ದರ್ಬೆಯಲ್ಲಿ ರು. ೫.೫೦ ಕೋಟಿ ವೆಚ್ಚದಲ್ಲಿ ಪುತ್ತೂರು ತಾಲೂಕು ಪಂಚಾಯಿತಿಯಲ್ಲಿ ನಿರ್ಮಾಣಗೊಳ್ಳಲಿರುವ ನೂತನ ಕಚೇರಿ ಕಟ್ಟಡದ ಶಂಕುಸ್ಥಾಪನೆ ಶನಿವಾರ ನೆರವೇರಿತು.
ಪುತ್ತೂರು: ಜಿಲ್ಲಾ ಕೇಂದ್ರವಾಗುವತ್ತ ಹೆಜ್ಜೆ ಇಡುತ್ತಿರುವ ಪುತ್ತೂರಿಗೆ ಪೂರಕವಾಗಿ ಎಲ್ಲಾ ವ್ಯವಸ್ಥೆಗಳನ್ನು ಒಳಗೊಂಡ ಸುಸಜ್ಜಿತ ತಾಲೂಕು ಪಂಚಾಯಿತಿ ಕಟ್ಟಡ ನಿರ್ಮಾಣವಾಗುತ್ತಿದೆ. ನೂತನ ಕಟ್ಟಡ ಕಾಮಗಾರಿ ವರ್ಷದಲ್ಲಿ ಪೂರ್ಣಗೊಳ್ಳಲಿದೆ. ಸರ್ವ ವ್ಯವಸ್ಥೆಗಳನ್ನು ಒಳಗೊಂಡಂತೆ ಸುಸಜ್ಜಿತ ಕಚೇರಿ ಕಟ್ಟಡ ನಿರ್ಮಾಣವಾಗಲಿದೆ ಎಂದು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಹೇಳಿದ್ದಾರೆ.
ಕರ್ನಾಟಕ ಸರ್ಕಾರ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ವತಿಯಿಂದ ದರ್ಬೆಯಲ್ಲಿ ರು. ೫.೫೦ ಕೋಟಿ ವೆಚ್ಚದಲ್ಲಿ ಪುತ್ತೂರು ತಾಲೂಕು ಪಂಚಾಯಿತಿಯಲ್ಲಿ ನಿರ್ಮಾಣಗೊಳ್ಳಲಿರುವ ನೂತನ ಕಚೇರಿ ಕಟ್ಟಡದ ಶಂಕುಸ್ಥಾಪನೆ ನೆರವೇರಿಸಿ ಬಳಿಕ ನಡೆಸ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಅಧಿಕಾರಿಗಳು ಇಚ್ಚಾಶಕ್ತಿಯಿಂದ ಕೆಲಸ ಮಾಡಿದಲ್ಲಿ ಇಂತಹ ಹಲವು ಕಾರ್ಯಗಳನ್ನು ಮಾಡಲು ಸಾಧ್ಯವಿದೆ ಎಂಬುದಕ್ಕೆ ಪುತ್ತೂರಿನ ಕಾರ್ಯ ನಿರ್ವಹಣಾಧಿಕಾರಿಗಳು ಸಾಕ್ಷಿಯಾಗಿದ್ದಾರೆ. ಈ ಕಟ್ಟಡ ಮಂಜೂರಾತಿಯಲ್ಲಿ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ ಪ್ರಯತ್ನ ಬಹಳವಿದೆ. ಇದಕ್ಕಾಗಿ ಅವರು ಕನಿಷ್ಠ ೨೫ಕ್ಕೂ ಅಧಿಕ ಬಾರಿ ಬೆಂಗಳೂರಿಗೆ ಓಡಾಟ ಮಾಡಿದ್ದಾರೆ ಎಂದರು.೨೦೦೦ ಸೈಟ್ ವಿರತಣೆಗೆ ಗುರಿ:
ನಿವೇಶನ ರಹಿತರಿಗೆ ಕನಿಷ್ಠ ೩ ಸೆಂಟ್ಸ್ ನೀಡಬೇಕು ಎಂಬ ನಿಟ್ಟಿನಲ್ಲಿ ಪುತ್ತೂರು ವಿಧಾನಸಭಾ ಕ್ಷೇತ್ರದ ಪುತ್ತೂರು ಹಾಗೂ ಬಂಟ್ವಾಳ ವ್ಯಾಪ್ತಿಗಳಲ್ಲಿ ೨ ಸಾವಿರ ಸೈಟ್‌ಗಳನ್ನು ನೀಡಲು ತಾ.ಪಂ.ಗೆ ಗುರಿ ನೀಡಲಾಗಿದೆ. ಸುಮಾರು ೩೦೦ ಎಕರೆ ಜಾಗವನ್ನು ವಿವಿಧ ಪಂಚಾಯಿತಿ ವ್ಯಾಪ್ತಿಗಳಲ್ಲಿ ಗುರುತಿಸಲಾಗಿದೆ. ರಾಜ್ಯದಲ್ಲೇ ಇದೊಂದು ಮಾದರಿಯ ಯೋಜನೆಯಾಗಿ ಗುರುತಿಸಿಕೊಳ್ಳಲಿದೆ ಎಂದರು.ಪ್ರಾಸ್ತಾವಿಕವಾಗಿ ಮಾತನಾಡಿದ ತಾ.ಪಂ. ಕಾರ್ಯನಿರ್ವಹಣಾಧಿಕಾರಿ ನವೀನ್ ಕುಮಾರ್ ಭಂಡಾರಿ , ಹಿಂದಿನ ಅವಧಿಯಲ್ಲಿತಾ.ಪಂ. ಕಟ್ಟಡ ನಿರ್ಮಾಣಕ್ಕೆ ಮಂಜೂರಾಗಿದ್ದ ಅನುದಾನ ಕಾರಣಾಂತರಗಳಿಂದ ಕಡಬಕ್ಕೆ ವರ್ಗಾವಣೆಗೊಂಡಿತ್ತು. ಬಳಿಕ ಶಾಸಕರ ಅಶೋಕ್ ಕುಮಾರ್ ರೈ ನಿರಂತರ ಪ್ರಯತ್ನ ನಡೆಸಿ ಪುತ್ತೂರಿಗೆ ಈ ದೊಡ್ಡ ಕೊಡುಗೆ ಸಿಗುವಂತೆ ಮಾಡಿದ್ದಾರೆ. ಈ ಕಟ್ಟಡ ಕೇವಲ ತಾ.ಪಂ., ಗ್ರಾ.ಪಂ.ಗಳಿಗೆ ಸೀಮಿತವಾಗಿರದೆ ತಾಲೂಕಿನ ೨೯ ಇಲಾಖೆಗಳಿಗೆ ಸಂಬಂಧಪಟ್ಟ ಕಟ್ಟಡವಾಗುತ್ತದೆ ಎಂದರು.ತಾಲೂಕು ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಉಮಾನಾಥ ಶೆಟ್ಟಿ ಪೆರ್ನೆ, ಪುತ್ತೂರು ನಗರಾಭಿವೃದ್ಧಿ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಅಮಳ ರಾಮಚಂದ್ರ, ಅಕ್ರಮ-ಸಕ್ರಮ ಸಮಿತಿ ಸದಸ್ಯ ಮಹಮ್ಮದ್ ಬಡಗನ್ನೂರು, ಶ್ರೀ ಮಹಾಲಿಂಗೇಶ್ವರ ದೇವಾಲಯದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ, ಪಂಚಾಯತ್ ರಾಜ್ ಎಂಜಿನಿಯರಿಂಗ್ ಇಲಾಖೆಯ ಎ.ಇ.ಇ. ಭರತ್ ಬಿ.ಎಂ. ಹಾಜರಿದ್ದರು.ತಾ.ಪಂ.ನ ಸಿಬ್ಬಂದಿ ಭರತ್ ರಾಜ್ ನಿರ್ವಹಿಸಿ, ವಂದಿಸಿದರು.