ಸಾರಾಂಶ
ಕನ್ನಡಪ್ರಭ ವಾರ್ತೆ ನಂಜನಗೂಡುತಾಲೂಕಿನ ನಿರಾಶ್ರಿತ ಹಂದಿ ಜೋಗಿ ಸಮುದಾಯಕ್ಕೆ ಶಾಶ್ವತ ಸೂರು ಕಲ್ಪಿಸುವ ಸಲುವಾಗಿ ಒಂದು ಕೋಟಿ ವೆಚ್ಚದಲ್ಲಿ ತಾಲೂಕಿನ ಸಿಂಧುವಳ್ಳಿ ಗೇಟ್ ಬಳಿ ಬಡಾವಣೆ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಲಾಗಿದೆ ಎಂದು ಶಾಸಕ ದರ್ಶನ್ ದ್ರುವ ನಾರಾಯಣ ಹೇಳಿದರು.ತಾಲೂಕಿನ ಕರಳಪುರ, ಕೂಗಲೂರು, ಕೃಷ್ಣಾಪುರ, ಲಕ್ಷ್ಮಣಪುರ, ಕಸುವಿನಹಳ್ಳಿ, ಕುರಹಟ್ಟಿ, ಗ್ರಾಮಗಳಲ್ಲಿ ಸಿಸಿ ರಸ್ತೆ ನಿರ್ಮಾಣ ಮತ್ತು ಸಮುದಾಯ ಭವನ ನಿರ್ಮಾಣ ಕಾಮಗಾರಿ, ಸಿಂಧುವಳ್ಳಿ ಗೇಟ್ ಬಳಿ ಹಂದಿ ಜೋಗಿ ಸಮುದಾಯಕ್ಕೆ ಬಡಾವಣೆ ನಿರ್ಮಾಣ ಕಾಮಗಾರಿ ಸೇರಿದಂತೆ 3.45 ಕೋಟಿ ವೆಚ್ಚದ ವಿವಿಧ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಿ ಅವರು ಮಾತನಾಡಿದರು. ಹಂದಿ ಜೋಗಿ ಸಮುದಾಯ ಶೈಕ್ಷಣಿಕವಾಗಿ ಸಾಮಾಜಿಕವಾಗಿ ಅತ್ಯಂತ ಹಿಂದುಳಿದ ಸಮಾಜವಾಗಿದ್ದು, ಅವರಿಗೆ ಶೈಕ್ಷಣಿಕ ವ್ಯವಸ್ಥೆ ಮತ್ತು ಮೂಲ ಸೌಕರ್ಯಗಳು ಸೇರಿದಂತೆ ವಿವಿಧ ಸೌಲಭ್ಯಗಳನ್ನು ಕಲ್ಪಿಸಿ ಸಮಾಜದ ಮುಖ್ಯವಾಹಿನಿಗೆ ತರಬೇಕೆಂಬ ಸಂಕಲ್ಪದಿಂದ ನಗರಕ್ಕೆ ಅತ್ಯಂತ ಸಮೀಪದಲ್ಲಿರುವ ಹಾಗೂ ಅತ್ಯಂತ ಬೆಲೆ ಬಾಳುವ ಜಾಗದಲ್ಲಿ ಬಡಾವಣೆ ನಿರ್ಮಿಸಿ ನಿವೇಶನ ಹಂಚಿಕೆ ಮಾಡಿ, ಸರ್ಕಾರದ ವತಿಯಿಂದ ಅನುದಾನವನ್ನು ನೀಡಿ ಮನೆ ನಿರ್ಮಿಸುವ ಮೂಲಕ ಶಾಶ್ವತವಾಗಿ ಸೂರು ಕಲ್ಪಿಸಲಾಗುವುದು ಎಂದರು.ಜೊತೆಗೆ ಹಂದಿ ಜೋಗಿ ಸಮುದಾಯ ಸಮಾಜದ ಮುಖ್ಯವಾಹಿನಿಗೆ ಬರಲು ಸಕಲ ಸೌಲಭ್ಯಗಳನ್ನು ಒದಗಿಸಲಾಗುವುದು, ಈ ನಿಟ್ಟಿನಲ್ಲಿ ಇಂದು ಒಂದು ಕೋಟಿ ವೆಚ್ಚದಲ್ಲಿ ಹಂದಿ ಜೋಗಿ ಬಡಾವಣೆ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಲಾಗಿದ್ದು, ಶೀಘ್ರದಲ್ಲೇ ಬಡಾವಣೆ ನಿರ್ಮಾಣಗೊಂಡು ನಿವೇಶನ ಹಂಚಿಕೆಯಾಗಲಿದೆ ಎಂದರು.ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹೇಶ್, ಸಿ.ಎಂ. ಶಂಕರ್, ಶ್ರೀಕಂಠನಾಯಕ, ಕಾಂಗ್ರೆಸ್ ಉಸ್ತುವಾರಿ ಸೋಮೇಶ್, ಅಕ್ರಮ ಸಕ್ರಮ ಸಮಿತಿ ಸದಸ್ಯ ಹಾಡ್ಯ ಜಯರಾಮ್, ಎಸ್ಸಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಿವಣ್ಣ, ಮುಖಂಡರಾದ ರವಿಕುಮಾರ್, ಶಿವಮೂರ್ತಿ, ಮಹದೇವ, ದಸಂಸ ಸಂಚಾಲಕರಾದ ನಾರಾಯಣ, ಹಂದಿ ಜೋಗಿ ಸಮುದಾಯದ ರಾಜ್ಯಾಧ್ಯಕ್ಷ ವೆಂಕಟರಮಣ, ಕೆಆರ್.ಐ ಡಿಎಲ್ ಎಇಇ ಶೋಭಾ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಸಿದ್ದಲಿಂಗ ಇದ್ದರು.