ಸಾರಾಂಶ
ಮೌನ ಕಾಂತಿಯಾಗಿ ಕಾರ್ಯನಿರ್ವಹಿಸಿದ ಡಾ. ಮನಮೋಹನ್ ಸಿಂಗ್ ದೇಶದ ಆರ್ಥಿಕತೆಯಲ್ಲಿ ಹೊಸ ದಿಕ್ಕು ತೋರಿದ ಶ್ರೇಷ್ಠ ನಾಯಕರಲ್ಲಿ ಒಬ್ಬರು
ಕನ್ನಡಪ್ರಭ ವಾರ್ತೆ ಮೈಸೂರು
ಕರ್ನಾಟಕ ರಾಜ್ಯ ಪಿಯು ಕಾಲೇಜುಗಳ ಅರ್ಥಶಾಸ್ತ್ರ ಉಪನ್ಯಾಸಕರ ಹಾಗೂ ಪ್ರಾಂಶುಪಾಲರ ವೇದಿಕೆ ಹಾಗೂ ರಾಮನ್ ಇನ್ ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಸಹಯೋಗದಲ್ಲಿ ಡಾ. ಮನಮೋಹನ್ ಸಿಂಗ್ ಅವರ ಶ್ರದ್ಧಾಂಜಲಿ ಕಾರ್ಯಕ್ರಮ ಶುಕ್ರವಾರ ನಡೆಯಿತು.ಈ ವೇಳೆ ಮನಮೋಹನ್ ಸಿಂಗ್ ಅವರನ್ನು ಸ್ಮರಿಸಿ, ಅವರ ಆದರ್ಶ, ಸಾಧನೆ, ಮತ್ತು ದೇಶಸೇವೆ ಬಗ್ಗೆ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಲಾಯಿತು.
ಶ್ರದ್ಧಾಂಜಲಿ ಸಭೆಯಲ್ಲಿ ಅವರ ಸಾಧನೆಯ ನುಡಿನಮನ ಸಲ್ಲಿಸಿದ ನಿವೃತ್ತ ಪ್ರಾಂಶುಪಾಲ ನಾಗೇಗೌಡ ಮಾತನಾಡಿ, ಡಾ. ಮನಮೋಹನ್ ಸಿಂಗ್ ಅವರ ಆರ್ಥಿಕ ಸುಧಾರಣೆ, ದೇಶದ ಆರ್ಥಿಕತೆಯನ್ನು ಗಟ್ಟಿಗೊಳಿಸಲು ಅವರ ಪ್ರಾಮುಖ್ಯ ಪಾತ್ರ ಮತ್ತು ಸುಸ್ಥಿರ ಅಭಿವೃದ್ಧಿಗೆ ನೀಡಿದ ಕೊಡುಗೆಗಳನ್ನು ಸ್ಮರಿಸಿದರು.ನಿವೃತ್ತ ಪ್ರಾಂಶುಪಾಲ ಕಾಡ್ನೂರು ಶಿವೇಗೌಡ ಮಾತನಾಡಿ, ಮೌನ ಕಾಂತಿಯಾಗಿ ಕಾರ್ಯನಿರ್ವಹಿಸಿದ ಡಾ. ಮನಮೋಹನ್ ಸಿಂಗ್ ದೇಶದ ಆರ್ಥಿಕತೆಯಲ್ಲಿ ಹೊಸ ದಿಕ್ಕು ತೋರಿದ ಶ್ರೇಷ್ಠ ನಾಯಕರಲ್ಲಿ ಒಬ್ಬರು. ಅವರ ಆರ್ಥಿಕತೆಯ ದಿಗ್ವಿಜಯಕ್ಕೆ ನೀಡಿದ ಶ್ರಮ ಮಾತ್ರವಲ್ಲ, ಬಡವರಿಗೆ ತಲುಪುವಂತೆ ಮಾಡಿದ ಸುಧಾರಣೆ ಮಾದರಿಯಾಗಿದೆ. ಇಂತಹ ನಾಯಕನಿಂದ ಸಮಾಜದ ಋಣ ತೀರಿಸಲು ಆಡಳಿತ ನಡೆಸುವವರು, ನಾವು, ಯುವ ಪೀಳಿಗೆ ಪ್ರೇರಣೆ ಪಡೆಯಬೇಕು ಎಂದರು.
ರಾಮನ್ ಸಂಸ್ಥೆಯ ಗೋಪಿನಾಥ್ ಮಾತನಾಡಿ, ಡಾ. ಮನಮೋಹನ್ ಸಿಂಗ್ ಅವರು ಆರ್ಥಿಕತೆ ಮಾತ್ರವಲ್ಲ, ತಂತ್ರಜ್ಞಾನದ ಅಭಿವೃದ್ಧಿಗೂ ಬದ್ಧರಾಗಿದ್ದರು. ಹೊಸ ತಂತ್ರಜ್ಞಾನಗಳನ್ನು ಅರ್ಥಶಾಸ್ತ್ರದ ಜತೆಗೆ ಹೊಂದಾಣಿಕೆ ಮಾಡಲು ಅವರು ತೆಗೆದುಕೊಂಡ ಹೆಜ್ಜೆ ಆದರ್ಶಪ್ರಾಯ ಎಂದು ಹೇಳಿದರು.ಹಲಗನಹಳ್ಳಿ ಕಾಲೇಜು ಪ್ರಾಂಶುಪಾಲ ಡಿ.ಎ. ದಿನೇಶ್, ಗಾವಡಗೆರೆ ಕಾಲೇಜಿನ ಜನಾರ್ಧನ, ಕಾರ್ಯ ಕಾಲೇಜಿನ ನಾಗರಾಜ್, ಹಿರಿಯ ಉಪನ್ಯಾಸಕರಾದ ಸಿ.ಜೆ. ರೇವಣ್ಣ, ಲೋಕೇಶ್ ಹೆಬ್ಬಾಳು, ಗೋಪಾಲ್ ಇಲವಾಲ ಮತ್ತು ವೆಂಕಟೇಶ್ ಅವರು ಡಾ. ಮನಮೋಹನ್ ಸಿಂಗ್ ಅವರ ವ್ಯಕ್ತಿತ್ವ ಹಾಗೂ ಸೇವೆಯನ್ನು ಸ್ಮರಿಸಿದರು.