೫೦ ಹಾಸಿಗೆಗಳ ಕ್ರಿಟಿಕಲ್ ಕೇರ್ ಘಟಕದ ಕಾಮಗಾರಿಗೆ ಶಂಕುಸ್ಥಾಪನೆ

| Published : Aug 14 2025, 01:00 AM IST

ಸಾರಾಂಶ

ಮಿಮ್ಸ್ ಆಸ್ಪತ್ರೆಗೆ ಮಂಡ್ಯ ಜಿಲ್ಲೆಯಿಂದ ಮಾತ್ರವಲ್ಲದೇ ರಾಮನಗರ, ತುಮಕೂರು ಸೇರಿದಂತೆ ಹಲವು ಜಿಲ್ಲೆಗಳಿಂದಲೂ ರೋಗಿಗಳು ಚಿಕಿತ್ಸೆಗಾಗಿ ಬರುತ್ತಿದ್ದಾರೆ. ಇದರಿಂದ ರೋಗಿಗಳ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಆಸ್ಪತ್ರೆಯನ್ನು ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ ಮಾಡುವ ಪ್ರಸ್ತಾವನೆ ಸರ್ಕಾರದ ಮುಂದೆ ಇದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಮಂಡ್ಯ ವೈದ್ಯಕೀಯ ಕಾಲೇಜಿನ ನೆಲಮಹಡಿ ಮತ್ತು ಮೊದಲ ಮಹಡಿಯಲ್ಲಿ ಕ್ರಿಟಿಕಲ್ ಕೇರ್ ಆಸ್ಪತ್ರೆ, ತೀವ್ರ ಘಟಕ ನಿರ್ಮಾಣ ಕಾಮಗಾರಿಗೆ ಶಾಸಕ ಪಿ.ರವಿಕುಮಾರ್ ಬುಧವಾರ ಗುದ್ದಲಿಪೂಜೆ ನೆರವೇರಿಸಿದರು.

ಕೇಂದ್ರ ಮತ್ತು ರಾಜ್ಯ ಸರ್ಕಾರದ ಅನುದಾನ ೧೬ ಕೋಟಿ ರು. ಹಣದಲ್ಲಿ ನಿರ್ಮಿಸಲಾಗುತ್ತಿದೆ. ಕಾಮಗಾರಿ ಶೀಘ್ರವಾಗಿ ಆರಂಭಿಸಿ ತ್ವರಿತಗತಿಯಲ್ಲಿ ಪೂರ್ಣಗೊಳಿಸಿ ಜನರ ಸೇವೆಗೆ ಸಮರ್ಪಿಸುವ ಕೆಲಸ ಆಗಬೇಕು ಎಂದು ಶಾಸಕ ಪಿ.ರವಿಕುಮಾರ್ ತಿಳಿಸಿದರು.

ಮಿಮ್ಸ್ ಆಸ್ಪತ್ರೆಗೆ ಮಂಡ್ಯ ಜಿಲ್ಲೆಯಿಂದ ಮಾತ್ರವಲ್ಲದೇ ರಾಮನಗರ, ತುಮಕೂರು ಸೇರಿದಂತೆ ಹಲವು ಜಿಲ್ಲೆಗಳಿಂದಲೂ ರೋಗಿಗಳು ಚಿಕಿತ್ಸೆಗಾಗಿ ಬರುತ್ತಿದ್ದಾರೆ. ಇದರಿಂದ ರೋಗಿಗಳ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಆಸ್ಪತ್ರೆಯನ್ನು ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ ಮಾಡುವ ಪ್ರಸ್ತಾವನೆ ಸರ್ಕಾರದ ಮುಂದೆ ಇದೆ ಎಂದರು.

ಕ್ರಿಟಿಕಲ್ ಕೇರ್ ಆಸ್ಪತ್ರೆಗೆ ೧೬ ಕೋಟಿ ರು. ಹಣ ಬಿಡುಗಡೆಯಾಗಿದೆ. ಇದರ ಜೊತೆಗೆ ೮ ಕೋಟಿ ರು.ವೆಚ್ಚದಲ್ಲಿ ತುರ್ತು ಚಿಕಿತ್ಸಾ ವಿಭಾಗವನ್ನೂ ವಿಸ್ತರಿಸುವುದಾಗಿ ಆರೋಗ್ಯಸಚಿವರು, ಜಿಲ್ಲಾ ಉಸ್ತುವಾರಿ ಸಚಿವರು ಹೇಳಿದ್ದಾರೆ. ಕ್ಯಾನ್ಸರ್ ಕೇಂದ್ರದಲ್ಲಿ ರೇಡಿಯೋಥೆರಪಿ ಆರಂಭವಾಗಿದೆ ಎಂದರು.

