ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ದಸರಾ ಮಹೋತ್ಸವದ ಬಳಿಕ ಕರ್ನಾಟಕ ರಾಜ್ಯ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿವಿಯ ಎರಡು ವರ್ಷದ ಘಟಿಕೋತ್ಸವ ಆಯೋಜಿಸುವುದಾಗಿ ಕುಲಪತಿ ಪ್ರೊ. ನಾಗೇಶ್ ವಿ.ಬೆಟ್ಟಕೋಟೆ ತಿಳಿಸಿದರು.ನಗರದ ಸಂಗೀತ ವಿವಿಯಲ್ಲಿ ಮಂಗಳವಾರ ಆಯೋಜಿಸಿದ್ದ ಸಂಸ್ಥಾಪನಾ ದಿನಾಚರಣೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ಸಂಗೀತ ವಿವಿಯ ಎರಡು ವರ್ಷದ ಘಟಿಕೋತ್ಸವ ಬಾಕಿ ಇದೆ. ಈ ಘಟಿಕೋತ್ಸವವನ್ನು ದಸರಾ ಬಳಿಕ ನಡೆಸಲಾಗುವುದು. ಹಂಪಿ ವಿವಿಯಲ್ಲಿ ಕುಲಪತಿಯಾಗಿದ್ದ ಡಾ. ಕಂಬಾರರು ಸಂಸ್ಥಾಪನಾ ದಿನದಂದೇ ಘಟಿಕೋತ್ಸವವನ್ನೂ ನಡೆಸಿದ್ದರಂತೆ. ಈ ವಿಷಯ ಗೊತ್ತಿದ್ದರೆ ನಾನು ಇಂದೇ ಘಟಿಕೋತ್ಸವ ಕಾರ್ಯಕ್ರಮ ಮಾಡಿ ಮುಗಿಸುತ್ತಿದ್ದೆ ಎಂದರು.
ಯಶಸ್ವಿ ಕಾರ್ಯ ನಿರ್ವಹಣೆ:ಸಂಗೀತ ವಿವಿಗೆ ಕಾಯಂ ನೌಕರರು ಮತ್ತು ಅಧಿಕಾರಿಗಳು ಇಲ್ಲದೆಯೂ ಯಶಸ್ವಿಯಾಗಿ ಕಾರ್ಯ ನಿರ್ವಹಿಸಿದೆ. ಅರೆಕಾಲಿಕ ಸಿಬ್ಬಂದಿ ಜತೆ ಕೆಲಸ ಮಾಡಿಯೇ 17 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಪದವಿ ನೀಡಿದೆ. ಮೂಲಭೂತ ಸೌಲಭ್ಯ ಇಲ್ಲದೆಯೂನಾವು 13 ಸಾವಿರ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸಿದ್ದೇವೆ. ವಿವಿಗೆ ಅಗತ್ಯವಿರುವ ವೇತನದ ಸಂಪನ್ಮೂಲ ಕ್ರೋಢೀಕರಣಕ್ಕೂ ಸಿದ್ಧತೆ ಮಾಡಿಕೊಂಡಿದ್ದೇವೆ ಎಂದರು.
ಎಲ್ಲರೂ ಕುಲಪತಿಯಾಗಿ ಕಚೇರಿಯಲ್ಲಿ ಕುಳಿತು ಕೆಲಸ ಮಾಡುತ್ತಾರೆ. ಆದರೆ ನಾನು ನೌಕರನಾಗಿ 7 ವರ್ಷ ಕಾರ್ಯ ನಿರ್ವಹಿಸಿದ್ದೇನೆ. ಕುಲಸಚಿವನಾಗಿದ್ದಾಗ ಅನೇಕ ಸಮಸ್ಯೆ ಎದುರಾಯಿತು. ಈಗ ಕುಲಪತಿಯಾಗಿ ಪೂರ್ಣ ಅವಧಿಯಲ್ಲಿ ಸೌಲಭ್ಯದ ಕೊರತೆಯ ನಡುವೆಯೂ ವಿದ್ವಾಂಸರು ಶ್ಲಾಘಿಸುವಂತಹ ಕೆಲಸಗಳನ್ನು ವಿವಿ ಮಾಡಿದೆ.ಉತ್ತಮ ನೆರವು:
ಹುಬ್ಬಳ್ಳಿ ಗುರುಕುಲ, ದೇವರಹಳ್ಳಿ ಗುರುಕುಲವನ್ನು ನಾವೇ ನಿರ್ವಹಿಸುತ್ತಿದ್ದೇವೆ. ಹಿಂದುಳಿದ ವರ್ಗ ಇಲಾಖೆ ಇದಕ್ಕೆ ಉತ್ತಮ ನೆರವು ನೀಡುತ್ತದೆ. ಡ್ಯಾನ್ಸ್ ಆನ್ ವ್ಹೀಲ್ ಜತೆ ಒಪ್ಪಂದ ಮಾಡಿಕೊಂಡಿದೆ. ಜೂನಿಯರ್, ಸೀನಿಯರ್ ಪರೀಕ್ಷೆ ನಡೆಸಿ ವಿದ್ವಾಂಸರಿಂದ ಉತ್ತಮ ಸ್ಪಂದನೆ ದೊರಕಿದೆ. ಡೋಲು ಮತ್ತು ಮಂಗಳವಾದ್ಯ ಕಲಿಕಾ ಕೇಂದ್ರದ ಬಳಿ ಶಬ್ದ ಜೋರಾಗುವುದರಿಂದ ನೆರ ಹೊರೆಯವರಿಗೆ ಕಿರಿಕಿರಿ ತಪ್ಪಿಸಲು ಶಬ್ದ ನಿಯಂತ್ರಿಸುವ ಹವಾನಿಯಂತ್ರಿತ ಕೊಠಡಿ ವ್ಯವಸ್ಥೆಯನ್ನು ಸರ್ಕಾರ ಮಾಡಿಕೊಟ್ಟಿದೆ. ನಾನು ಕುಲಪತಿಯಾಗಿ ಬಂದ ಮೇಲೆ ಸಂಗೀತ ವಿವಿಯಲ್ಲಿ ಪ್ರಸಾರಾಂಗ ಆರಂಭಿಸಿ ಹತ್ತಾರು ಪುಸ್ತಕ ಪ್ರಕಟಿಸಲಾಗಿದೆ ಎಂದರು.ಬಳಿಕ ಸಂಗೀತ ವಿವಿಯ ಬೋಧಕ, ಬೋಧಕೇತರ, ಡಿ ಗ್ರೂಪ್ನೌಕರರು ಮತ್ತು ರಕ್ಷಣಾ ಸಿಬ್ಬಂದಿಗೆ ನೆನಪಿನ ಕಾಣಿಕೆ, ಫಲ ತಾಂಬೂಲ ನೀಡಿ ಅಭಿನಂದಿಸಲಾಯಿತು.
ವಿಶ್ರಾಂತ ಕುಲಪತಿ ಪ್ರೊ.ಹಿ.ಚಿ. ಬೋರಲಿಂಗಯ್ಯ ಮಾತನಾಡಿ, ಯಾವುದೇ ವಿವಿಯಲ್ಲಿ ಗುಣಮಟ್ಟದ ಶಿಕ್ಷಣ ಸಿಗಬೇಕಾದರೆ ಕಾಯಂ ಬೋಧಕರು ತುಂಬಾ ಮುಖ್ಯ. ಆದರೆ ಸಂಗೀತ ವಿವಿ ಸೇರಿದಂತೆ ರಾಜ್ಯದ ಬಹುತೇಕ ವಿವಿಗಳಲ್ಲಿ ಕಾಯಂ ಬೋಧಕರ ಕೊರತೆ ಇದೆ ಎಂದು ಹೇಳಿದರು.ಭಾರತದಲ್ಲಿ ಉನ್ನತ ಶಿಕ್ಷಣ ನಿರ್ಲಕ್ಷ್ಯಕ್ಕೆ ಒಳಗಾಗಿರುವುದೇ ಇದಕ್ಕೆ ಕಾರಣ. ಸರ್ಕಾರಗಳು ಕಾಯಂ ಪ್ರಾಧ್ಯಾಪಕರನ್ನು ನೇಮಿಸುವುದಿಲ್ಲ ಎಂದರು.
ನ್ಯಾಕ್ ನ ನಿವೃತ್ತ ನಿರ್ದೇಶಕ ಪ್ರೊ.ಎಸ್.ಸಿ. ಶರ್ಮಾ ಮಾತನಾಡಿ, ಸಂಗೀತ ವಿವಿ ಕೊರತೆ ನಡುವೆಯೂ ಸಾಕಷ್ಟು ಸಾಧನೆ ಮಾಡುತ್ತಿದೆ. ಕೊರೋನಾ ವೇಳೆ ಆನ್ ಲೈನ್ ಕ್ಲಾಸ್ ನಡೆಸಿದೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪ್ರಾದೇಶಿಕ ಕೇಂದ್ರವನ್ನು ಹೊಂದಿದೆ. ರಾಜ್ಯಮಟ್ಟದ ಸಂಗೀತ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿದೆ. ಉತ್ತಮ ಶೈಕ್ಷಣಿಕ ಚಟುವಟಿಕೆ ನಡೆಸುತ್ತಿದೆ. ವಿವಿಗೆ ಹೊಸ ಸ್ಟುಡಿಯೋ ಸಿದ್ಧವಾಗುತ್ತಿದೆ. ಎಲ್ಲಕ್ಕಿಂತ ಮುಖ್ಯವಾಗಿ ವಿವಿ ಕಾಯಂ ನೆಲೆ ಕಲ್ಪಿಸುವ ನಿಟ್ಟಿನಲ್ಲಿ 5 ಎಕರೆ ಜಾಗ ದೊರಕಿದೆ ಎಂದು ಅವರು ಹರ್ಷ ವ್ಯಕ್ತಪಡಿಸಿದರು.ಕಾರ್ಯಕ್ರಮದಲ್ಲಿ ಪ್ರಭಾರ ಕುಲಸಚಿವೆ ಕೆ.ಎಸ್. ರೇಖಾ, ಸಿಂಡಿಕೇಟ್ ಸದಸ್ಯೆ ಎಚ್.ಜಿ. ಶೋಭಾ ಇದ್ದರು.