚಿಕ್ಕಮಗಳೂರಿಗೂ ಹಳೇ ಸಂಬಂಧ ವಿದೆ. ತುರ್ತು ಪರಿಸ್ಥಿತಿ ಬಳಿಕ ನಡೆದ ಉಪಚುನಾವಣೆ ಸಂದರ್ಭದಲ್ಲಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಉದ್ದಗಲಕ್ಕೆ ಸಂಚರಿಸಿ ಕಾರ್ಯಕರ್ತರನ್ನು ಹುರಿದುಂಬಿಸಿ ಬಿಜೆಪಿ ಅಭ್ಯರ್ಥಿಯಾಗಿದ್ದ ವೀರೇಂದ್ರ ಪಾಟೀಲ್ ಪರವಾಗಿ ಪ್ರಚಾರ ಮಾಡಿದ್ದರು ಎಂದು ಹೇಳಿದರು.

ಚಿಕ್ಕಮಗಳೂರು ನಗರಕ್ಕಾಗಮಿಸಿದ್ದಾಗ ವಿಠಲ್ ರಾವ್ ಜೊತೆ ಹೋಗಿ ಭೇಟಿಮಾಡಿರುವುದಾಗಿ ಹೇಳಿದ ಅವರು, ಆಲ್ದೂರಿಗೂ ಬಂದು ೧೯೯೦-೯೧ ರ ಲೋಕಸಭಾ ಚುನಾವಣೆಗೂ ಮುನ್ನವೇ ಅಟಲ್ ಜೀ ಅವರನ್ನು ಆಹ್ವಾನಿಸಿ ಎ.ಸಿ. ಚಂದ್ರ ಶೇಖರ್ ಅಧ್ಯಕ್ಷತೆಯಲ್ಲಿ ಅಭಿನಂದನಾ ಸಮಿತಿ ಮೂಲಕ ನಿಧಿ ಸಂಗ್ರಹಿಸಿ ಐಬಿಯಲ್ಲಿ ಭೇಟಿಮಾಡಿ ಮೊದಲ ಬಾರಿಗೆ ಫೋಟೋ ತೆಗೆಸಿ ಕೊಂಡಾಗ ಬೂತ್ ಮಟ್ಟದ ಅಧ್ಯಕ್ಷನಾಗಿದ್ದೆ ಎಂದು ಸ್ಮರಿಸಿದರು.

ನೇತಾಜಿ ಸುಭಾಷ್ ಚಂದ್ರಬೋಸ್ ಜಿಲ್ಲಾ ಆಟದ ಮೈದಾನದಲ್ಲಿ ಬೃಹತ್ ಸಾರ್ವಜನಿಕ ಸಭೆ ಏರ್ಪಡಿಸಿ ಈ ಸಂದರ್ಭದಲ್ಲಿ ನಿಧಿ ಸಮರ್ಪಿಸಲಾಯಿತು. ೧೯೯೬ ರಲ್ಲಿ ೧೩ ದಿನಗಳ ಕಾಲ ಪ್ರಧಾನ ಮಂತ್ರಿಯಾಗಿ ರಾಜೀನಾಮೆ ನೀಡಿದ ಸಂದರ್ಭದಲ್ಲಿ ಭಾವನಾತ್ಮಕವಾಗಿ ಒಂದು ವಿಚಾರ ಹೇಳಿದರು. "ಮತ್ತೆ ಅಧಿಕಾರಕ್ಕೆ ಬರುತ್ತೇವೆ " ಎಂದು ರಾಜಕೀಯ ವಿಪ್ಲವದ ಬಗ್ಗೆ ಹೇಳಿದ್ದನ್ನು ನೆನಪಿಸಿಕೊಂಡರು.೧೯೯೮ ರಲ್ಲಿ ೧೩ ತಿಂಗಳ ಕಾಲ ಪ್ರಧಾನಿಯಾಗಿದ್ದ ಅಟಲ್ ಜೀ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಿಂದ ಡಿ.ಸಿ. ಶ್ರೀ ಕಂಠಪ್ಪರನ್ನು ಆಯ್ಕೆಮಾಡಿ ಸಂಸತ್ತಿಗೆ ಕಳುಹಿಸಲಾಗಿತ್ತು. ೧೯೯೫-೯೬ ರಲ್ಲಿ ರಾಷ್ಟ್ರೀಯ ಅಧಿವೇಶನ ಮುಂಬೈನಲ್ಲಿ ನಡೆ ದಾಗ ಕೋಟೆ ರಂಗನಾಥ್, ದಿವಾಕರ್, ಲೋಕೇಶ್, ಸುಬ್ರಹ್ಮಣ್ಯ ತಾವೂ ಸೇರಿದಂತೆ ಭಾಗವಹಿಸಿದ್ದಾಗಿ ತಿಳಿಸಿದರು.ಎಲ್.ಕೆ. ಅಡ್ವಾಣಿ ಬಿಜೆಪಿಯನ್ನು ಕಟ್ಟಿ ಬೆಳಸಿದ್ದಾರೆ. ಅವರೇ ಪ್ರಧಾನಿಯಾಗಬೇಕು ಎಂದು ಅಟಲ್ ಜೀ ಹೇಳಿದರು. 

