ಮೇಕೆದಾಟು ಅಣೆಕಟ್ಟು ಯೋಜನೆ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೆ ನುರಿತ ತಾಂತ್ರಿಕ ಮತ್ತು ಕಾನೂನು ತಜ್ಞರ ತಂಡವನ್ನು ಜೊತೆಗಿಟ್ಟುಕೊಂಡು ಕಾರ್ಯಚಟುವಟಿಕೆಗಳಿಗೆ ವೇಗ ನೀಡಲಾಗುವುದು. ಇಲಾಖೆಯಿಂದ ಇಬ್ಬರು ಪರಿಣಿತ ಜಲತಜ್ಞರನ್ನು ದೆಹಲಿಯಲ್ಲಿರಿಸಿ ಯೋಜನೆಯ ಬೆಳವಣಿಗೆಗಳ ಕುರಿತಂತೆ ತಿಳಿದುಕೊಳ್ಳಲಾಗುವುದು.

ಕನ್ನಡಪ್ರಭ ವಾರ್ತೆ ಮಂಡ್ಯ

ಕಾವೇರಿ ವಿವಾದಕ್ಕೆ ಶಾಶ್ವತ ಪರಿಹಾರವಾಗಿರುವ ಮೇಕೆದಾಟು ಅಣೆಕಟ್ಟು ಯೋಜನೆಗೆ ವರ್ಷದೊಳಗೆ ಶಂಕುಸ್ಥಾಪನೆ ನೆರವೇರಿಸಲು ಸಂಕಲ್ಪ ಮಾಡಿರುವುದಾಗಿ ಜಲಸಂಪನ್ಮೂಲ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದರು.

ನಗರದಲ್ಲಿ ಸ್ವಾತಂತ್ರ್ಯ ದಿನಾಚರಣೆ ಸಮಾರಂಭದಲ್ಲಿ ಭಾಗವಹಿಸಿದ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ಈ ಯೋಜನೆಗೆ ೨೦ ಸಾವಿರ ಎಕರೆ ಭೂಮಿ ಅಗತ್ಯವಿದ್ದು, ಅದರಲ್ಲಲಿ ೧೨,೫೦೦ ಎಕರೆ ಪ್ರದೇಶವನ್ನು ಗುರುತಿಸಲಾಗಿದೆ. ಅದನ್ನು ಆದಷ್ಟು ಬೇಗ ಜಿಲ್ಲಾಧಿಕಾರಿಗಳು ಮತ್ತು ಅರಣ್ಯ ಇಲಾಖೆಯವರು ಚರ್ಚೆ ನಡೆಸಿ ಸ್ವಾಧೀನಪಡಿಸಿಕೊಳ್ಳುವಂತೆ ಸೂಚನೆ ನೀಡಿರುವುದಾಗಿ ಹೇಳಿದರು.

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಯೋಜನೆ ಅನುಷ್ಠಾನ ವಿಚಾರದಲ್ಲಿ ನನಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿದ್ದಾರೆ. ಸದಾ ಜೊತೆ ಇದ್ದು ನಿನ್ನೊಂದಿಗೆ ಕೈಜೋಡಿಸುವೆ. ಏನೇ ಸಮಸ್ಯೆಗಳು ಎದುರಾದರೂ ಪರಿಹಾರ ಸೂಚಿಸುವುದಕ್ಕೆ ಬದ್ಧನಿರುವುದಾಗಿ ಭರವಸೆ ನೀಡಿದ್ದಾರೆ. ಅವರು ಕೊಟ್ಟ ಸೂಚನೆಯಂತೆ ೨೪ ಗಂಟೆಯೊಳಗೆ ಡಿಪಿಆರ್ ಸರಿಪಡಿಸಿ ಆನ್‌ಲೈನ್‌ನಲ್ಲಿ ಅಪ್‌ಲೋಡ್ ಮಾಡಲಾಗಿದೆ ಎಂದು ವಿವರಿಸಿದರು.

ಮೇಕೆದಾಟು ಅಣೆಕಟ್ಟು ಯೋಜನೆ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೆ ನುರಿತ ತಾಂತ್ರಿಕ ಮತ್ತು ಕಾನೂನು ತಜ್ಞರ ತಂಡವನ್ನು ಜೊತೆಗಿಟ್ಟುಕೊಂಡು ಕಾರ್ಯಚಟುವಟಿಕೆಗಳಿಗೆ ವೇಗ ನೀಡಲಾಗುವುದು. ಇಲಾಖೆಯಿಂದ ಇಬ್ಬರು ಪರಿಣಿತ ಜಲತಜ್ಞರನ್ನು ದೆಹಲಿಯಲ್ಲಿರಿಸಿ ಯೋಜನೆಯ ಬೆಳವಣಿಗೆಗಳ ಕುರಿತಂತೆ ತಿಳಿದುಕೊಳ್ಳಲಾಗುವುದು ಎಂದರು.

