ಕಲೆ ಸಾಹಿತ್ಯ ಸಂಸ್ಕೃತಿ ಉಳಿಸಿ ಬೆಳೆಸುವ ಕಾರ್ಯ ಕೈಗೊಂಡರೆ ಎಲ್ಲ ಬಗೆಯ ಬೆಳವಣಿಗೆ ಎಲ್ಲ ರಂಗದಲ್ಲಿ ಕಾಣಬಹುದಾಗಿದೆ ಎಂದು ಹಿರೇಮಠಾಧ್ಯಕ್ಷ ಯೋಗಿರಾಜೇಂದ್ರ ಶಿವಾಚಾರ್ಯ ಸ್ವಾಮೀಜಿ ಹೇಳಿದರು
ಕೊಟ್ಟೂರು: ಕಲೆ ಸಾಹಿತ್ಯ ಸಂಸ್ಕೃತಿ ಉಳಿಸಿ ಬೆಳೆಸುವ ಕಾರ್ಯ ಕೈಗೊಂಡರೆ ಎಲ್ಲ ಬಗೆಯ ಬೆಳವಣಿಗೆ ಎಲ್ಲ ರಂಗದಲ್ಲಿ ಕಾಣಬಹುದಾಗಿದೆ ಎಂದು ಹಿರೇಮಠಾಧ್ಯಕ್ಷ ಯೋಗಿರಾಜೇಂದ್ರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಇಲ್ಲಿನ ಎಪಿಎಂಸಿ ಬಯಲು ಆವರಣದಲ್ಲಿ ಕಲ್ಪತರು ಕಲಾ ಟ್ರಸ್ಟ್‌ನವರು ಆಯೋಜಿಸಿದ್ದ 80ನೇ ಸ್ವಾತಂತ್ರ್ಯೋತ್ಸವ ಮತ್ತು ಕಲ್ಪತರು ಕಲಾ ಟ್ರಸ್ಟ್‌ನ 5ನೇ ವಾರ್ಷಿಕೋತ್ಸವ ಉದ್ಘಾಟಿಸಿ ಮಾತನಾಡಿದರು. ಸಂಸ್ಕೃತಿ ರಾಷ್ಟ್ರದ ಪ್ರತಿ ಪ್ರದೇಶಗಳಲ್ಲಿ ಹಾಸುಹೊಕ್ಕಾಗಿದ್ದು, ಈ ಪಳಿಯುಳಿಕೆ ಎಲ್ಲ ಪ್ರದೇಶಗಳಲ್ಲಿ ವಿಸ್ತಾರಗೊಂಡು ಯಾವುದೇ ತೆರನಾದ ಧಕ್ಕೆ ಸಂಸ್ಕೃತಿ ಸಾಹಿತ್ಯ ಕಲೆಗೆ ಬಾರದಂತೆ ನೋಡಿಕೊಂಡಿರುವುದು ರಾಷ್ಟ್ರದ ಘಟ್ಟಿತನ ತೋರಿಸುತ್ತದೆ. ಈ ನಿಟ್ಟಿನಲ್ಲಿ ಕಲಾ ಟ್ರಸ್ಟ್‌ನವರು ಹಮ್ಮಿಕೊಂಡು ಬರುತ್ತಿರುವ ಇಂತಹ ಕಾರ್ಯಕ್ರಮ ಯಶಸ್ವಿಯಾಗಿ ಸಾಗಿರುವುದು ಕಲೆಯ ಅಭಿಮಾನ ಮತ್ತು ಗೌರವದ ಬೆಲೆ ತೋರಿಸುತ್ತದೆ ಎಂದರು.ಯುವ ಮುಖಂಡ ಎಂ.ಎಂ.ಜೆ. ಶೋಭಿತ್ ಮಾತನಾಡಿ, ಕಲ್ಪತರು ಕಲಾ ಟ್ರಸ್ಟ್‌ನವರು ಪ್ರತಿವರ್ಷ ಹೊಸ ಬಗೆಯ ರೀತಿಯಲ್ಲಿ ಸಂಸ್ಕೃತಿಯನ್ನು ಬೆಳೆಸುವ ಕಾರ್ಯ ಮಾಡುತ್ತಿದ್ದು, ಇದರ ಎಲ್ಲ ಕಾರ್ಯಕ್ರಮಕ್ಕೆ ಬೆಂಬಲವಾಗಿ ಸದಾ ನಿಲ್ಲುವೆ ಎಂದರು.
ಬಿ.ಡಿ.ಸಿ.ಸಿ. ಬ್ಯಾಂಕ್ ಉಪಾಧ್ಯಕ್ಷ ಐ. ದಾರುಕೇಶ ಮಾತನಾಡಿ, ಕೊಟ್ಟೂರು ಸೇರಿದಂತೆ ಜಿಲ್ಲೆಯ ಸಂಸ್ಕೃತಿ ಸಾಹಿತ್ಯ ಕಲೆಗೆ ಎಲ್ಲ ಪ್ರದೇಶಗಳಲ್ಲಿ ಪ್ರೋತ್ಸಾಹ ದೊರಕುತ್ತಿರುವುದು ಜನರಲ್ಲಿಯ ಆಸಕ್ತಿಯನ್ನು ತೋರುತ್ತದೆ. ಕಲ್ಪತರು ಕಲಾ ಟ್ರಸ್ಟ್‌ನವರು ಜಿಲ್ಲೆಯ ಉತ್ಸವಗಳು ನಡೆದಿರುವಂತೆಯೇ ಕೊಟ್ಟೂರು ಉತ್ಸವವನ್ನು ಹಮ್ಮಿಕೊಳ್ಳಲು ಮುಂದಾದರೆ ಬೆಂಬಲಿಸುವುದಾಗಿ ಹೇಳಿದರು.ಕಲ್ಪತರು ಕಲಾ ಪ್ರಶಸ್ತಿಯನ್ನು ಹೊಸಪೇಟೆಯ ಎಸ್.ಅಂಜು, ಕೊಟ್ಟೂರಿನ ಶೀಲಾ ಮಹದೇವ, ಸಿಂಧೂ ಗಿರೀಶ, ಕೆ. ಪ್ರಿಯಾಂಕ ಯುವರಾಜ, ಶ್ರೀನಿವಾಸ ಶ್ಯಾನುಭೋಗರ, ಈಶಪ್ಪ, ಪತ್ರಕರ್ತ ಡಿ. ಮಂಜುನಾಥ ಮತ್ತಿತರರಿಗೆ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದ ನಂತರ ಕನ್ನಡ ಸಂಸ್ಕೃತಿ ಇಲಾಖೆ ಸಹ ಯೋಗದಲ್ಲಿ ಭರತನಾಟ್ಯ ಕಲಾಕೇಂದ್ರದಿಂದ ಭರತನಾಟ್ಯ ಪ್ರದರ್ಶನ, ಸಮೂಹ ನೃತ್ಯ ಪ್ರದರ್ಶನ, ಅರ್ಪಿತ ತಂಡದಿಂದ ಮತ್ತಿತರ ಕಾರ್ಯಕ್ರಮಗಳು ನಡೆದವು. ಕಲ್ಪತರು ಕಲಾ ಟ್ರಸ್ಟ್ ಅಧ್ಯಕ್ಷ ಚಿಗಟೇರಿ ಕೊಟ್ರೇಶ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಿ.ಎಂ. ಈಶ್ವರಯ್ಯ ಸ್ವಾಗತಿಸಿದರು. ಶಿಕ್ಷಕ ಕೆ.ಬಿ. ಸಿದ್ದರಾಮೇಶ್ವರ ನಿರೂಪಿಸಿದರು.