ಅದಕ್ಕೆ ಅಡ್ವಾಣಿ ನೀವೇ ಪ್ರಧಾನಿಯಾಗಿ ಎಂದು ರಾಜಕೀಯವಾಗಿ ಜಗಳವಾಡಿದ್ದರು. ಈ ಭಾವನಾತ್ಮಕ ಕ್ಷಣಕ್ಕೆ ಸಾಕ್ಷಿಯಾಗಿ ನಮಗರಿವಿಲ್ಲದೇ ಕಣ್ಣಲ್ಲಿ ನೀರು ಬಂತು ಎಂಬುದನ್ನು ಸ್ಮರಿಸಿದರು.ದೂರದರ್ಶನ ವಾಹಿನಿ ಹೊರತುಪಡಿಸಿ ಇನ್ಯಾವುದೇ ವಾಹಿನಿಗಳು ಇರಲಿಲ್ಲ. ಈಗ ನೂರಾರು ಚಾನಲ್‌ಗಳು ಬರುತ್ತಿವೆ ಎಂಬುದಕ್ಕೆ ಅಟಲ್ ಜೀ ಪ್ರಮುಖ ಕಾರಣ. ದೇಶ ಮತ್ತು ಜನರನ್ನು ಜೋಡಿಸುವ ಮಹತ್ ಕಾರ್ಯಕ್ಕೆ ಸಾಕ್ಷಿಯಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತಕ್ಕೆ ಶಕ್ತಿ ತಂದವರು ವಾಜಪೇಯಿ ಎಂದು ಬಣ್ಣಿಸಿದರು. 

ಬಿಜೆಪಿ ರಾಜ್ಯ ಕಾರ್ಯದರ್ಶಿ ಡಾ. ಲಕ್ಷ್ಮಿ ಅಶ್ವಿನ್‌ಗೌಡ ಮಾತನಾಡಿ, ಅಟಲ್ ಬಿಹಾರಿ ವಾಜಪೇಯಿ ಅವರ ನೂರನೇ ಜನ್ಮ ದಿನಾಚರಣೆ ಅಂಗವಾಗಿ ಪ್ರಸಕ್ತ ವರ್ಷ ಜನಮಾನಸದಲ್ಲಿ ಉಳಿಯುವಂತ ಕಾರ್ಯಕ್ರಮಗಳನ್ನು ರಾಜ್ಯ ಬಿಜೆಪಿ ಆಯೋಜಿಸಲು ನಿರ್ಧರಿಸಿದೆ ಎಂದರು.ಫೆ.೧೪ ರಿಂದ ಮಾ.೧೪ ರವರೆಗೆ ವಾಜಪೇಯಿ ಅವರೊಂದಿಗೆ ಒಡನಾಟ ಹೊಂದಿದವರ ಮನೆಗೆ ಹೋಗಿ ಸ್ಮರಣಿಕೆ ನೀಡುವ ಮೂಲಕ ಅವರನ್ನು ಸನ್ಮಾನಿಸಿ ಸಮಾಲೋಚನೆ ನಡೆಸಿ ಜನ್ಮ ಶತಮಾನೋತ್ಸವ ಅರ್ಥಗರ್ಭಿತವಾಗಿ ಮಾಡುವ ಉದ್ದೇಶ ಹೊಂದಲಾಗಿದೆ ಎಂದು ಹೇಳಿದರು.ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಸೇರಿದಂತೆ ಜಿಲ್ಲೆಯಲ್ಲಿ ೧೫ ಪ್ರಮುಖರನ್ನು ಆಯ್ಕೆಮಾಡಲಾಗಿದೆ. ವಿರಾಸತ್ ಸಮ್ಮೇಳನ ನಡೆಸಲು ಸಹ ನಿರ್ಧರಿಸಲಾಗಿದೆ ಎಂದು ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಕಡೂರು ಮಾಜಿ ಶಾಸಕ ಬೆಳ್ಳಿ ಪ್ರಕಾಶ್, ಬಿಜೆಪಿ ಜಿಲ್ಲಾಧ್ಯಕ್ಷ ಎಂ.ಆರ್ ದೇವರಾಜ್ ಶೆಟ್ಟಿ, ನಗರಾಧ್ಯಕ್ಷ ಕೆಂಪನಹಳ್ಳಿ ಪುಷ್ವರಾಜ್, ಮುಖಂಡರಾದ ಕೋಟೆ ರಂಗನಾಥ್, ಸಿ.ಹೆಚ್ ಲೋಕೇಶ್, ಕನಕರಾಜ್ ಅರಸ್, ಜಯವರ್ಧನ್, ಜಸಂತಅನಿಲ್ ಕುಮಾರ್, ಬಸವರಾಜ್, ಕುಮಾರ್, ಮಧು, ಸತೀಶ್ ಉಪಸ್ಥಿತರಿದ್ದರು.