ಬಿಜೆಪಿ ಸಂಸದರು ಹಾಗೂ ಕೇಂದ್ರ ಸಚಿವರು ನಮ್ಮ ಪ್ರಯತ್ನಕ್ಕೆ ಕೈಜೋಡಿಸಬೇಕು. ಸುಪ್ರೀಂ ಕೋರ್ಟ್ ಈ ವಿಷಯದಲ್ಲಿ ಮಧ್ಯಪ್ರವೇಶಿಸುವುದಿಲ್ಲ ಎಂದಿದೆ. ಜೊತೆಗೆ ಅಣೆಕಟ್ಟು ನಿರ್ಮಾಣಕ್ಕೆ ತಮಿಳುನಾಡಿನ ಅನುಮತಿ ಬೇಕಿಲ್ಲ ಎಂದು ತಿಳಿಸಿದೆ. ಕೇಂದ್ರ ಸರ್ಕಾರವೂ ಅದನ್ನೇ ಪುನರುಚ್ಚರಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಎರಡೂ ರಾಜ್ಯಗಳ ಹಿತವನ್ನು ಗಮನದಲ್ಲಿಟ್ಟುಕೊಂಡು ಯೋಜನೆ ಜಾರಿಗೆ ಹಸಿರು ನಿಶಾನೆ ತೋರಿಸಬೇಕು ಎಂದು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಶಾಸಕ ಪಿ.ರವಿಕುಮಾರ್, ವಿಧಾನಪರಿಷತ್ ಸದಸ್ಯ ದಿನೇಶ್ ಗೂಳಿಗೌಡ, ರಾಜ್ಯ ಆಹಾರ ಆಯೋಗದ ಅಧ್ಯಕ್ಷ ಡಾ.ಎಚ್.ಕೃಷ್ಣ, ಮೈಷುಗರ್ ಅಧ್ಯಕ್ಷ ಸಿ.ಡಿ.ಗಂಗಾಧರ್ ಇದ್ದರು.

ಕೊಮ್ಮೇರಹಳ್ಳಿಗೆ ಪಶು ವೈದ್ಯಕೀಯ ವಿಜ್ಞಾನ ಕಾಲೇಜಿಗೆ ಅನುಮೋದನೆ

ಕನ್ನಡಪ್ರಭ ವಾರ್ತೆ ಮಂಡ್ಯ

ತಾಲೂಕಿನ ಕೊಮ್ಮೇರಹಳ್ಳಿಯಲ್ಲಿರುವ ವಿಶ್ವಮಾನವ ಕಾಲೇಜಿಗೆ ಪಶು ವೈದ್ಯಕೀಯ ವಿಜ್ಞಾನ ಕಾಲೇಜನ್ನು ಮಂಜೂರು ಮಾಡಲಾಗಿದೆ ಎಂದು ನೀರಾವರಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.

ಸಿಇಟಿ, ನೀಟ್ ಪರೀಕ್ಷೆಯಲ್ಲಿ ಉನ್ನತ ವ್ಯಾಸಂಗಕ್ಕೆ ಅವಕಾಶ ಸಿಗದ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಕೃಷಿ ಮತ್ತು ಹೈನುಗಾರಿಕೆ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಲಾಗುತ್ತಿದೆ. ಇದರಲ್ಲಿ ಉತ್ತಮ ವ್ಯಾಸಂಗ ಮಡಿ ಪದವಿ ಗಳಿಸಿದರೆ ಹೆಚ್ಚು ಬಂಡವಾಳವಿಲ್ಲದೆ ಸ್ವಂತ ಉದ್ಯಮವನ್ನೇ ಆರಂಭಿಸಬಹುದು. ನೀವು ಉದ್ಯೋಗ ಮಾಡುವ ಜೊತೆಗೆ ಬೇರೆಯವರಿಗೂ ಉದ್ಯೋಗ ಕೊಡುವಷ್ಟರ ಮಟ್ಟಿಗೆ ಬೆಳೆಯಬಹುದು ಎಂದರು.

