ಸಾರಾಂಶ
ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ್ ಪ್ರತಿಮೆ ಸ್ಥಾಪನೆಗೆ ಭೂಮಿಪೂಜೆ ನೆರವೇರಿತು. ಈ ಸಂದರ್ಭ ಗಣ್ಯರು ಹಾಜರಿದ್ದರು.
ಮಡಿಕೇರಿ : ಮಡಿಕೇರಿ ನಗರದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ವೃತ್ತದ ಬಳಿಯ ಡಾ.ಅಂಬೇಡ್ಕರ್ ಭವನದ ಎದುರು ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರ ಪ್ರತಿಮೆ ಸ್ಥಾಪನೆಗೆ ಭೂಮಿಪೂಜೆ ನೆರವೇರಿತು.
ಡಾ.ಅಂಬೇಡ್ಕರ್ ಭವನ ಸಮಿತಿಯ ಅಧ್ಯಕ್ಷರಾದ ಎಚ್. ಎಂ. ನಂದಕುಮಾರ್ ಅವರ ಅಧ್ಯಕ್ಷತೆಯಲ್ಲಿ ಭೂಮಿಪೂಜೆ ನೆರವೇರಿಸಿ ಯೋಜನೆಗೆ ಚಾಲನೆ ನೀಡಲಾಯಿತು. ಭೂಮಿಪೂಜೆ ನೆರವೇರಿಸಿ ಮಾತನಾಡಿದ ಹೆಚ್.ಎಂ.ನಂದಕುಮಾರ್ ಅವರು, ಮುಂಬರುವ ಡಾ.ಅಂಬೇಡ್ಕರ್ ಜಯಂತಿಯೊಳಗೆ 15 ಅಡಿ ಎತ್ತರದ ಪೀಠದ ಮೇಲೆ 18 ಅಡಿ ಎತ್ತರದ ಕಂಚಿನ ಪ್ರತಿಮೆಯನ್ನು ಸ್ಥಾಪಿಸಲಾಗುವುದು ಎಂದರು. ಭೂಮಿಪೂಜೆ ಸಂದರ್ಭ ಡಾ.ಅಂಬೇಡ್ಕರ್ ಭವನ ಸಮಿತಿಯ ಉಪಾಧ್ಯಕ್ಷ ಎಚ್. ಆರ್. ಮುತ್ತಪ್ಪ, ಪ್ರಮುಖರಾದ ಡಾ.ಸತೀಶ್, ಬಿ.ಎನ್.ಮುದ್ದುರಾಜು ಹಾಜರಿದ್ದರು.ಭೂಮಿ ಪೂಜೆ ವಿರೋಧ - ಪ್ರತಿಭಟನೆ
ಡಾ.ಅಂಬೇಡ್ಕರ್ ಭವನದ ಆವರಣದಲ್ಲಿ ಪ್ರತಿಮೆ ಸ್ಥಾಪಿಸಬಾರದೆಂದು ಒತ್ತಾಯಿಸಿ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಹೆಚ್.ಎಲ್.ದಿವಾಕರ್, ನಗರಸಭಾ ಸದಸ್ಯ , ಎಚ್.ಸಿ.ಸತೀಶ್, ಪ್ರಮುಖರಾದ ಪ್ರೇಂ ಕುಮಾರ್, ಎನ್.ವೀರಭದ್ರಯ್ಯ, ಎ.ಎನ್.ಗೋವಿಂದಪ್ಪ, ಡಿ.ಜೆ.ಈರಪ್ಪ, ಹೆಚ್.ಕೆ.ಪ್ರೇಮ ಕೃಷ್ಣಪ್ಪ, ನಾಗೇಂದ್ರ, ದಿಲೀಪ್ ಮತ್ತಿತರರು ಪ್ರತಿಭಟನೆಗೆ ಮುಂದಾದರು. ಈ ಸಂದರ್ಭ ಪೊಲೀಸ್ ಅಧಿಕಾರಿಗಳು ಮಧ್ಯ ಪ್ರವೇಶಿಸಿ ಭವನದ ಸುತ್ತ ನಿಷೇಧಾಜ್ಞೆ ವಿಧಿಸಿರುವುದರಿಂದ ಪ್ರತಿಭಟನೆಗೆ ಅವಕಾಶವಿಲ್ಲ ಎಂದರು.ಒಂದು ಹಂತದಲ್ಲಿ ಎಚ್.ಎಂ.ನಂದಕುಮಾರ್ ಹಾಗೂ ಹೆಚ್.ಸಿ.ಸತೀಶ್ ನಡುವೆ ಏಕವಚನದಲ್ಲಿ ಮಾತಿನ ಚಕಮಕಿ ನಡೆಯಿತು. ಸುದ್ದಿಗಾರರೊಂದಿಗೆ ಮಾತನಾಡಿದ ಹೆಚ್.ಎಲ್.ದಿವಾಕರ್ ಹಾಗೂ ದಲಿತ ಸಂಘಟನೆಗಳ ಮುಖಂಡ ಟಿ.ಈ.ಸುರೇಶ್ ಅವರು ಡಾ.ಅಂಬೇಡ್ಕರ್ ಭವನದ ಎದುರು ಪ್ರತಿಮೆ ಸ್ಥಾಪನೆಗೆ ನಮ್ಮ ವಿರೋಧವಿದೆ. ಜಿಲ್ಲಾಡಳಿತ ಹಾಗೂ ನಗರಸಭೆ ಸೂಚಿಸುವ ಸ್ಥಳದಲ್ಲಿ ಪ್ರತಿಮೆ ನಿರ್ಮಾಣ ಮಾಡಲಿ ಎಂದರು.