ಎಸ್ಸೆಸ್ಸೆಲ್ಸಿ ಪರೀಕ್ಷೇಲಿ ಕೋಲಾರ ಜಿಲ್ಲೆಗೆ 14ನೇ ಸ್ಥಾನ

| Published : May 03 2025, 12:15 AM IST

ಸಾರಾಂಶ

ಎಸ್ಸೆಸ್ಸೆಲ್ಸಿ ಫಲಿತಾಂಶ ಪ್ರಕಟಗೊಂಡಿದ್ದು, ಜಿಲ್ಲೆಯಲ್ಲಿ ಪರೀಕ್ಷೆಗೆ ಹಾಜರಾಗಿದ್ದ ೧೮೫೬೦ ಮಂದಿ ವಿದ್ಯಾರ್ಥಿಗಳ ಪೈಕಿ ೧೨೭೦೮ ಮಂದಿ ಉತ್ತೀರ್ಣರಾಗುವ ಮೂಲಕ ಜಿಲ್ಲೆಗೆ ಶೇ.೬೮.೩೭ ಫಲಿತಾಂಶದೊಂದಿಗೆ ೧೪ನೇ ಸ್ಥಾನ ಬಂದಿದ್ದು, ಜಿಲ್ಲೆಯ ಮುಳಬಾಗಿಲು ಅಮರಜ್ಯೋತಿ ಶಾಲೆಯ ಎಂ.ರಕ್ಷಾ ಹಾಗೂ ಕೆಜಿಎಫ್ ನಗರದ ಮಹಾವೀರ್ ಜೈನ್ ಶಾಲೆಯ ಎಸ್.ಭಾವನಿಕಾ ೬೨೪ ಅಂಕಗಳೊಂದಿಗೆ ಜಿಲ್ಲೆಗೆ ಮೊದಲಿಗರಾಗಿ ಹೊರಹೊಮ್ಮಿದ್ದಾರೆ ಎಂದು ಡಿಡಿಪಿಐ ಕೃಷ್ಣಮೂರ್ತಿ ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಕೋಲಾರ

ಎಸ್ಸೆಸ್ಸೆಲ್ಸಿ ಫಲಿತಾಂಶ ಪ್ರಕಟಗೊಂಡಿದ್ದು, ಜಿಲ್ಲೆಯಲ್ಲಿ ಪರೀಕ್ಷೆಗೆ ಹಾಜರಾಗಿದ್ದ ೧೮೫೬೦ ಮಂದಿ ವಿದ್ಯಾರ್ಥಿಗಳ ಪೈಕಿ ೧೨೭೦೮ ಮಂದಿ ಉತ್ತೀರ್ಣರಾಗುವ ಮೂಲಕ ಜಿಲ್ಲೆಗೆ ಶೇ.೬೮.೩೭ ಫಲಿತಾಂಶದೊಂದಿಗೆ ೧೪ನೇ ಸ್ಥಾನ ಬಂದಿದ್ದು, ಜಿಲ್ಲೆಯ ಮುಳಬಾಗಿಲು ಅಮರಜ್ಯೋತಿ ಶಾಲೆಯ ಎಂ.ರಕ್ಷಾ ಹಾಗೂ ಕೆಜಿಎಫ್ ನಗರದ ಮಹಾವೀರ್ ಜೈನ್ ಶಾಲೆಯ ಎಸ್.ಭಾವನಿಕಾ ೬೨೪ ಅಂಕಗಳೊಂದಿಗೆ ಜಿಲ್ಲೆಗೆ ಮೊದಲಿಗರಾಗಿ ಹೊರಹೊಮ್ಮಿದ್ದಾರೆ ಎಂದು ಡಿಡಿಪಿಐ ಕೃಷ್ಣಮೂರ್ತಿ ತಿಳಿಸಿದ್ದಾರೆ.ಈ ಕುರಿತು ಮಾಹಿತಿ ನೀಡಿದ ಅವರು, ಪರೀಕ್ಷೆಗೆ ಕುಳಿತಿದ್ದ ೯೧೨೦ ಬಾಲಕರ ಪೈಕಿ ೫೭೩೮ ಮಂದಿ ಉತ್ತೀರ್ಣರಾಗಿದ್ದು, ಶೇ.೬೨.೯೨ ಫಲಿತಾಂಶ ಬಂದಿದೆ. ಪರೀಕ್ಷೆ ಬರೆದ ೯೪೬೬ ಬಾಲಕಿಯರ ಪೈಕಿ ೬೯೭೦ ಮಂದಿ ಉತ್ತೀರ್ಣರಾಗಿ ಶೇ.೭೩.೬೩ ಫಲಿತಾಂಶ ಬಂದಿದ್ದು, ಈ ಬಾರಿಯೂ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ ಎಂದು ತಿಳಿಸಿದ್ದಾರೆ. ಈ ಇಬ್ಬರು ವಿದ್ಯಾರ್ಥಿಗಳೊಂದಿಗೆ ಅಮರಜ್ಯೋತಿ ಶಾಲೆಯ ಜಿ.ಅನು ಹಾಗೂ ಕೋಲಾರ ತಾಲೂಕು ಸೀತಿ ಬಿಜಿಎಸ್ ಶಾಲೆಯ ಕೆ.ಎಸ್.ತೇಜಸ್ ಹಾಗೂ ಬಂಗಾರಪೇಟೆ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ನಾರಾಯಣಸ್ವಾಮಿ ೬೨೩ ಅಂಕಗಳೊಂದಿಗೆ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ. ಮೂವರಿಗೆ 623 ಅಂಕ:

ಅಮರಜ್ಯೋತಿ ಶಾಲೆಯ ಜಿ.ಅನು, ಮೊರಾರ್ಜಿದೇಸಾಯಿ ಶಾಲೆಯ ನಾರಾಯಣಸ್ವಾಮಿ ಹಾಗೂ ಕೋಲಾರ ತಾಲೂಕು ಸೀತಿ ಬಿಜಿಎಸ್ ಶಾಲೆಯ ಕೆ.ಎಸ್.ತೇಜಸ್ ೬೨೩ ಅಂಕಗಳೊಂದಿಗೆ ದ್ವಿತೀಯ ಸ್ಥಾನ ಪಡೆದುಕೊಂಡಿದ್ದು, ತೇಜಸ್ ಇಂಗ್ಲೀಷ್‌ನಲ್ಲಿ ೯೮ ಅಂಕ ಪಡೆದಿದ್ದು ಉಳಿದ ಎಲ್ಲಾ ವಿಷಯಗಳಲ್ಲೂ ಶೇ.೧೦೦ರ ಸಾಧನೆ ಮಾಡಿದ್ದಾರೆ, ಈ ವಿದ್ಯಾರ್ಥಿಯ ಸಾಧನೆಯನ್ನು ಶಾಲೆಯ ಕಾರ್ಯದರ್ಶಿ ಹಾಗೂ ಚಿಕ್ಕಬಳ್ಳಾಪುರ ಆದುಚುಂಚನಗಿರಿ ಶಾಖಾ ಮಠದ ಮಂಗಳಾನಂದನಾಥ ಸ್ವಾಮೀಜಿ, ಆಡಳಿತಾಧಿಕಾರಿ ಶಿವರಾಮರೆಡ್ಡಿ ಹಾಗೂ ಮುಖ್ಯಶಿಕ್ಷಕ ಚಂದುಕುಮಾರ್ ಅಭಿನಂದಿಸಿದ್ದಾರೆ.

ಐವರಿಗೆ 622 ಅಂಕ:

ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ೬೨೨ ಅಂಕಗಳೊಂದಿಗೆ ಜಿಲ್ಲೆಗೆ ತೃತೀಯ ಸ್ಥಾನವನ್ನು ನಗರದ ಚಿನ್ಮಯ ಶಾಲೆಯ ಎನ್.ಗಾನಶ್ರೀ, ಅಮರಜ್ಯೋತಿ ಶಾಲೆಯ ಎ.ಕಾವ್ಯಶ್ರೀ, ಶ್ರೀನಿವಾಸಪುರ ವೇಣು ವಿದ್ಯಾಸಂಸ್ಥೆಯ ಎಚ್.ಮಾನ್ಯಶ್ರೀ, ಕೋಲಾರದ ಅಮರಜ್ಯೋತಿ ಶಾಲೆಯ ನಯನ, ಕೋಲಾರದ ವ್ಯಾಲಿ ಪಬ್ಲಿಕ್ ಶಾಲೆಯ ಪ್ರಣವ್ ಪಡೆದುಕೊಂಡಿದ್ದಾರೆ. ತಾಲೂಕುವಾರು ಫಲಿತಾಂಶ:

ಶ್ರೀನಿವಾಸಪುರ ತಾಲೂಕಿನಲ್ಲಿ ೨೩೦೭ ಮಂದಿ ಪರೀಕ್ಷೆ ಬರೆದಿದ್ದು, ೨೧೮೮ ಮಂದಿ ಉತ್ತೀರ್ಣರಾಗಿ ಶೇ.೮೭.೨೯ ಫಲಿತಾಂಶ ಬಂದಿದೆ, ಕೋಲಾರ ತಾಲೂಕಿನಲ್ಲಿ ೪೫೭೨ ಮಂದಿ ಪರೀಕ್ಷೆ ಬರೆದಿದ್ದು, ೩೩೯೪ ಮಂದಿ ಉತ್ತೀರ್ಣರಾಗಿ ಶೇ.೭೪.೨೩ ಫಲಿತಾಂಶ ಬಂದಿದೆ.ಮಾಲೂರು ತಾಲೂಕಿನಲ್ಲಿ ೨೯೮೯ ಮಂದಿ ಪರೀಕ್ಷೆ ಬರೆದಿದ್ದು, ೨೦೭೫ ಮಂದಿ ಉತ್ತೀರ್ಣರಾಗಿ ೬೯.೪೨ ಫಲಿತಾಂಶ ಬಂದಿದೆ. ಮುಳಬಾಗಿಲು ತಾಲೂಕಿನಲ್ಲಿ ೩೦೭೯ ಮಂದಿ ಪರೀಕ್ಷೆ ಬರೆದಿದ್ದು, ೨೦೫೨ ಮಂದಿ ಉತ್ತೀರ್ಣರಾಗಿ ಶೇ.೬.೬೫ ಫಲಿತಾಂಶ ಬಂದಿದ್ದು, ಬಂಗಾರಪೇಟೆಯಲ್ಲಿ ಪರೀಕ್ಷೆ ಬರೆದ ೨೩೫೭ ಮಂದಿ ಪೈಕಿ ೧೩೫೦ ಮಂದಿ ಉತ್ತೀರ್ಣರಾಗಿ ೫೭.೨೮ ಫಲಿತಾಂಶ ಹಾಗೂ ಕೆಜಿಎಫ್ ತಾಲೂಕಿನಲ್ಲಿ ೩೦೮೨ ಮಂದಿ ಪರೀಕ್ಷೆ ಬರೆದಿದ್ದು, ೧೬೫೧ ಮಂದಿ ಉತ್ತೀರ್ಣರಾಗಿ ಶೇ.೫೩.೫೭ ಫಲಿತಾಂಶ ಬಂದಿದೆ. ಜಿಲ್ಲೆಗೆ ಗುಣಾತ್ಮಕ ಫಲಿತಾಂಶ ತಂದುಕೊಟ್ಟ ಎಲ್ಲಾ ವಿದ್ಯಾರ್ಥಿಗಳು, ಶಿಕ್ಷಕರಿಗೆ ಶಾಲಾ ಶಿಕ್ಷಣ ಇಲಾಖೆ ಪರವಾಗಿ ಡಿಡಿಪಿಐ ಕೃಷ್ಣಮೂರ್ತಿ, ಎಸ್ಸೆಸ್ಸೆಲ್ಸಿ ನೋಡಲ್ ಅಧಿಕಾರಿ ಸಗೀರಾ ಅಂಜುಂ, ಶಿಕ್ಷಣಾಧಿಕಾರಿ ವೀಣಾ, ಡಿವೈಪಿಸಿಗಳಾದ ನಾಯಿತ್ ಪಾತಿಮಾ, ರಾಜೇಶ್ವರಿ, ಬಿಇಒಗಳಾದ ಮಧುಮಾಲತಿ, ಪಡುವಣೆ, ಮುನಿಲಕ್ಷ್ಮಯ್ಯ, ಚಂದ್ರಕಲಾ, ಅನಿತಾ, ಗುರುಮೂರ್ತಿ, ರಾಮಚಂದ್ರಪ್ಪ, ವಿಷಯ ಪರಿವೀಕ್ಷಕರಾದ ಶಂಕರೇಗೌಡ, ವೆಂಕಟೇಶಬಾಬು, ಶರಣಪ್ಪ ಅಭಿನಂದನೆ ಸಲ್ಲಿಸಿದ್ದಾರೆ.