ಆಸ್ಪತ್ರೆ ಜಾಗದಲ್ಲಿರುವ ತಮಿಳು ಕಾಲೋನಿ ಜಾಗ ಸೇರಿದಂತೆ ಅನಧಿಕೃತ ಕಟ್ಟಡಗಳಿರುವ ಜಾಗವನ್ನು ಆಸ್ಪತ್ರೆಗೆ ಬಿಟ್ಟುಕೊಡಬೇಕು ಎಂದು ಹಲವು ದಿನಗಳಿಂದ ಹೋರಾಟಗಳು ನಡೆಯುತ್ತಿವೆ. ತಮಿಳು ಕಾಲೋನಿ ಜನರಿಗೆ ಈಗಾಗಲೇ ಮನೆಗಳನ್ನು ನಿರ್ಮಾಣ ಮಾಡಿಕೊಡಲಾಗಿದೆ. ಅವರು ಅಲ್ಲಿ ಹೋಗಲು ಸಿದ್ದರಿಲ್ಲ. ಅವರು ಬೇರೆ ನಿವೇಶನ, ಜಾಗ ಕೇಳುತ್ತಿದ್ದಾರೆ. ಈಗಾಗಲೇ ನಮ್ಮ ಸರ್ಕಾರ ಕೋರ್ಟ್‌ನಲ್ಲಿ ಅಫಿಡೇವಿಟ್ ಸಲ್ಲಿಸಿದೆ. ಎಷ್ಟೇ ದಿನವಾದರೂ ತಮಿಳು ಕಾಲೋನಿ ಜಾಗವನ್ನು ಆಸ್ಪತ್ರೆಗೆ ಬಿಟ್ಟು ಕೊಡಬೇಕು. ಕೋರ್ಟ್‌ನಲ್ಲಿ ಏನೇ ತೀರ್ಮಾನ ಆದರೂ ನಾವುಗಳು ಎಲ್ಲರೂ ಆ ತೀರ್ಮಾನಕ್ಕೆ ಬದ್ಧರಾಗಿರಬೇಕು. ನಾವು ನಿವೇಶನ ರಹಿತರಿಗೆ ನಿವೇಶನ ಕೊಡಲು ಜಾಗ ನೋಡುತ್ತಿರುವುದಾಗಿ ಹೇಳಿದರು.

ವೇದಿಕೆಯಲ್ಲಿ ನಗರಸಭೆ ಅಧ್ಯಕ್ಷ ಎಂ.ವಿ.ಪ್ರಕಾಶ್, ಮಂಡ್ಯ ನಿರ್ದೇಶಕ ಡಾ.ಪಿ.ನರಸಿಂಹ ಸ್ವಾಮಿ, ಜಿಲ್ಲಾಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಶಿವಕುಮಾರ್, ಮೂಡಾ ನಿರ್ದೇಶಕ ಕೃಷ್ಣ, ನಗರಸಭೆ ಸದಸ್ಯ ಶ್ರೀಧರ್, ಕಾಂಗ್ರೆಸ್ ಮುಖಂಡರಾದ ಅಭಿಲಾಷ್,ಅರುಣ್, ಪ್ರದೀಪ್ ಸೇರಿದಂತೆ ಇತರರಿದ್ದರು.ಆ.೨೯ಕ್ಕೆ ಎಚ್‌ಡಿಕೆಯಿಂದ ಶಂಕುಸ್ಥಾಪನೆ

ಕನ್ನಡಪ್ರಭ ವಾರ್ತೆ ಮಂಡ್ಯ

ಮಿಮ್ಸ್ ಆವರಣದಲ್ಲಿ ನೂತನವಾಗಿ ನಿರ್ಮಾಣಗೊಳ್ಳಲಿರುವ ಕ್ರಿಟಿಕಲ್ ಕೇರ್ ಆಸ್ಪತ್ರೆಗೆ ಆ.೨೯ರಂದು ಕೇಂದ್ರ ಸಚಿವ ಮತ್ತು ಸಂಸದ ಎಚ್.ಡಿ.ಕುಮಾರಸ್ವಾಮಿ ಅವರು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಈಗಾಗಲೇ ಭೂಮಿಪೂಜೆ ಕಾರ್ಯಕ್ರಮಕ್ಕೆ ಎಚ್.ಡಿ.ಕುಮಾರಸ್ವಾಮಿ ಅವರ ನಿಗದಿಯಾಗಿದೆ. ಅದಕ್ಕೂ ಮುನ್ನವೇ ಶಾಸಕ ಪಿ.ರವಿಕುಮಾರ್ ಅವರು ಶಂಕುಸ್ಥಾಪನೆ ನೆರವೇರಿಸಿರುವುದು ಚರ್ಚೆಗೆ ಕಾರಣವಾಗಿದೆ. ಈ ಆಸ್ಪತ್ರೆಗೆ ಕೇಂದ್ರ ಶೇ.೬೦ರಷ್ಟು ಅನುದಾನ ನೀಡಿದರೆ ರಾಜ್ಯ ಸರ್ಕಾರದ ಪಾಲು ಶೇ.೪೦ರಷ್ಟಿದೆ. ಆ ಹಿನ್ನೆಲೆಯಲ್ಲಿ ಶಾಸಕರು ಶಂಕುಸ್ಥಾಪನೆ ನೆರವೇರಿಸಿರುವುದಾಗಿ ಹೇಳಲಾಗುತ್ತಿದೆ.