ಗರ್ಭಿಣಿಯರು, ಬಾಣಂತಿಯರ ಆರೋಗ್ಯ ಬಲವರ್ಧನೆಗೆ ಕಾರ್ಯಯೋಜನೆ ರೂಪಿಸಿ: ಕೆ.ನಾಗಣ್ಣ ಗೌಡ

| Published : Feb 19 2025, 12:45 AM IST

ಗರ್ಭಿಣಿಯರು, ಬಾಣಂತಿಯರ ಆರೋಗ್ಯ ಬಲವರ್ಧನೆಗೆ ಕಾರ್ಯಯೋಜನೆ ರೂಪಿಸಿ: ಕೆ.ನಾಗಣ್ಣ ಗೌಡ
Share this Article
  • FB
  • TW
  • Linkdin
  • Email

ಸಾರಾಂಶ

ಜಿಲ್ಲೆಯಲ್ಲಿ ಗರ್ಭಿಣಿಯರು ಮತ್ತು ಬಾಣಂತಿಯರ ಆರೋಗ್ಯ ಬಲವರ್ಧನೆಗೆ ಪೌಷ್ಠಿಕ ಆಹಾರ ಸೇವನೆ, ರಕ್ತಹೀನತೆ ತಡೆಗಟ್ಟಲು ಕಬ್ಬಿಣಾಂಶ ಮಾತ್ರೆಗಳ ಸೇವನೆ ಹಾಗೂ ಇತರೆ ತಪಾಸಣೆಗಳಂತಹ ವಿಶೇಷ ಕಾಳಜಿ ವಹಿಸಲು ಸೂಕ್ತ ಕಾರ್ಯಯೋಜನೆ ರೂಪಿಸಬೇಕು.

ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಸೂಚನೆ

ಕನ್ನಡಪ್ರಭವಾರ್ತೆ ಬಳ್ಳಾರಿ

ಜಿಲ್ಲೆಯಲ್ಲಿ ಗರ್ಭಿಣಿಯರು ಮತ್ತು ಬಾಣಂತಿಯರ ಆರೋಗ್ಯ ಬಲವರ್ಧನೆಗೆ ಪೌಷ್ಠಿಕ ಆಹಾರ ಸೇವನೆ, ರಕ್ತಹೀನತೆ ತಡೆಗಟ್ಟಲು ಕಬ್ಬಿಣಾಂಶ ಮಾತ್ರೆಗಳ ಸೇವನೆ ಹಾಗೂ ಇತರೆ ತಪಾಸಣೆಗಳಂತಹ ವಿಶೇಷ ಕಾಳಜಿ ವಹಿಸಲು ಸೂಕ್ತ ಕಾರ್ಯಯೋಜನೆ ರೂಪಿಸಬೇಕು ಎಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಕೆ.ನಾಗಣ್ಣ ಗೌಡ ವೈದ್ಯಾಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಮಂಗಳವಾರ ಬಿಮ್ಸ್ ಸಭಾಂಗಣದಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಆರೋಗ್ಯ, ಶಿಕ್ಷಣ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಅವರು ಮಾತನಾಡಿದರು.

ರಾಜ್ಯದಲ್ಲಿ ಕಲ್ಯಾಣ ಕರ್ನಾಟಕ ಭಾಗವು ಗರ್ಭಿಣಿಯರು ಮತ್ತು ಬಾಣಂತಿಯರ ಆರೈಕೆಯಲ್ಲಿ ವಿಶೇಷ ಕಾಳಜಿ ವಹಿಸಬೇಕಿದೆ. ಜಿಲ್ಲೆಯಲ್ಲಿ ವಿಶೇಷ ಅನುದಾನವೂ ಲಭ್ಯವಿದ್ದು, ವೈದ್ಯಾಧಿಕಾರಿಗಳು ಸೂಕ್ತ ಕಾರ್ಯಯೋಜನೆ ರೂಪಿಸಿ ಗರ್ಭಿಣಿ ಮತ್ತು ಬಾಣಂತಿಯರ ಮರಣ ಪ್ರಮಾಣ ತಗ್ಗಿಸಲು ಕ್ರಮವಹಿಸಬೇಕಿದೆ ಎಂದರು.

