ಕರ್ನಾಟಕ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ, ಗ್ರಾಮೀಣ ಶಾಸಕ ಬಸನಗೌಡ ದದ್ದಲ್ ಮಾತನಾಡಿ, ಗಣೇಕಲ್ ಜಲಾಶಯದಿಂದ ಕುಡಿಯುವ ನೀರು ಪಡೆಯುವ ಬದಲು ಗುರ್ಜಾಪುರ ಜಲಾಶಯದಿಂದ ನಗರಕ್ಕೆ ಕುಡಿಯುವ ನೀರು ಪಡೆಯುವ ಯೋಜನೆ ರೂಪಿಸಬೇಕು. ಗಣೇಕಲ್ ಜಲಾಶಯದ ನೀರು ಪಡೆಯಲು ರೈತರ ಒತ್ತಡದ ಹಿನ್ನಲೆಯಲ್ಲಿ ಸಮಸ್ಯೆಯಾಗುತ್ತಿದೆ ಎಂದರು.
ಕನ್ನಡಪ್ರಭ ವಾರ್ತೆ ರಾಯಚೂರು
ಬೆಳೆಯುತ್ತಿರುವ ನಗರ, ಜನಸಂಖ್ಯೆ ಸೇರಿದಂತೆ ಭವಿಷ್ಯವನ್ನು ದೃಷ್ಟಿಯಲ್ಲಿಟ್ಟುಕೊಂಡು ಸಾರ್ವಜನಿಕರಿಗೆ ಅಗತ್ಯ ಸವಲತ್ತುಗಳನ್ನು ಕಲ್ಪಿಸಿಕೊಡುವ ನಿಟ್ಟಿನಲ್ಲಿ ಅಧಿಕಾರಿಗಳು ಯೋಜನೆಗಳನ್ನು ರೂಪಿಸಿ ಅನುಷ್ಠಾನಕ್ಕೆ ತರಬೇಕು. ಈ ವಿಚಾರದಲ್ಲಿ ಯಾವುದೇ ಸಮಸ್ಯೆಗಳಿದ್ದರು ಗಮನಕ್ಕೆ ತಂದು ಪರಿಹರಿಸಿಕೊಳ್ಳಬೇಕು ಎಂದು ನಗರಾಭಿವೃದ್ಧಿ ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ ತಾಕೀತು ಮಾಡಿದರು.ಸ್ಥಳೀಯ ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ರಾಯಚೂರು ಮಹಾನಗರ ಪಾಲಿಕೆ ಹಾಗೂ ರಾಯಚೂರು ನಗರಾಭಿವೃದ್ಧಿ ಪ್ರಾಧಿಕಾರದ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು. ಬರುವ ದಿನಗಳಲ್ಲಿ ಹೆಚ್ಚಾಗುವ ನಗರದ ಜನಸಂಖ್ಯೆಗೆ ಅನುಗುಣವಾಗಿ ಕುಡಿಯುವ ನೀರು, ಘನ ತ್ಯಾಜ್ಯ ವಿಲೇವಾರಿಗೆ ಸೂಕ್ತ ಯೋಜನೆಯನ್ನು ರೂಪಿಸಬೇಕು. ರಾಯಚೂರು ನಗರದಲ್ಲಿ 3.5 ಲಕ್ಷ ಜನಸಂಖ್ಯೆಗೆ ಅಗತ್ಯವಿರುವ ಯೋಜನೆಗಳನ್ನು ರೂಪಿಸಲಾಗಿದೆ. ಆದರೆ ಭವಿಷ್ಯದಲ್ಲಿ ಬೇಡಿಕೆ ಹೆಚ್ಚಳವಾಗುವದನ್ನು ಸಹ ಪರಿಗಣಿಸಬೇಕೆಂದರು. ನಗರದಲ್ಲಿ 52 ಎಂಎಲ್ಡಿ ನೀಡಿನ ಪೂರೈಕೆ ಯಾಗುತ್ತಿದ್ದು, 90 ಎಂಎಲ್ಡಿ ಬೇಡಿಕೆಯಿದೆ ಎಂದರು.
