ಸಾರಾಂಶ
ಚನ್ನಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ನಂತರ ವಾರಸುದಾರರಿಗೆ ಇಬ್ಬರ ಮೃತದೇಹವನ್ನು ಒಪ್ಪಿಸಲಾಗಿದೆ. ಈ ಸಂಬಂಧ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕನ್ನಡಪ್ರಭ ವಾರ್ತೆ ಚನ್ನಪಟ್ಟಣ
ಲಾರಿಗೆ ಫಾರ್ಚುನರ್ ಕಾರು ಡಿಕ್ಕಿ ಹೊಡೆದು ಕಾರಿನಲ್ಲಿದ್ದ ಇಬ್ಬರು ಮೃತಪಟ್ಟು ಇನ್ನಿಬ್ಬರು ಗಾಯಗೊಂಡಿರುವ ಘಟನೆ ತಾಲೂಕಿನ ಕೋಲೂರು ಗೇಟ್ ಬ್ರಿಡ್ಜ್ ಬಳಿ ಬೆಂ-ಮೈ ಎಕ್ಸ್‌ಪ್ರೆಸ್ ವೇನಲ್ಲಿ ಸಂಭವಿಸಿದೆ.ಗೋವಾದ ಡಾರೇಲ್ ನೋವ ಆಲೇನ್ ವೇಜ್ (೫೬), ರಾಸ್ ಫ್ರಾನ್ಸಿಸ್ ವೇಜ್ (೪೪) ಮೃತಪಟ್ಟವರು. ಇವರೊಂದಿಗೆ ಕಾರಿನಲ್ಲಿದ್ದ ನೀಲ್ ಫರಿಯೋ ಹಾಗೂ ರಾಸ್ ಪ್ರಾನ್ಸಿಸ್‌ರವರ ಪುತ್ರ ನತನ್ ರೆಟ್‌ಮಿಮಜೋ ವೇಜ್‌ಗೆ ಸಣ್ಣಪುಟ್ಟ ಗಾಯವಾಗಿದೆ. ಗೋವಾದಿಂದ ಊಟಿಗೆ ಪ್ರವಾಸ ಹೊರಟ್ಟಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ.
ಗೋವಾದಿಂದ ಊಟಿ ಪ್ರವಾಸಕ್ಕೆ ಹೋಗಲು ಬೆಂಗಳೂರು ಮಾರ್ಗವಾಗಿ ಮೈಸೂರಿಗೆ ತೆರಳುತ್ತಿದ್ದ ಇವರಿದ್ದ ಫಾರ್ಚನರ್ ಕಾರು ಚನ್ನಪಟ್ಟಣದ ಕೋಲೂರು ಗೇಟ್ ಬ್ರಿಡ್ಜ್ ಬಳಿ ಹೋಗುವಾಗ, ಎಕ್ಸ್‌ಪ್ರೆಸ್ ಹೈವೇನಲ್ಲಿ ಚಲಿಸುತಿದ್ದ ಲಾರಿಯನ್ನು ಚಾಲಕ ಯಾವುದೇ ಮುನ್ಸೂಚನೆ ನೀಡದ ಏಕಾಏಕಿ ಮಧ್ಯದ ಲೇನ್‌ಗೆ ಬಲಭಾಗಕ್ಕೆ ತಿರುಗಿಸಿದ್ದಾನೆ.ಈ ವೇಳೆ ಇವರು ಚಲಿಸುತ್ತಿದ್ದ ಕಾರು ಲಾರಿಯ ಹಿಂಭಾಗಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಕಾರು ಜಖಂಗೊಂಡಿದೆ. ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಡಾರೇಲ್ ನೋವ ಆಲೇನ್ ವೇಜ್ ಹಾಗೂ ರಾಸ್ ಫ್ರಾನ್ಸಿಸ್ ವೇಜ್ ಅವರನ್ನು ಸಮೀಪದ ಚಾಮುಂಡೇಶ್ವರಿ ಆಸ್ಪತ್ರೆಗೆ ತೆಗೆದುಕೊಂಡು ಹೋಗಲಾಯಿತಾದರೂ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ಚನ್ನಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ನಂತರ ವಾರಸುದಾರರಿಗೆ ಇಬ್ಬರ ಮೃತದೇಹವನ್ನು ಒಪ್ಪಿಸಲಾಗಿದೆ. ಈ ಸಂಬಂಧ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.