ಜಿಲ್ಲೆಯಲ್ಲಿ ಪ್ರಾಥಮಿಕ, ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ತಪಾಸಣೆಗೆ ಆಗಮಿಸುವ ಗರ್ಭಿಣಿಯರಿಗೆ ಪ್ರಮುಖವಾಗಿ ಪೌಷ್ಠಿಕ ಆಹಾರ ಸೇವನೆ, ಅನೀಮಿಯ ತಡೆಗಟ್ಟುವಿಕೆ ಕುರಿತು ಆರೋಗ್ಯ ಶಿಕ್ಷಣ ನೀಡಬೇಕು. 18 ವರ್ಷದೊಳಗಿನ ನ್ಯೂನತೆ ಇರುವ ಮಕ್ಕಳನ್ನು ಗುರುತಿಸಿ ತಜ್ಞ ವೈದ್ಯರಿಂದ ಚಿಕಿತ್ಸೆ ಕೊಡಿಸಬೇಕು ಎಂದು ಆರೋಗ್ಯ ಮತ್ತು ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.

ಗ್ರಾಪಂ ಮಟ್ಟದಲ್ಲಿ ಆಶಾ ಕಾರ್ಯಕರ್ತೆಯರು ಮನೆ ಮನೆಗೆ ಭೇಟಿ ನೀಡಬೇಕು. ಗರ್ಭಿಣಿ ಹಾಗೂ ಬಾಣಂತಿಯರು ಎಷ್ಟು ಪ್ರಮಾಣದಲ್ಲಿ ಪೌಷ್ಠಿಕ ಆಹಾರ ಸೇವನೆ ಮಾಡಬೇಕು ಎಂಬುದರ ಕುರಿತು ಮನವರಿಕೆ ಮಾಡಬೇಕು. ಬಾಲ್ಯದಲ್ಲಿ ತಂದೆ-ತಾಯಿ ಕಳೆದುಕೊಂಡ ಮಕ್ಕಳಿಗೆ ಮಿಷನ್ ವಾತ್ಸಲ್ಯ ಯೋಜನೆಯಡಿ ನೆರವು ಒದಗಿಸಬೇಕು ಎಂದು ಅಧ್ಯಕ್ಷ ಕೆ.ನಾಗಣ್ಣ ಗೌಡ ತಿಳಿಸಿದರು.

ಎಡಿಸಿ ಮಹಮ್ಮದ್ ಝುಬೇರ್ ಮಾತನಾಡಿ, ಜಿಲ್ಲೆಯಲ್ಲಿ ಪ್ರತಿ ತಿಂಗಳು ಒಂದು ಬಾರಿ ಪ್ರಧಾನಮಂತ್ರಿ ಮಾತೃತ್ವ ಸುರಕ್ಷತಾ ವಂದನಾ ಕಾರ್ಯಕ್ರಮದಡಿ ಗರ್ಭಿಣಿ ಮಹಿಳೆಯರಿಗೆ ಆರೋಗ್ಯ ಕೇಂದ್ರಗಳಲ್ಲಿ ಪೌಷ್ಠಿಕ ಆಹಾರ ನೀಡಲಾಗುತ್ತಿದೆ ಎಂದು ಸಭೆಗೆ ತಿಳಿಸಿದರು.ಬಾಲ್ಯ ವಿವಾಹ ತಡೆಗೆ ಕ್ರಮವಹಿಸಿ:

ಒಂದು ಬಾಲ್ಯವಿವಾಹ ನಡೆಯಬೇಕಾದರೆ ಮುಂಚಿತವಾಗಿ ಆ ವ್ಯಾಪ್ತಿಯ ಶಾಲೆಯ ಶಿಕ್ಷಕರು, ಅಂಗನವಾಡಿ ಕಾರ್ಯಕರ್ತೆಯರು ಮತ್ತು ಆಶಾ-ಕಾರ್ಯಕರ್ತೆಯರಿಗೆ ತಿಳಿಯುತ್ತದೆ. ಆಗ ಸಂಬಂಧಿಸಿದ ಮನೆಗೆ ಭೇಟಿ ನೀಡಿ ಪೋಷಕರಿಗೆ ಮನವರಿಕೆ ಮಾಡಬೇಕು. ಜಿಲ್ಲೆಯಲ್ಲಿ ಬಾಲ್ಯವಿವಾಹ ತಡೆಗೆ ಅಧಿಕಾರಿಗಳು ಕ್ರಮವಹಿಸಬೇಕು. ಉದಾಸೀನತೆ ತೋರುವಂತಿಲ್ಲ ಎಂದು ಸದಸ್ಯ ಕೆ.ನಾಗಣ್ಣ ಗೌಡ ತಿಳಿಸಿದರು.