ನೀರು, ಘನತ್ಯಾಜ್ಯ ವಿಲೇವಾರಿ ಹಾಗೂ ಇನ್ನಿತರೆ ಮೂಲಭೂತ ಸೌಕರ್ಯ ಪ್ರಗತಿ ಪರಿಶೀಲನೆ ಸಂದರ್ಭದಲ್ಲಿ ನಗರಗಳು ತೀವ್ರವಾಗಿ ಬೆಳೆಯುವ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಅನುಕೂಲವಾಗುವ ರೀತಿಯಲ್ಲಿ ಯೋಜನೆ ರೂಪಿಸಬೇಕು. ಪ್ರಸ್ತುತ ಮಹಾನಗರ ಪಾಲಿಕೆಯ ಜನಸಂಖ್ಯೆ ಮುಂದಿನ ದಿನಗಳಲ್ಲಿ ಹೆಚ್ಚಾಗಲಿದೆ. ಅವರಿಗೆ ಕುಡಿವ ನೀರು ಮತ್ತು ಘನ ತ್ಯಾಜ್ಯ ವಿಲೇಜ್ ವಿಲೇವಾರಿ ಮೂಲಭೂತ ಸುಗಮವಾಗಿ ಸೌಕರ್ಯಗಳು ದೊರೆಯಲು ಅಗತ್ಯ ಕ್ರಮ ವಹಿಸಬೇಕು ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.ಕರ್ನಾಟಕ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ, ಗ್ರಾಮೀಣ ಶಾಸಕ ಬಸನಗೌಡ ದದ್ದಲ್ ಮಾತನಾಡಿ, ಗಣೇಕಲ್ ಜಲಾಶಯದಿಂದ ಕುಡಿಯುವ ನೀರು ಪಡೆಯುವ ಬದಲು ಗುರ್ಜಾಪುರ ಜಲಾಶಯದಿಂದ ನಗರಕ್ಕೆ ಕುಡಿಯುವ ನೀರು ಪಡೆಯುವ ಯೋಜನೆ ರೂಪಿಸಬೇಕು. ಗಣೇಕಲ್ ಜಲಾಶಯದ ನೀರು ಪಡೆಯಲು ರೈತರ ಒತ್ತಡದ ಹಿನ್ನಲೆಯಲ್ಲಿ ಸಮಸ್ಯೆಯಾಗುತ್ತಿದೆ ಎಂದರು.
ಮಾಜಿ ಸಚಿವ,ವಿಧಾನ ಪರಿಷತ್ ಸದಸ್ಯ ಎನ್.ಎಸ್.ಬೋಸರಾಜು ಮಾತನಾಡಿ, ನಗರದಲ್ಲಿ ಕುಡಿಯುವ ನೀರಿನ ಜಾಲ ಸಮರ್ಪಕವಾಗಿ ಇಲ್ಲದೇ ಇರುವುದರಿಂದ ಪೂರೈಕೆಯಲ್ಲಿ ಸೋರಿಕೆಯ ಅವ್ಯವಸ್ಥೆಯಿದೆ. ಸರಿಪಡಿಸಲು ವ್ಯವಸ್ಥಿತ ಯೋಜನೆ ರೂಪಿಸಿಕೊಳ್ಳಬೇಕೆಂದರು.ಎಂಎಲ್ಸಿ ವಸಂತ ಕುಮಾರ ಮಾತನಾಡಿ, ದೇವಸೂಗೂರು, ಚಿಕ್ಕಸೂಗೂರು ನೀರಿನ ಶುದ್ದೀಕರಣ ಘಟಕಗಳು ಸ್ಥಗಿತಗೊಂಡಿದ್ದು, ನವೀಕರಣ ಕೈಗೊಂಡು ನೀರಿನ ಪೂರೈಕೆ ಪ್ರಮಾಣ ಹೆಚ್ಚಿಸುವ ಅವಕಾಶಗಳನ್ನು ಪಾಲಿಕೆ ಬಳಸಿಕೊಳ್ಳಬೇಕೆಂದರು.
ಮಹಾನಗರ ಪಾಲಿಕೆ ಆಯುಕ್ತ ಜುಬಿನ್ ಮೊಹಾಪಾತ್ರ ಮಾತನಾಡಿ, ನಗರದಲ್ಲಿ 35 ಸ್ಲಂ ಏರಿಯಾಗಳಿದ್ದು, ಹೊಸ ಮತ್ತು ಹಳೇ ಆಶ್ರಯ ಕಾಲೋನಿಗಳ ಸೌಕರ್ಯ ಒದಗಿಸಲು ಯೋಜನೆ ರೂಪಿಸಲಾಗಿದೆ. 135 ಕೋಟಿ ರು. ಅರ್ಬನ್ ಚಾಲೆಂಜ್ ಅನುದಾನದಲ್ಲಿ ಪ್ರಸ್ತಾವನೆ ಸಲ್ಲಿಸಿದ್ದು, ಕಮರ್ಷಿಯಲ್ ಕಾಂಪ್ಲೆಕ್ಸ್‌ಗೆ ಉಸ್ಮಾನಿಯಾ ತರಕಾರಿ ನಿರ್ಮಾಣ ಉದ್ದೇಶಿಸಲಾಗಿದೆ ಎಂದರು.ಮಾವಿನ ಕೆರೆ ಅಭಿವೃದ್ಧಿಗಾಗಿ ಈಗಾಗಲೇ ಕಾಮಗಾರಿಯು ಪ್ರಗತಿಯಲ್ಲಿದೆ. 15ನೇ ಹಣಕಾಸು ಆಯೋಗದ ವತಿಯಿಂದ 67.72 ಕೋಟಿ ರು.ಗಳನ್ನು ಬಿಡುಗಡೆ ಮಾಡಲಾಗಿದೆ. ಎಸ್.ಎಫ್.ಸಿ/ ಎಸ್.ಸಿ.ಎಸ್.ಪಿ, ಟಿಎಸ್.ಪಿ ವತಿಯಿಂದ 20.58 ಕೋಟಿ ರು. ಬಿಡುಗಡೆ ಮಾಡಲಾಗಿದ್ದು, ಶೇ.97.2ರಷ್ಟು ಅನುದಾನ ಬಳಕೆ ಮಾಡಲಾಗಿದೆ ಎಂದರು.
