ಸಾರಾಂಶ
ಫಾರ್ಚೂನರ್ ಕಾರ್ ಕದ್ದ ಆರೋಪಿಯನ್ನು ಬಂಧಿಸಿ, ವಾಹನ ವಶಕ್ಕೆ ಪಡೆದ ದಾವಣಗೆರೆ ವಿದ್ಯಾನಗರ ಪೊಲೀಸ್ ಠಾಣೆ ಅಧಿಕಾರಿಗಳು, ಸಿಬ್ಬಂದಿ ತಂಡ.
ಕನ್ನಡಪ್ರಭ ವಾರ್ತೆ ದಾವಣಗೆರೆ
ಹಣ್ಣಿನ ವ್ಯಾಪಾರಿಯೊಬ್ಬರು ಹಣ್ಣನ್ನು ಹಾಕಲು ಸೆಲ್ಲರ್‌ನಲ್ಲಿ ನಿಲ್ಲಿಸಿದ್ದ ಕಾರನ್ನು ಕಳವು ಮಾಡಿದ್ದ ಪ್ರಕರಣವನ್ನು ಶುಕ್ರವಾರ ವಿದ್ಯಾನಗರ ಪೊಲೀಸರು ಕೇವಲ 24 ಗಂಟೆಯಲ್ಲೇ ಭೇದಿಸಿದ್ದು, ₹10 ಲಕ್ಷ ಮೌಲ್ಯದ ಕಾರಿನ ಸಮೇತ ಆರೋಪಿಯನ್ನು ಬಲೆಗೆ ಕೆಡವಿದ್ದಾರೆ.ನಗರದ ಪತೇಹ್ ಅಹಮ್ಮದ್ ಅಲಿಯಾಸ್ ಪತ್ತೆ ಪೈಲ್ವಾನ್ (30) ಬಂಧಿತ ಆರೋಪಿ. ಮತ್ತೊಬ್ಬ ಆರೋಪಿ ಪರಾರಿಯಾಗಿದ್ದಾನೆ.
ಶುಕ್ರವಾರ ಬಾಲಾಜಿ ಬಡಾವಣೆ ವಾಸಿ, ಹಣ್ಣಿನ ವ್ಯಾಪಾರಿ ಎಚ್.ಎಸ್.ಚಂದನ್ ಎಂಬವರು ಶಿವಗಂಗಾ ಕನ್ವೆನ್ಷನ್ ಹಾಲ್ ಸಮೀಪದ ಸೆಲ್ಲರ್ ಬಳಿ ಟೊಯೋಟಾ ಫಾರ್ಚೂನರ್ ಕಾರ್ ನಿಲ್ಲಿಸಿ, ಹಣ್ಣು ತುಂಬಲು ತಮ್ಮ ಕೆಲಸಗಾರ ಹುಡುಗನಿಗೆ ಹೇಳಿ, ಸ್ನಾನಕ್ಕೆಂದು ಮನೆಗೆ ತೆರಳಿದ್ದರು. ಈ ವೇಳೆ ಬೈಕ್‌ನಲ್ಲಿ ಅಲ್ಲಿಗೆ ಬಂದ ಇಬ್ಬರ ಪೈಕಿ ಓರ್ವ ಕಾರ್ ಕಳವು ಮಾಡಿದರೆ, ಮತ್ತೊಬ್ಬ ಬೈಕ್‌ನಲ್ಲಿ ಪರಾರಿಯಾಗಿದ್ದಾನೆ.ಈ ಬಗ್ಗೆ ಚಂದನ್ ವಿದ್ಯಾನಗರ ಠಾಣೆಗೆ ದೂರು ನೀಡಿದ್ದರು. ಎಎಸ್‌ಪಿಗಳಾದ ವಿಜಯಕುಮಾರ ಎಂ. ಸಂತೋಷ, ಜಿ.ಮಂಜುನಾಥ, ಡಿವೈಎಸ್‌ಪಿ ಮಲ್ಲೇಶ ದೊಡ್ಮನಿ, ವಿದ್ಯಾನಗರ ಠಾಣೆ ಇನ್‌ಸ್ಪೆಕ್ಟರ್ ವೈ.ಎಸ್. ಶಿಲ್ಪಾ ಮಾರ್ಗದರ್ಶನದಲ್ಲಿ ಪಿಎಸ್‌ಗಳಾದ ಜಿ.ಎನ್.ವಿಶ್ವನಾಥ, ಎಂ.ವಿಜಯ್ ಹಾಗೂ ಸಿಬ್ಬಂದಿ ಕಾರು ಕದ್ದಿದ್ದ ಆರೋಪಿಯನ್ನು ಹರಿಹರದಲ್ಲಿ ಸೆರೆಹಿಡಿದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದರು.
ಫಾರ್ಚೂನರ್ ಕಾರು ಕದ್ದ ಆರೋಪಿ ಫತೇಹ್ ಅಹಮ್ಮದ್ ಅಲಿಯಾಸ್ ಪತ್ತೆ ಪೈಲ್ವಾನ್ ಹರಿಹರ ನಗರದ ಕೋಟೆ ಆಂಜನೇಯ ದೇವಸ್ಥಾನ ಸಮೀಪದ ಚರ್ಚ್ ರಸ್ತೆಯಲ್ಲಿ ಬೈಕ್‌ಗೆ ಅಪಘಾತಪಡಿಸಿದ್ದನು. ಈ ಬಗ್ಗೆ ಹರಿಹರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಫತೇಹ್ ಅಹಮ್ಮದ್ ಮೇಲೆ ಈ ಹಿಂದೆ ಹರಿಹರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಕಾರಿನ ಸಮೇತ ಆರೋಪಿಯನ್ನು ಪತ್ತೆ ಮಾಡಿದ ಮೇಲಧಿಕಾರಿಗಳು ಹಾಗೂ ವಿದ್ಯಾ ನಗರ ಠಾಣೆ ಸಿಬ್ಬಂದಿ ಶಂಕರ ಜಾಧವ್, ಎಂ.ಆನಂದ, ಭೋಜಪ್ಪ, ಚಂದ್ರಪ್ಪ, ಗೋಪಿನಾಥ ನಾಯ್ಕ, ಬಸವರಾಜ, ಕೆ.ಎಚ್.ಅಮೃತ್, ನವೀನ ಮಲ್ಲನಗೌಡ, ಮಾರಪ್ಪ ಮತ್ತು ಕೊಟ್ರೇಶ, ಸ್ಮಾರ್ಟ್ ಸಿಟಿ ಕಚೇರಿ ಸಿಬ್ಬಂದಿ ಮಾರುತಿ, ಸೋಮು, ರಾಘವೇಂದ್ರರ ಅವರನ್ನು ಜಿಲ್ಲಾ ಎಸ್‌ಪಿ ಉಮಾ ಪ್ರಶಾಂತ ಶ್ಲಾಘಿಸಿದ್ದಾರೆ.