ಮೂಲ್ಕಿ ತ್ಯಾಜ್ಯ ಸಂಗ್ರಹಣಾ ಕೇಂದ್ರದ ಪರಿಸರದಲ್ಲಿ ದುರ್ವಾಸನೆ: ಪಂಚಾಯಿತಿಗೆ ಗ್ರಾಮಸ್ಥರಿಂದ ದೂರು

| Published : Dec 03 2024, 12:34 AM IST

ಮೂಲ್ಕಿ ತ್ಯಾಜ್ಯ ಸಂಗ್ರಹಣಾ ಕೇಂದ್ರದ ಪರಿಸರದಲ್ಲಿ ದುರ್ವಾಸನೆ: ಪಂಚಾಯಿತಿಗೆ ಗ್ರಾಮಸ್ಥರಿಂದ ದೂರು
Share this Article
  • FB
  • TW
  • Linkdin
  • Email

ಸಾರಾಂಶ

ಮೂಲ್ಕಿ ನಗರ ಪಂಚಾಯಿತಿ ವ್ಯಾಪ್ತಿಯ ಮೆಡಲಿನ್ ಶಾಲೆಯ ಬಳಿ ಕಾರ್ಯಾಚರಿಸುತ್ತಿರುವ ತ್ಯಾಜ್ಯ ಸಂಗ್ರಹಣಾ ಕೇಂದ್ರದ ಪರಿಸರ ದುರ್ವಾಸನೆಯುಕ್ತ ವಾತಾವರಣ ಸೃಷ್ಟಿಯಾಗಿದ್ದು, ತ್ಯಾಜ್ಯ ನೀರು ರಸ್ತೆಯಲ್ಲಿ ಹರಿಯುತ್ತಿದ್ದು ರೋಗಗಳ ಭೀತಿ ಎದುರಾಗಿದೆ ಎಂದು ಮಾನಂಪಾಡಿ ಗ್ರಾಮಸ್ಥರು ಮೂಲ್ಕಿ ನಗರ ಪಂಚಾಯಿತಿಗೆ ದೂರು ನೀಡಿದ್ದಾರೆ.

ಕನ್ನಡಪ್ರಭವಾರ್ತೆ ಮೂಲ್ಕಿ

ಮೂಲ್ಕಿ ನಗರ ಪಂಚಾಯಿತಿ ವ್ಯಾಪ್ತಿಯ ಮೆಡಲಿನ್ ಶಾಲೆಯ ಬಳಿ ಕಾರ್ಯಾಚರಿಸುತ್ತಿರುವ ತ್ಯಾಜ್ಯ ಸಂಗ್ರಹಣಾ ಕೇಂದ್ರದ ಪರಿಸರ ದುರ್ವಾಸನೆಯುಕ್ತ ವಾತಾವರಣ ಸೃಷ್ಟಿಯಾಗಿದ್ದು, ತ್ಯಾಜ್ಯ ನೀರು ರಸ್ತೆಯಲ್ಲಿ ಹರಿಯುತ್ತಿದ್ದು ರೋಗಗಳ ಭೀತಿ ಎದುರಾಗಿದೆ ಎಂದು ಮಾನಂಪಾಡಿ ಗ್ರಾಮಸ್ಥರು ಮೂಲ್ಕಿ ನಗರ ಪಂಚಾಯಿತಿಗೆ ದೂರು ನೀಡಿ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

ಈ ಸಂದರ್ಭ ಮೂಲ್ಕಿ ನ.ಪಂ. ಅಧ್ಯಕ್ಷ ಸತೀಶ್ ಅಂಚನ್ ಮಾತನಾಡಿ, ಮೂಲ್ಕಿ ನ. ಪಂ.ನ 11 ವಾರ್ಡ್ ಗಳ ಕಸ ತ್ಯಾಜ್ಯ ಇದೇ ಡಂಪಿಂಗ್ ಯಾರ್ಡ್ ನಲ್ಲಿ ವಿಲೇವಾರಿ ಯಾಗುತ್ತಿದ್ದು ಹಸಿ ಕಸ ಒಣ ಕಸ ಬೇರ್ಪಡಿಸಲು ಗ್ರಾಮಸ್ಥರು ಸಹಕರಿಸದೆ ಸಮಸ್ಯೆಯಾಗಿದೆ. ಅಲ್ಲದೆ ಕಳೆದ ವರ್ಷಗಳ ಹಿಂದೆ ಡಂಪಿಂಗ್ ಯಾರ್ಡ್ ನಲ್ಲಿ ಹಾಕಿರುವ ಕಸದ ರಾಶಿ ಇನ್ನೂ ವಿಲೇವಾರಿಯಾಗಿಲ್ಲ ಹಾಗೂ ನ.ಪಂ.ನಲ್ಲಿ ಅನುದಾನದ ಕೊರತೆ ಇದ್ದು ಈ ಬಗ್ಗೆ ಕೂಡಲೇ ಈ ಬಗ್ಗೆ ಗಮನ ಹರಿಸಿ ಕಸ ತ್ಯಾಜ್ಯ ವಿಲೇವಾರಿಗೆ ಪ್ರಯತ್ನಿಸಲಾಗುವುದು ಎಂದರು. ಈ ಸಂದರ್ಭ ಕಸದ ತ್ಯಾಜ್ಯ ನೀರು ರಸ್ತೆಯಲ್ಲಿ ಹರಿಯುತ್ತಿರುವ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದರು.

ಮುಖ್ಯಾಧಿಕಾರಿ ಮಧುಕರ್ ಮಾತನಾಡಿ, ಡಂಪಿಂಗ್ ಯಾರ್ಡ್ ಒಳಗೆ ಚರಂಡಿ ಬ್ಲಾಕ್ ಆಗಿರುವ ಸಾಧ್ಯತೆ ಇದ್ದು ಕೂಡಲೇ ಸ್ಥಳ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಅವ್ಯವಸ್ಥೆಯನ್ನು ಕೂಡಲೇ ಸರಿಪಡಿಸುವಂತೆ ಅಧ್ಯಕ್ಷರಿಗೆ ಗ್ರಾಮಸ್ಥರು ಮನವಿ ಸಲ್ಲಿಸಿದರು. ಈ ಸಂದರ್ಭ ಮೂಲ್ಕಿ ನ.ಪಂ. ಸದಸ್ಯ ಪುತ್ತು ಬಾವ, ಸುಭಾಷ್ ಶೆಟ್ಟಿ, ಆರೋಗ್ಯಾಧಿಕಾರಿ ಶಶಿರೇಖಾ, ಮೂಲ್ಕಿ ಗೌಡ ಸಾರಸ್ವತ ಬ್ರಾಹ್ಮಣ ಸಭಾದ ಅಧ್ಯಕ್ಷ ಸತ್ಯೇಂದ್ರ ಶೆಣೈ, ಶಿವಾನಂದ ಪ್ರಭು, ಸವಿತಾ ಬಾಳಿಗ, ವಿಶ್ವನಾಥ ಶೆಣೈ ಮತ್ತಿತರರು ಉಪಸ್ಥಿತರಿದ್ದರು.