ಕನ್ನಡಪ್ರಭ ವಾರ್ತೆ ತುರುವೇಕೆರೆ
ತಾಲೂಕಿನ ಸಾರಿಗೇಹಳ್ಳಿ ಕೆರೆಗೆ ಅಡ್ಡಲಾಗಿ ಸುಮಾರು 3.82 ಕೋಟಿ ರು. ವೆಚ್ಚದಲ್ಲಿ ಸೇತುವೆ ನಿರ್ಮಾಣ ಮಾಡಲು ಶಾಸಕ ಎಂ.ಟಿ.ಕೃಷ್ಣಪ್ಪ ಶಂಕುಸ್ಥಾಪನೆ ನೆರವೇರಿಸಿದರು. ಈ ವೇಳೆ ಮಾತನಾಡಿದ ಅವರು, ಕಾಮಗಾರಿ ಹತ್ತಾರು ವರ್ಷಗಳಿಂದ ನೆನೆಗುದಿಗೆ ಬಿದ್ದಿತ್ತು. ಆದರೆ ಈಗ ಸೇತುವೆ ನಿರ್ಮಾಣ ಮಾಡುವ ಕಾಮಗಾರಿಗೆ ಕಾಲ ಕೂಡಿ ಬಂದಿದೆ. ಈ ಕಾಮಗಾರಿಯನ್ನು 2016-17ರಲ್ಲೇ ಮಂಜೂರು ಮಾಡಿಸಲಾಗಿತ್ತು. ಆದರೆ ತಾಂತ್ರಿಕ ಕಾರಣದಿಂದಾಗಿ ಕಾಮಗಾರಿ ವಿಳಂಬವಾಯಿತು. ಈಗ ಕಾಮಗಾರಿ ಆರಂಭಿಸುವ ಕಾಲ ಸನ್ನಿಹಿತವಾಗಿದೆ. ಅಧಿಕಾರಿಗಳು ಮತ್ತು ಗುತ್ತಿಗೆದಾರರು ಲಭ್ಯವಿರುವ ಅನುದಾನದಲ್ಲಿ ಶಾಶ್ವತವಾದ ಉತ್ತಮ ಕಾಮಗಾರಿ ಮಾಡಬೇಕೆಂದು ಸೂಚಿಸಿದರು.ನಮ್ಮ ಪೂರ್ವಜರು ಕಟ್ಟಿದ ಕೆರೆ ಕಟ್ಟೆಗಳನ್ನು ಉಳಿಸುವ ಮೂಲಕ ನೀರಿನ ಹರಿವನ್ನು ಕಾಪಾಡಿಕೊಳ್ಳಬೇಕು. ತಾಲೂಕಿನ ಅತಿದೊಡ್ಡ ಕೆರೆಯಾದ ಮಲ್ಲಾಘಟ್ಟ ಕೆರೆಯನ್ನು ಸುಮಾರು 15 ಕೋಟಿ ರು. ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿದೆ. ಅದೇ ರೀತಿ ಸಾರಿಗೆಹಳ್ಳಿ ಕೆರೆಯನ್ನು ಅಭಿವೃದ್ದಿ ಮಾಡಲಾಗುವುದು. ನಾವು ಯಾರು ಕೆರೆಯನ್ನು ಕಟ್ಟಲು ಸಾಧ್ಯವಿಲ್ಲ. ಇರುವ ಕೆರೆಯನ್ನು ಉಳಿಸಲು ಪಣ ತೊಡಬೇಕಿದೆ. ಉತ್ತಮ ಗುಣಮಟ್ಟದ ಸೇತುವೆ ನಿರ್ಮಾಣ ಮಾಡಿ ರೈತರಿಗೆ ಅನುಕೂಲವಾಗುವಂತಹ ರೀತಿಯಲ್ಲಿ ಕಾಮಗಾರಿ ಮಾಡಬೇಕು ಎಂದು ಶಾಸಕ ಎಂ.ಟಿ.ಕೃಷ್ಣಪ್ಪ ಸೂಚಿಸಿದರು.
ಈ ಸಂದರ್ಭದಲ್ಲಿ ವೀರಶೈವ ಲಿಂಗಾಯಿತ ಮಹಾಸಭಾದ ತಾಲೂಕು ಅಧ್ಯಕ್ಷ ಕುಮಾರಸ್ವಾಮಿ, ಪಿಎಲ್.ಡಿ ಬ್ಯಾಂಕ್ ನಿರ್ದೇಶಕ ಮಾಚೇನಹಳ್ಳಿ ಲೋಕೇಶ್, ಮುಖಂಡರಾದ ಹಟ್ಟಿಹಳ್ಳಿ ರಮೇಶ್, ದೇವರಾಜು, ಜಯಕುಮಾರ ಸ್ವಾಮಿ, ಲೋಕೇಶ್ ಬಾಬು, ಹುಲ್ಲೇಕೆರೆ ಬಾಬು, ಪಿ.ಟಿ.ಗಂಗಾಧರ್, ಜ್ಞಾನೇಶ್, ಪಿಡಿಒ ಕೊರ್ಲಯ್ಯ, ಹೇಮಾವತಿ ಇಲಾಖೆ ಎಇಇ ಶಿವಕುಮಾರ್, ಎ.ಇ ಮಂಜುನಾಥ್, ಗುತ್ತಿಗೆದಾರರ ಮಣಿ ಸೇರಿದಂತೆ ಗ್ರಾಮಸ್ಥರು ಇದ್ದರು.