ಧಾರವಾಡ:

ಜಾನಪದ ಗಾರುಡಿಗ ಬಸಲಿಂಗಯ್ಯ ಹಿರೇಮಠ ಮಾಡಿದ ಜನಪದ ಕಲೆಗಳ ಸಾಹಿತ್ಯದ ಕಾರ್ಯ ಶ್ಲಾಘನೀಯ. ಅವರ ಕುರಿತು ರಾಜ್ಯ ಸರ್ಕಾರ ಪ್ರತಿಷ್ಠಾನ ಸ್ಥಾಪಿಸಬೇಕು ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ. ಮಲ್ಲಿಕಾ ಘಂಟಿ ಒತ್ತಾಯಿಸಿದರು. ಜಾನಪದ ಸಂಶೋಧನಾ ಕೇಂದ್ರ ಹಮ್ಮಿಕೊಂಡ ಡಾ. ಪ್ರಭಾ ನೀರಲಗಿ ದತ್ತಿಯಲ್ಲಿ ಮಹಿಳೆಯರಿಗಾಗಿ ಜಾನಪದ ನೃತ್ಯ ಸ್ಪರ್ಧೆ ಹಾಗೂ ಡಾ. ಪ್ರಭಾ ನೀರಲಗಿ ಪುರಸ್ಕಾರ ಉದ್ಘಾಟಿಸಿದ ಅವರು, 30 ವರ್ಷಗಳಿಂದ ಜಾನಪದ ಸಂಶೋಧನಾ ಕೇಂದ್ರ ಹುಟ್ಟು ಹಾಕಿ ತನ್ಮೂಲಕ ಜಾನಪದ, ಸಂಪ್ರದಾಯ, ಪ್ರದರ್ಶನ ಕಲೆ ಹಾಗೂ ಬಯಲಾಟಗಳನ್ನು ಯುವ ಪೀಳಿಗೆಗೆ ತರಬೇತಿ ನೀಡುತ್ತಿದ್ದ ಬಸವಲಿಂಗಯ್ಯ ಹಿರೇಮಠ ಕಾರ್ಯವನ್ನು ಅವರ ಕುಟುಂಬ ಮುಂದುವರಿಸುತ್ತಿದೆ ಎಂದರು. ಈ ಮೊದಲು ಮದುವೆಯಾದ ನಂತರ ಮಹಿಳೆಯರು ಗಂಡ-ಮನೆ-ಮಕ್ಕಳು ಎಂದು ಗೋಡೆಗಳ ಮಧ್ಯೆ ತಮ್ಮ ಪ್ರತಿಭೆಯನ್ನು ಅಡಗಿಸಿ ಬಿಡುತ್ತಿದ್ದರು. ಆದರೀಗ ಕಾಲ ಬದಲಾಗಿದೆ. 40ರಿಂದ 70 ವರ್ಷದವರೆಗಿನ ಮಹಿಳೆಯರು ಜಾನಪದ ನೃತ್ಯವನ್ನು ಸೊಗಸಾಗಿ ಮಾಡಿ, ಹಾಡಿ ಕುಣಿದು ಕೊಪ್ಪಳಿಸಿದ್ದನ್ನು ಕಂಡು ಜಾನಪದ ಕಲೆಗಳು ಮಹಿಳೆಯರಿಂದಲೇ ಉಳಿಯುವುದು ಎಂದು ಮನದಟ್ಟಾಯಿತು ಎಂದು ಹೇಳಿದರು.

ಹಿರಿಯ ಸಾಹಿತಿ ಶ್ರೀನಿವಾಸ ವಾಡಪ್ಪಿ, ಧಾರವಾಡದ ಭಾರತಿ ನಗರ ಮಹಿಳಾ ಮಂಡಳ ಹಾಗೂ ಬೆಳ್ಳಿ ಬೆಟ್ಟ ಮಹಿಳಾ ಮಂಡಳಗಳಿಗೆ ಡಾ. ಪ್ರಭಾ ನೀರಲಗಿ ಸಾಂಸ್ಕೃತಿಕ ಪುರಸ್ಕಾರ ನೀಡಿದರು. ಜಾನಪದ ಸಂಗೀತ, ಸಾಹಿತ್ಯ, ಕಲೆಗಳು ಹುಟ್ಟಿ ಬೆಳೆದು ಇಂದಿಗೂ ಉಳಿಯುತ್ತಿರುವುದು ಹೆಣ್ಣು ಮಕ್ಕಳಿಂದಲೇ ಎಂದರು. ಮಹಿಳಾ ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕಿ ಹುಲಿಗೆಮ್ಮ ಕುಕನೂರ ಮಾತನಾಡಿದರು. ಜಾನಪದ ನೃತ್ಯ ಸ್ಪರ್ಧೆಯಲ್ಲಿ ಜೇನುಗೂಡು ಮಹಿಳಾ ಮಂಡಳ ಪ್ರಥಮ, ಹುಬ್ಬಳ್ಳಿಯ ಕಲ್ಯಾಣಿ ಮಹಿಳಾ ಮಂಡಳ ದ್ವಿತೀಯ, ಮಂದಹಾಸ ಹಾಗೂ ವನಸಿರಿ ಮಹಿಳಾ ಮಂಡಳ ತೃತೀಯ ಬಹುಮಾನ ಪಡೆದರು. ಕುಮಾರೇಶ್ವರ ನಗರ ಮಹಿಳಾ ಮಂಡಳ ಮತ್ತು ಜೈ ಶ್ರೀರಾಮ ಮಂಡಳಗಳು ಸಮಾಧಾನಕರ ಬಹುಮಾನ ಪಡೆದವು. ಡಾ. ಸಂದೀಪ ನೀರಲಗಿ, ಪರಿಮಳಾ ಶೆಟ್ಟಿ, ಸಂಜು ಕುಂದಗೋಳ ಇದ್ದರು. ನಾಗಭೂಷಣ ಹಿರೇಮಠ ಸ್ವಾಗತಿಸಿದರು ವಿಶ್ವೇಶ್ವರಿ ಹಿರೇಮಠ ಪ್ರಾಸ್ತಾವಿಕ ಮಾತನಾಡಿದರು