ಸಾರಾಂಶ
ತಿಪಟೂರು: ರೈತರ ಹಿತಾಸಕ್ತಿ ಕಾಪಾಡುವ ನಿಟ್ಟಿನಲ್ಲಿ ಸರ್ಕಾರಗಳು ಜೈವಿಕ ಆಹಾರ ಸುರಕ್ಷಾ ನೀತಿ ರೂಪಿಸಬೇಕಿದೆ ಎಂದು ಮುಖಂಡ ರಮೇಶ್ ದೇವನಹಳ್ಳಿ ಹೇಳಿದರು.
ನಗರದ ರೋಟರಿ ಭವನದಲ್ಲಿ ನಡೆದ ಕುಲಾಂತರಿ ಫಸಲು ಮತ್ತು ಆಹಾರ ಕುರಿತಾಗಿ ರೈತರು ಹಾಗೂ ಸಮಾಜದ ಮುಖಂಡರ ದುಂಡು ಮೇಜಿನ ಸಭೆಯಲ್ಲಿ ಮಾತನಾಡಿರು.ಬಿಟಿ ತಂತ್ರಜ್ಞಾನ ರೈತರಿಗೆ ಒಗ್ಗುವುದಿಲ್ಲ. ಇದನ್ನು ಒಪ್ಪಿಕೊಂಡರೆ ನಮ್ಮಲ್ಲಿರುವ ರಾಗಿ, ಭತ್ತ, ಹತ್ತಿ ಬೀಜಗಳು ಕಂಪನಿಗಳ ಒಡೆತನಕ್ಕೆ ಹೋಗಲಿದೆ. ಪ್ರಪಂಚದ ೬೨ ದೇಶಗಳು ಕುಲಾಂತರಿ ಬೀಜ ಬೇಡವೇ ಬೇಡ ಎಂದು ವಿರೋಧಿಸುತ್ತಿವೆ. ಭಾರತದಲ್ಲಿಯೂ ಕಳೆದ ೧೦ ವರ್ಷಗಳಿಂದ ಬಿಟಿ ತಳಿ ವಿರೋಧಿಸಿ ರೈತ ಚಳುವಳಿಗಳು ನಡೆಯುತ್ತಿವೆ. ಒಂದು ವೇಳೆ ಈ ನೀತಿ ಜಾರಿಗೆ ಬಂದರೆ ರೈತರು ಬೀಜಗಳನ್ನು ಉತ್ಪಾದಿಸುವ ಸ್ವಾತಂತ್ರವನ್ನು ಕಳೆದುಕೊಂಡು ಕಂಪನಿಗಳ ದಾಸರಾಗಿ ಬದುಕು ಸಾಗಿಸಬೇಕಾಗುತ್ತದೆ ಎಂದು ತಿಳಿಸಿದರು.
ಸುಪ್ರೀಂ ಕೋರ್ಟ್ ಕೂಡ ಕುಲಾಂತರಿಗೆ ಸಂಬಂಧಿಸಿದ ಹಾಗೆ ಒಂದು ರಾಷ್ಟ್ರೀಯ ನೀತಿ ರೂಪಿಸಿ ಎಂದು ಕೇಂದ್ರ ಸರ್ಕಾರಕ್ಕೆ ಆದೇಶಿಸಿದೆ. ಸರ್ಕಾರ ಈ ವಿಷಯವಾಗಿ ರೈತರು, ಬಳಕೆದಾರರು, ಸಮಾಜದ ಮುಖಂಡರನ್ನು ಒಳಗೊಂಡ ಒಂದು ಸಮಿತಿ ರಚಿಸಿ ಅಧ್ಯಯನ ಮಾಡಿ ರೈತರು ಮತ್ತು ಸಾಮಾನ್ಯ ಬಳಕೆದಾರರು ಎಲ್ಲರಿಗೂ ಅನುಕೂಲವಾಗುವ ಒಂದು ಸಮಗ್ರ ನೀತಿ ಜಾರಿ ಮಾಡಬೇಕೆಂದು ಆಗ್ರಹಿಸಿದರು.ರೈತ ಮುಖಂಡ ಮನೋಹರ್‌ಪಟೇಲ್ ಮಾತನಾಡಿ, ಪ್ರಯೋಗಾಲಯದಲ್ಲಿ ಕುಲಾಂತರಿ ಜೋಳವನ್ನು ಇಲಿಗಳಿಗೆ ತಿನ್ನಿಸಿದಾಗ ಅವುಗಳಲ್ಲಿ ಕ್ಯಾನ್ಸರ್ ಕಾಣಿಸಿಕೊಂಡಿದೆ. ಕುಲಾಂತರಿಗೆ ಒಪ್ಪಿದರೆ ಆರೋಗ್ಯದ ಜೊತೆ ಬೀಜ, ನಾಟಿ ಗೊಬ್ಬರವನ್ನೂ ಕಳೆದುಕೊಳ್ಳುತ್ತೇವೆ. ಕುಲಾಂತರಿ ವಿರೋಧಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೇಂದ್ರ ಪರಿಸರ ಮಂತ್ರಿಗೆ ಪತ್ರ ಬರೆಯಲಿದ್ದೇವೆ ಎಂದು ತಿಳಿಸಿದರು.
ಕೆ.ಟಿ.ಗಂಗಾಧರ್, ಯೋಗೀಶ್ವರಸ್ವಾಮಿ, ಜಯಾನಂದಯ್ಯ, ದೇವರಾಜು ತಿಮ್ಲಾಪುರ, ಬೆಲೆಕಾವಲು ಸಮಿತಿಯ ಶ್ರೀಕಾಂತ್ ಕೆಳಹಟ್ಟಿ, ಕಸಾಪ ಅಧ್ಯಕ್ಷ ಬಸವರಾಜಪ್ಪ, ಜೇನು ಕೃಷಿಕ ಉಮೇಶ್, ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ವಿಜಯಕುಮಾರ್ ಇದ್ದರು.