ಆನೆ ಕಲಾಕೃತಿ ಉದ್ಘಾಟನೆ: ರಾಯಚೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಸಂಗ್ರಹಿಸಲಾದ ವೆಸ್ಟ್ ವಂಡರ್ ಕುಡಿಯುವ ನೀರಿನ ವೆಸ್ಟ್ ಬಾಟಲಿಗಳನ್ನು ಬಳಸಿ, ಧಾರವಾಡದ ಆರ್ಟ್ ವ್ಯಾಲಿ ಸಂಸ್ಥೆಯಿಂದ ತಯಾರಿಸಿದ ಆನೆ ಕಲಾಕೃತಿಯನ್ನು ಸೋಮವಾರ ನಗರದ ಜಿಲ್ಲಾಧಿಕಾರಿಗಳ ಕಚೇರಿಯ ಆವರಣದಲ್ಲಿ ನಗರಾಭಿವೃದ್ಧಿ ಸಚಿವರಾದ ಡಾ.ಯತೀಂದ್ರ ಸಿದ್ದರಾಮಯ್ಯ ಅವರು ವೀಕ್ಷಿಸಿದರು. ಇದು ನೋಡುಗರ ಗಮನ ಸೆಳೆಯಿತು.ಮಹಾನಗರ ಪಾಲಿಕೆಯ ಸ್ವಸಹಾಯ ಸಂಘದ ಮಹಿಳೆಯರಿಂದ ವೆಸ್ಟ್ ಪೇಪರ್‌ನಿಂದ ಮನೆಯ ಸೌಂದರ್ಯಕರಣಕ್ಕೆ ಬೇಕಾಗುವ ಸಾಮಾಗ್ರಿಗಳನ್ನು ತಯಾರಿಸ ಲಾಗಿದ್ದ ವಿವಿಧ ಕಲಾಕೃತಿಯನ್ನು ಸಚಿವರು ವೀಕ್ಷಿಸಿದರು. ರಾಯಚೂರು ಮಹಾನಗರ ಪಾಲಿಕೆ ವತಿಯಿಂದ ಹಮ್ಮಿಕೊಂಡಿದ್ದ ನಿಮ್ಮ ಬಾಗಿಲಿಗೆ ಮಹಾನಗರ ಪಾಲಿಕೆ ಕಂದಾಯ ಅದಾಲತ್ ಹಂತ-2 ಕಾರ್ಯಕ್ರಮಕ್ಕೆ ಡಿಜಿಟಲ್ ಲಾಗಿನ್ ಮೂಲಕ ಚಾಲನೆ ನೀಡಿ, ಅರ್ಹ ಫಲಾನುಭವಿಗಳಿಗೆ ಸಾಂಕೇತಿಕವಾಗಿ ಇ-ಖಾತಾ ವಿತರಿಸಿದರು. ಮತ್ತು ಮಹಾನಗರ ಪಾಲಿಕೆಯ ಪೌರ ಕಾರ್ಮಿಕರಿಗೆ ಸಮವಸ್ತ್ರದ ಕಿಟ್‌ಗಳನ್ನು ಸಚಿವರು ಸೇರಿದಂತೆ ವಿವಿಧ ಗಣ್ಯರು ವಿತರಿಸಿದರು.
ಸಭೆಯಲ್ಲಿ ಆರ್‌ಡಿಎ ಅಧ್ಯಕ್ಷ ರಾಜಶೇಖರ ರಾಮಸ್ವಾಮಿ, ಜಿಲ್ಲಾಧಿಕಾರಿ ಪೂವಿತಾ ಎಸ್., ಪಾಲಿಕೆ-ಆರ್‌ಡಿಎಯ ವಿವಿಧ ವಿಭಾಗಗಳ ಅಧಿಕಾರಿ, ಸಿಬ್ಬಂದಿ ವರ್ಗದವರು ಹಾಜರಿದ್ದರು.