ರೈತನ ಮಗಳಿಗೆ 624 ಅಂಕಗಳ ಹಿರಿಮೆ

ಮುಳಬಾಗಿಲು ಪಟ್ಟಣದ ಅಮರಜ್ಯೋತಿ ಶಾಲೆಯ ವಿದ್ಯಾರ್ಥಿನಿ ಎಂ.ರಕ್ಷಾ ಪುರಾಣಪ್ರಸಿದ್ದ ಕುರುಡುಮಲೆಯ ರೈತ ಜಿ.ಮಂಜುನಾಥ್ ಮತ್ತು ಪ್ರತಿಭಾ ದಂಪತಿಗಳ ಪುತ್ರಿಯಾಗಿದ್ದು, ಈಕೆ ಇಂಗ್ಲೀಷ್ ವಿಷಯವೊಂದರಲ್ಲಿ ಮಾತ್ರ ೯೯ ಅಂಕಗಳಿಸಿದ್ದು ಉಳಿದೆಲ್ಲಾ ವಿಷಯಗಳಲ್ಲಿ ಶೇ.೧೦೦ ಸಾಧನೆ ಮಾಡಿದ್ದು, ಶಾಲೆಯ ಅಧ್ಯಕ್ಷ ಕಾಡೇನಹಳ್ಳಿ ನಾಗರಾಜ್, ಕಾರ್ಯದರ್ಶಿ ಅಶೋಕ್ ಹಾಗೂ ಮುಖ್ಯಶಿಕ್ಷಕ ಚೆಂಗಾರೆಡ್ಡಿ ಅಭಿನಂದನೆ ಸಲ್ಲಿಸಿದ್ದಾರೆ.ವೈದ್ಯಕುಟುಂಬದ ಭಾವನಿಕಗೂ 624 ಅಂಕ

ಕೆಜಿಎಫ್ ನಗರದ ಮಹಾವೀರ್ ಜೈನ್ ಶಾಲೆಯ ವಿದ್ಯಾರ್ಥಿನಿ ಎಸ್.ಭಾವನಿಕ ೬೨೪ ಅಂಕಗಳೊಂದಿಗೆ ಜಿಲ್ಲೆಗೆ ಮೊದಲಿಗರಾಗಿ ಹೊರಹೊಮ್ಮಿದ್ದು, ಈ ವಿದ್ಯಾರ್ಥಿನಿ ಎಂ.ಸಂದೀಲ್‌ಕುಮಾರ್, ಬಿ.ಸೂರ್ಯಕಲಾ ದಂಪತಿಗಳ ಪುತ್ರಿಯಾಗಿದ್ದು, ಈಕೆಯೂ ಇಂಗ್ಲೀಷ್ ವಿಷಯದಲ್ಲಿ ಮಾತ್ರ ೯೯ ಅಂಕ ಪಡೆದಿದ್ದು, ಉಳಿದೆಲ್ಲಾ ವಿಷಯಗಳಲ್ಲೂ ಶೇ.೧೦೦ ಸಾಧನೆ ಮಾಡಿದ್ದು, ಟಾಫರ್ಸ್‌ ಆಗಿರುವ ಈ ಇಬ್ಬರು ವಿದ್ಯಾರ್ಥಿನಿಯರು ವೈದ್ಯರಾಗುವ ಆಸೆ ವ್ಯಕ್ತಪಡಿಸಿದ್ದಾರೆ.