ಗ್ರಾಪಂ ಅಧ್ಯಕ್ಷರ ಮೇಲೆ ತಾಪಂ ಮಾಜಿ ಸದಸ್ಯನಿಂದ ಹಲ್ಲೆ

| Published : Jul 29 2025, 01:00 AM IST

ಸಾರಾಂಶ

ರಾಮನಗರ: ಬೋಟಿಂಗ್ ಹರಾಜು ಪ್ರಕ್ರಿಯೆ ವೇಳೆ ತಾಲೂಕು ಪಂಚಾಯಿತಿ ಮಾಜಿ ಸದಸ್ಯನೊಬ್ಬ ಗ್ರಾಮ ಪಂಚಾಯಿತಿ ಅಧ್ಯಕ್ಷರ ಮೇಲೆ ಹಲ್ಲೆ ನಡೆಸಿರುವ ಘಟನೆ ತಾಲೂಕಿನ ಹುಲಿಕೆರೆ ಗುನ್ನೂರು ಗ್ರಾಮ ಪಂಚಾಯಿತಿ ಆವರಣದಲ್ಲಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ.

ರಾಮನಗರ: ಬೋಟಿಂಗ್ ಹರಾಜು ಪ್ರಕ್ರಿಯೆ ವೇಳೆ ತಾಲೂಕು ಪಂಚಾಯಿತಿ ಮಾಜಿ ಸದಸ್ಯನೊಬ್ಬ ಗ್ರಾಮ ಪಂಚಾಯಿತಿ ಅಧ್ಯಕ್ಷರ ಮೇಲೆ ಹಲ್ಲೆ ನಡೆಸಿರುವ ಘಟನೆ ತಾಲೂಕಿನ ಹುಲಿಕೆರೆ ಗುನ್ನೂರು ಗ್ರಾಮ ಪಂಚಾಯಿತಿ ಆವರಣದಲ್ಲಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ.

ಹುಲಿಕೆರೆ ಗುನ್ನೂರು ಗ್ರಾಪಂ ಅಧ್ಯಕ್ಷ ಗಿರೀಶ್ ಮೇಲೆ ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಕರೆಂಟ್ ಶಿವಲಿಂಗಯ್ಯ ಹಲ್ಲೆ ನಡೆಸಿದ್ದಾರೆ. ಈ ಘಟನೆ ಸಂಬಂಧ ಗಿರೀಶ್ ರಾಮನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಘಟನೆ ವಿವರ:

ಹುಲಿಕೆರೆ ಗುನ್ನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅವ್ವೇರಹಳ್ಳಿ ಗ್ರಾಮದ ಹೊಸಕೆರೆಯಲ್ಲಿ ಕರೆಂಟ್ ಶಿವಲಿಂಗಯ್ಯ ಪಂಚಾಯಿತಿ ವತಿಯಿಂದ ಅನುಮತಿ ಪಡೆಯದೆ ಅನಧಿಕೃತವಾಗಿ ಬೋಟಿಂಗ್ ಮಾಡುತ್ತಿದ್ದರು. ಹಾಗಾಗಿ ಜುಲೈ 25ರಂದು ಗ್ರಾಪಂ ಆವರಣದಲ್ಲಿ ಹೊಸಕೆರೆಯಲ್ಲಿ ಬೋಟಿಂಗ್ ನಡೆಸಲು ಪಂಚಾಯಿತಿಯಿಂದ ಹರಾಜು ಪ್ರಕ್ರಿಯೆ ಏರ್ಪಡಿಸಲಾಗಿತ್ತು.

ಹರಾಜು ಪ್ರಕ್ರಿಯೆ ಪ್ರಾರಂಭವಾದಾಗ ತಾಪಂ ಮಾಜಿ ಸದಸ್ಯ ಕರೆಂಟ್ ಶಿವಲಿಂಗಯ್ಯ, ಗ್ರಾಪಂ ಅಧ್ಯಕ್ಷ ಗಿರೀಶ್ ಅವರನ್ನು ಅಡ್ಡಗಟ್ಟಿ ಹರಾಜು ಹೇಗೆ ಮಾಡುತ್ತೀರಿ ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಗಿರೀಶ್ ಸರ್ಕಾರಿ ಆದೇಶದ ಮೇರೆಗೆ ನಾವು ಪಂಚಾಯಿತಿಯಿಂದ ಹರಾಜು ಪ್ರಕ್ರಿಯೆ ಮಾಡುತ್ತಿದ್ದೇವೆ ಎಂದು ಹೇಳಿದಾಗ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ.

ಅಲ್ಲದೆ, ಶಿವಲಿಂಗಯ್ಯ ಗಿರೀಶ್ ಅ‍ವರಿಗೆ ಕಪಾಳಕ್ಕೆ ಹೊಡೆದರಲ್ಲದೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಕೊಲೆ ಬೆದರಿಕೆ ಹಾಕಿದ್ದಾರೆನ್ನಲಾಗಿದೆ.

ಈ ಸಂಬಂಧ ಗಿರೀಶ್ ರಾಮನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕಲಂ 126(2), 115 (2), 352, 351 (3) ಬಿಎನ್ ಎಸ್ ರೀತ್ಯ ಪ್ರಕರಣ ದಾಖಲಿಸಿದ್ದಾರೆ.