ಶಾಲೆಗೆ ಗೈರಾದ ಮಕ್ಕಳಿಗೆ ಹಾಜರಾತಿ ನೀಡಬಾರದು. ಶಿಕ್ಷಕರು, ಬಿಇಒ ಅಧಿಕಾರಿಗಳು ಮನೆ ಭೇಟಿ ನೀಡಿ, ತಂದೆ-ತಾಯಿಗಳಿಗೆ ತಿಳಿಸಬೇಕು. ಶಿಕ್ಷಣದಿಂದ ಯಾವೊಬ್ಬ ಮಕ್ಕಳು ಹೊರಗುಳಿಯುವಂತಿಲ್ಲ. ಬಾಲ ಕಾರ್ಮಿಕ ಪದ್ಧತಿಯಲ್ಲಿ ತೊಡಗಿಸಿಕೊಂಡಿದ್ದಲ್ಲಿ ಕಾರ್ಮಿಕ ಅಧಿಕಾರಿಗಳು ನಿಯಮಿತವಾಗಿ ದಾಳಿ ನಡೆಸಬೇಕು. ಶಾಲೆ ಬಿಟ್ಟ ಮಕ್ಕಳನ್ನು ಮುಖ್ಯ ವಾಹಿನಿಗೆ ತರಬೇಕು ಎಂದರು.

ಕರ್ನಾಟಕ ರಾಜ್ಯ ಆಹಾರ ಆಯೋಗದ ಅಧ್ಯಕ್ಷ ಡಾ. ಕೃಷ್ಣ ಮಾತನಾಡಿ, ಜಿಲ್ಲೆಯ ವಿವಿಧ ತಾಲೂಕುಗಳ ಹೆರಿಗೆ ಕೇಂದ್ರಗಳಲ್ಲಿ ಸ್ವಚ್ಛತೆ ಕಾಯ್ದುಕೊಳ್ಳಬೇಕು. ಗರ್ಭಿಣಿ ಮತ್ತು ಬಾಣಂತಿಯರ ಆರೋಗ್ಯಕ್ಕೆ ಪೌಷ್ಠಿಕ ಆಹಾರ ಸೇವನೆಯು ಬಹುಮುಖ್ಯ ಆದ್ಯತೆಯಾಗಬೇಕು ಎಂದು ತಿಳಿಸಿದರು.

ಡಿಎಚ್ಒ ಡಾ. ಯಲ್ಲಾ ರಮೇಶ್ ಬಾಬು, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ಬಸರೆಡ್ಡಿ, ಬಿಮ್ಸ್‌ನ ಪ್ರಭಾರಿ ನಿರ್ದೇಶಕ ಡಾ. ಕೃಷ್ಣ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ವಿಜಯ್ ಕುಮಾರ್, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪನಿರ್ದೇಶಕರಾದ ಸಕೀನಾ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಮಲ್ಲಿಕಾರ್ಜುನ, ಜಿಲ್ಲಾ ಕಾರ್ಮಿಕ ಅಧಿಕಾರಿ ಸಿದ್ದಪ್ಪ ಖೈನೂರ, ಜಿಲ್ಲಾ ಬಾಲ ಕಾರ್ಮಿಕ ಯೋಜನಾಧಿಕಾರಿ ಮೌನೇಶ್, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ರಕ್ಷಣಾಧಿಕಾರಿ ಎಳೆ ನಾಗಪ್ಪ ಸೇರಿದಂತೆ ರಾಜ್ಯ ಆಹಾರ ಆಯೋಗದ ಸದಸ್ಯರು, ಜಿಲ್ಲಾ ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಇತರರು ಉಪಸ್ಥಿತರಿದ್ದರು.