ಸಾರಾಂಶ
ಕನ್ನಡಪ್ರಭ ವಾರ್ತೆ ಉಡುಪಿ
ಮಲ್ಪೆ ಮೀನುಗಾರಿಕೆ ಬಂದರಿನ ಆಧುನೀಕರಣಕ್ಕೆ ಈಗಾಗಲೇ 22 ಕೋಟಿ ರು. ಟೆಂಡರ್ ಆಗಿದೆ. ಜೂನ್‌ನಲ್ಲಿ ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿ ಶಿಲಾನ್ಯಾಸ ನೆರವೇರಿಸಲಿದ್ದಾರೆ ಎಂದು ರಾಜ್ಯದ ಮೀನುಗಾರಿಕಾ ಸಚಿವ ಮಂಕಾಳ ಎಸ್. ವೈದ್ಯ ತಿಳಿಸಿದ್ದಾರೆ.ಅವರು ಶನಿವಾರ ಮಲ್ಪೆ ಯಾಂತ್ರಿಕ(ಟ್ರಾಲ್) ದೋಣಿ ಮೀನುಗಾರರ ಪ್ರಾಥಮಿಕ ಸಹಕಾರಿ ಸಂಘದ ವತಿಯಿಂದ ಮಲ್ಪೆ ಮೀನುಗಾರಿಕಾ ಬಂದರಿನಲ್ಲಿ ನಿರ್ಮಾಣಗೊಂಡ ಸಾರ್ವಜನಿಕ ಮಹಿಳಾ ಶೌಚಾಲಯ ಮತ್ತು ಶುದ್ಧ ಕುಡಿಯುವ ನೀರಿನ ಘಟಕದ ಉದ್ಘಾಟನಾ ಸಮಾರಂಭದಲ್ಲಿ ಶನಿವಾರ ಭಾಗವಹಿಸಿ ಮಾತನಾಡಿದರು.ಬೋಟುಗಳು ಮೀನು ಖಾಲಿ ಮಾಡಿದ ಮೇಲೆ ಹೊರಗಡೆ ಹೋಗಿ ತಂಗುವ ವ್ಯವಸ್ಥೆಗೆ 1800 ಕೋಟಿ ರು. ಬೇಕಾಗುತ್ತದೆ. ಕೇಂದ್ರ ಸರ್ಕಾರದ ಸಹಕಾರದಿಂದ ಇದಕ್ಕೆ ಬೇಕಾದ ಎಲ್ಲ ಯೋಜನೆಗಳನ್ನು ಸಿದ್ಧಪಡಿಸಲಾಗುತ್ತಿದೆ ಎಂದರು.
ಮೀನುಗಾರರು ಸೈನಿಕರಂತೆ ದಿನದ 24 ಗಂಟೆಯೂ ಮೀನುಗಾರಿಕೆಯ ಜತೆಗೆ ದೇಶದ ಕಾವಲುಗಾರ ಕೆಲಸವನ್ನು ಮಾಡುತ್ತಾರೆ ಎಂದವರು ಶ್ಲಾಘಿಸಿದರು.ಅಧ್ಯಕ್ಷತೆ ವಹಿಸಿದ್ದ ಉಡುಪಿ ಶಾಸಕ ಯಶ್ಪಾಲ್ ಎ. ಸುವರ್ಣ ಮಾತನಾಡಿ, ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಮೀನುಗಾರಿಕಾ ಅಭಿವೃದ್ಧಿಗೆ ಹೆಚ್ಚಿನ ಒತ್ತನ್ನು ನೀಡಬೇಕು. ಮಳೆಗಾಲಕ್ಕೆ ಮೊದಲು ಮೀನುಗಾರಿಕೆ ಸಚಿವರು ಮಲ್ಪೆ ಬಂದರಿಗೆ ಬಂದು ಬಂದರು ಅಧಿಕಾರಿಗಳು, ಮೀನುಗಾರ ಮುಖಂಡರ ಜತೆ ಸಭೆ ನಡೆಸಿ ಸೂಕ್ತ ವ್ಯವಸ್ಥೆಯ ಯೋಜನೆಯನ್ನು ರೂಪಿಸಬೇಕು ಎಂದು ಆಗ್ರಹಿಸಿದರು.
ಮಹಿಳಾ ಶೌಚಾಲಯವನ್ನು ಜಿಲ್ಲಾಧಿಕಾರಿ ಕೆ.ವಿದ್ಯಾಕುಮಾರಿ, ಶುದ್ಧ ಕುಡಿಯುವ ನೀರಿನ ಘಟಕವನ್ನು ಮಂಗಳೂರು ರಿಫೈನರಿ ಮತ್ತು ಪೆಟ್ರೋಲಿಯಂ ಸಿನಿಯರ್ ಮ್ಯಾನೇಜರ್ ಸಿಎಫ್‌ಆರ್ ನಾಗರಾಜ್ ರಾವ್ ಕೆ. ಉದ್ಘಾಟಿಸಿದರು.ಮುಖ್ಯ ಅತಿಥಿಗಳಾಗಿ ಮೀನುಗಾರಿಕೆ ಇಲಾಖೆ ನಿರ್ದೇಶಕ ದಿನೇಶ್ ಕುಮಾರ್ ಕಳ್ಳೇರ್, ಮಲ್ಪೆ ಮೀನುಗಾರ ಸಂಘ ಅಧ್ಯಕ್ಷ ದಯಾನಂದ ಕೆ. ಸುವರ್ಣ, ಕರ್ನಾಟಕ ಕರಾವಳಿ ಮೀನುಗಾರ ಕ್ರಿಯಾ ಸಮಿತಿ ಅಧ್ಯಕ್ಷ ಜಯ ಸಿ. ಕೋಟ್ಯಾನ್ ಮೊದಲಾದವರು ಉಪಸ್ಥಿತರಿದ್ದರು.-------------------
ಟ್ರಾಲ್ ಮೀನುಗಾರರ ಸಹಕಾರಿ ಸಂಘದಿಂದ ಸೇನೆಗೆ 10 ಲಕ್ಷ ರು. ಕೊಡುಗೆಇದೇ ಸಂದರ್ಭದಲ್ಲಿ ಮಲ್ಪೆ ಯಾಂತ್ರಿಕ (ಟ್ರಾಲ್) ದೋಣಿ ಮೀನುಗಾರರ ಪ್ರಾಥಮಿಕ ಸಹಕಾರಿ ಸಂಘದ ವತಿಯಿಂದ ಭಾರತೀಯ ಸೇನೆಗೆ 10 ಲಕ್ಷ ರು. ಪರಿಹಾರ ಧನವನ್ನು ಶಾಸಕರ ಮೂಲಕ ಉಡುಪಿ ಜಿಲ್ಲಾಧಿಕಾರಿಗೆ ನೀಡಲಾಯಿತು.