ಕೆ.ಎಂ.ದೊಡ್ಡಿಯ ಭಾರತೀ ವಿದ್ಯಾಸಂಸ್ಥೆಯಿಂದ ಕೃಷಿ ವಿಜ್ಞಾನ ಕಾಲೇಜಿಗೆ ಸರ್ಕಾರದೆದುರು ಪ್ರಸ್ತಾವನೆ ಹಂತದಲ್ಲಿದೆ. ಅದಕ್ಕೂ ಕೂಡ ಅನುಮೋದನೆ ದೊರಕಿಸಿಕೊಡಲಾಗುವುದು. ಬೆಳ್ಳೂರಿನ ಆದಿ ಚುಂಚನಗಿರಿ ಕಾಲೇಜಿಗೆ ಮಂಜೂರಾಗಿದ್ದ ಕೃಷಿ ಕಾಲೇಜನ್ನು ಮಾಯಸಂದ್ರದಲ್ಲಿ ಕಟ್ಟಡ ವ್ಯವಸ್ಥೆಯನ್ನೊಳಗೊಂಡಿದ್ದ ಶ್ರೀಮಠದ ವಿದ್ಯಾಸಂಸ್ಥೆಗೆ ವರ್ಗಾವಣೆ ಮಾಡಿರುವುದಾಗಿ ತಿಳಿಸಿದರು.

ವೈ-ಫೈ ಸಿಟಿಯಾಗಿ ಮಂಡ್ಯ ನಗರ

ಮಂಡ್ಯ ನಗರವನ್ನು ವೈ-ಫೈ ಸಿಟಿಯಾಗಿ ಪರಿವರ್ತಿಸಲಾಗುತ್ತಿದೆ. ಇಡೀ ನಗರಕ್ಕೆ ವೈ-ಫೈ ಸಂಪರ್ಕ ಸಿಗುವಂತೆ ಅನುಕೂಲ ಕಲ್ಪಿಸಲಾಗುತ್ತಿದೆ ಎಂದು ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.

ಶಾಸಕ ಪಿ.ರವಿಕುಮಾರ್ ಅವರು ಇದರ ಹಿಂದಿನ ರೂವಾರಿ. ಮಂಡ್ಯವನ್ನು ಸ್ಮಾರ್ಟ್ ಸಿಟಿ, ಡಿಜಿಟಲ್ ಸಿಟಿ ಮಾಡುವ ಕನಸಿನೊಂದಿಗೆ ವೈ-ಫೈ ವ್ಯವಸ್ಥೆಯನ್ನು ಜಾರಿಗೊಳಿಸುತ್ತಿದ್ದಾರೆ. ನಗರ ವ್ಯಾಪ್ತಿಯೊಳಗೆ ಸಾರ್ವಜನಿಕರು ಉಚಿತವಾಗಿ ಈ ಸೇವೆಯನ್ನು ಪಡೆಯಬಹುದು. ಇಂಟರ್‌ನೆಟ್‌ಗಾಗಿ ಪರದಾಡುವುದು ತಪ್ಪಲಿದೆ ಎಂದು ತಿಳಿಸಿದರು.ಬೆಳೆ ಬಗ್ಗೆ ಗುರುವಾರದೊಳಗೆ ನಿರ್ಧಾರ

ಮುಂಗಾರು ಹಂಗಾಮಿಗೆ ಬೆಳೆ ಹಾಕಬೇಕೆ, ಬೇಡವೇ. ಪರ್ಯಾಯ ಬೆಳೆಗಳಾಗಿ ಯಾವುದನ್ನು ಬೆಳೆಯಬಹುದು ಎಂಬ ಬಗ್ಗೆ ಮುಂದಿನ ಗುರುವಾರದೊಳಗೆ ಅಂತಿಮ ನಿರ್ಧಾರ ಪ್ರಕಟಿಸುವುದಾಗಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದರು.

ಈಗಾಗಲೇ ರೈತರ ಕೋರಿಕೆ ಮೇರೆಗೆ ಶುಕ್ರವಾರದಿಂದಲೇ ಹೇಮಾವತಿ ನಾಲೆಗಳಿಗೆ ನೀರು ಬಿಡುಗಡೆ ಮಾಡಲಾಗಿದೆ. ಕೆರೆ-ಕಟ್ಟೆಗಳನ್ನು ತುಂಬಿಸುವುದಕ್ಕೆ ಮೊದಲ ಆದ್ಯತೆ ನೀಡಲಾಗುತ್ತಿದೆ. ಅದೇ ರೀತಿ ಕೆಆರ್‌ಎಸ್‌ನಿಂದಲೂ ಕೆರೆ-ಕಟ್ಟೆಗಳನ್ನು ತುಂಬಿಸಲಾಗುತ್ತಿದೆ. ಈ ವ್ಯಾಪ್ತಿಯಲ್ಲಿ ಬೆಳೆ ಬೆಳೆಯುವ ಕುರಿತಂತೆ ಮಂಗಳವಾರ ಅಥವಾ ಬುಧವಾರ ನೀರಾವರಿ ಸಲಹಾ ಸಮಿತಿ ಸಭೆ ಕರೆದು ನೀರಾವರಿ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳುವುದಾಗಿ ಹೇಳಿದರು.