ಸಾರಾಂಶ
ಕನ್ನಡಪ್ರಭ ವಾರ್ತೆ ಬೆಳ್ತಂಗಡಿ
ದೇವಳದ ಎಲ್ಲಾ ವ್ಯವಸ್ಥೆಗಳು ಪರಿಪೂರ್ಣವಾದಾಗ ಭಕ್ತರಿಗೆ ದೇವರನ್ನು ಸ್ತುತಿಸಲು ಅನುಕೂಲವಾಗುತ್ತದೆ ಎಂದು ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಹೇಳಿದ್ದಾರೆ.ಸೋಮವಾರ ಉಜಿರೆ ಶ್ರೀ ಜನಾರ್ದನ ದೇವಾಲಯದ ನೂತನ ರಾಜಗೋಪುರ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಿ ಅವರು ಆಶೀರ್ವಚನ ನೀಡಿದರು.
ರಾಜ್ಯದಲ್ಲಿ ಬಹಳಷ್ಟು ದೇವಾಲಯಗಳು ಜೀರ್ಣೋದ್ಧಾರಗೊಂಡು ಹಿಂದಿನ ವೈಭವಕ್ಕೆ ಮರಳಿವೆ. ಆರಾಧನಾ ಕೇಂದ್ರಗಳು ಸುಸ್ಥಿರವಾಗಿರಲು ಭಕ್ತರ ಅಚಲ ನಿಷ್ಠೆ ಕಾರಣವಾಗುತ್ತದೆ ಎಂದರು.ರಾಜಗೋಪುರ ನಿರ್ಮಾಣದ ಮನವಿ ಪತ್ರ ಬಿಡುಗಡೆಗೊಳಿಸಿ ಮಾತನಾಡಿದ ಧರ್ಮಸ್ಥಳದ ಹರ್ಷೇಂದ್ರ ಕುಮಾರ್, ಉಜಿರೆ ದೊಡ್ಡಪೇಟೆಯಾಗಿ ಬೆಳೆಯುತ್ತಿದೆ. ವಿದ್ಯಾಸಂಸ್ಥೆಗಳು ಇರುವ ಊರು ಅಭಿವೃದ್ಧಿ ಹೊಂದುತ್ತದೆ. ಉಜಿರೆಯ ಜನತೆಯ ಉಲ್ಲಾಸ, ಬದ್ಧತೆ ಉತ್ತಮವಾಗಿದೆ ಎಂದರು.
ರಾಜಗೋಪುರ ನಿರ್ಮಾಣದ ಕೂಪನ್ ಬಿಡುಗಡೆಗೊಳಿಸಿದ ಶಾಸಕ ಹರೀಶ್ ಪೂಂಜ ಮಾತನಾಡಿ, ರಾಜಗೋಪುರ ನಿರ್ಮಾಣಕ್ಕೆ ಶಾಸಕರ ನಿಧಿಯಿಂದ 10 ಲಕ್ಷ ರು. ನೀಡುವುದಾಗಿ ತಿಳಿಸಿ, ದೇವಸ್ಥಾನದ ವ್ಯಾಪ್ತಿಗೆ ಬೇಕಾದ ಕಾಂಕ್ರಿಟ್ ರಸ್ತೆ ನಿರ್ಮಾಣದ ಕುರಿತು ಪ್ರಯತ್ನಿಸುವುದಾಗಿ ತಿಳಿಸಿದರು.ರಾಜಗೋಪುರ ನಿರ್ಮಾಣ ಸಮಿತಿ ಅಧ್ಯಕ್ಷ ಶಶಿಧರ ಶೆಟ್ಟಿ ಬರೋಡ ಅಧ್ಯಕ್ಷತೆ ವಹಿಸಿದ್ದರು.
ಮಾಜಿ ಎಂಎಲ್ ಸಿ ಕೆ.ಹರೀಶ್ ಕುಮಾರ್ ರಾಜಗೋಪುರ ನಿರ್ಮಾಣದ ರಶೀದಿ ಬಿಡುಗಡೆಗೊಳಿಸಿದರು.ಸಂಚಾಲಕ ಮೋಹನ್ ಕುಮಾರ್, ಕಾರ್ಯದರ್ಶಿ ಲಕ್ಷ್ಮಣ ಸಪಲ್ಯ, ಕೋಶಾಧಿಕಾರಿ ರಾಜೇಶ್ ಪೈ, ರೋಟರಿ ಕ್ಲಬ್ ಅಧ್ಯಕ್ಷ ಪೂರನ್ ವರ್ಮ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಅನಿಲ್ ಕುಮಾರ್ ಎಸ್.ಎಸ್., ಉದ್ಯಮಿಗಳಾದ ಪ್ರಶಾಂತ ಜೈನ್, ಅರವಿಂದ ಕಾರಂತ, ಬಿ.ಸೋಮಶೇಖರ ಶೆಟ್ಟಿ, ಶ್ರೀಧರ ಪಡುವೆಟ್ನಾಯ, ವೃಂದಾ ಪಡುವೆಟ್ನಾಯ ಮತ್ತಿತರು ಇದ್ದರು.
ಬ್ರಹ್ಮರಥ ನಿರ್ಮಾಣದ ಸೇವೆಗಾಗಿ ಅಶೋಕ್ ಕುಮಾರ್ ಅವರನ್ನು, ರಾಜಗೋಪುರ ನಿರ್ಮಾಣಕ್ಕೆ ರು. 2 ಲಕ್ಷದಷ್ಟು ಪ್ರಥಮ ದೇಣಿಗೆ ನೀಡಿದ ಗೋವಿಂದ ದಾಮ್ಲೆ, ತಾಲೂಕು ಗ್ಯಾರೇಜು ಮಾಲಕರ ಸಂಘದ ಸಂಚಾಲಕ ಬಾಲಕೃಷ್ಣ ಶೆಟ್ಟಿ, ಹೋಟೆಲ್ ಉದ್ಯಮಿ ಮಾಧವ ಹೊಳ್ಳ ಇವರನ್ನು ಗೌರವಿಸಲಾಯಿತು.ಕಾಮಗಾರಿ ನಿರ್ವಹಿಸುವ ಗಣೇಶ್ ಎಂಜಿನಿಯರ್ ಅವರಿಗೆ ಸ್ಥಾಪನಾ ನಿಧಿ ಹಸ್ತಾಂತರಿಸಲಾಯಿತು.
ಎಸ್‌ಡಿಎಂ ವಸತಿ ಪಿಯು ಕಾಲೇಜಿನ ಪ್ರಿನ್ಸಿಪಾಲ್ ಸುನಿಲ್ ಪಂಡಿತ್ ಮತ್ತು ರವೀಂದ್ರ ಶೆಟ್ಟಿ ಬಳಂಜ ನಿರೂಪಿಸಿದರು. ಸಂಜೀವ ಶೆಟ್ಟಿ ಕುಂಟಿನಿ ವಂದಿಸಿದರು.ದೇವಳದ ಅನುವಂಶಿಕ ಆಡಳಿತ ಮೊಕ್ತೇಸರ ಶರತ್ ಕೃಷ್ಣ ಪಡುವೆಟ್ನಾಯ ಪ್ರಾಸ್ತಾವಿಕ ಮಾತನಾಡಿದರು.