ಕರ್ನಾಟಕ ಪಬ್ಲಿಕ್ ಶಾಲೆಗೆ ಮೇಲ್ದರ್ಜೇಗೇರಿಸಲು ಅಗತ್ಯ ಕ್ರಮ

| Published : Sep 20 2024, 01:36 AM IST

ಸಾರಾಂಶ

ಬಡವರ ಮಕ್ಕಳೇ ಸರ್ಕಾರಿ ಶಾಲೆಗಳಲ್ಲಿ ಹೆಚ್ಚಾಗಿ ವ್ಯಾಸಂಗ ಮಾಡುವ ಕಾರಣ ಶಾಲೆಗಳ ಅಭಿವೃದ್ಧಿ ಶಿಕ್ಷಕರ ಮೇಲಿದೆ.

ಕನ್ನಡಪ್ರಭ ವಾರ್ತೆ ಮೈಸೂರು

ಮಂಡಕಳ್ಳಿಯ ಶಾಲೆಯನ್ನು ಕರ್ನಾಟಕ ಪಬ್ಲಿಕ್ ಶಾಲೆಯನ್ನಾಗಿ ಮೇಲ್ದರ್ಜೇಗೇರಿಸಲು ಬೇಕಾದ ಕ್ರಮವನ್ನು ಕೈಗೊಳ್ಳಲಾಗುವುದು. ಶಾಲೆಯು ಮಾದರಿಯಾಗಿ ರೂಪುಗೊಂಡರೆ ಆಯ್ಕೆ ಮಾಡಬಹುದು ಎಂದು ಶಾಸಕ ಜಿ.ಟಿ. ದೇವೇಗೌಡ ತಿಳಿಸಿದರು.

ಮೈಸೂರು ತಾಲೂಕಿನ ಮಂಡಕಳ್ಳಿ ಗ್ರಾಮದ ಸರ್ಕಾರಿ ಶಾಲೆಗೆ ಲಯನ್ಸ್ ಸಂಸ್ಥೆಯವರು ಕಟ್ಟಿಸಿ ಕೊಡುತ್ತಿರುವ ಶೌಚಾಲಯ, ಕಾಂಪೌಂಡ್, ಕುಡಿಯುವ ನೀರಿನ ಘಟಕದ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು,

ಬಡವರ ಮಕ್ಕಳೇ ಸರ್ಕಾರಿ ಶಾಲೆಗಳಲ್ಲಿ ಹೆಚ್ಚಾಗಿ ವ್ಯಾಸಂಗ ಮಾಡುವ ಕಾರಣ ಶಾಲೆಗಳ ಅಭಿವೃದ್ಧಿ ಶಿಕ್ಷಕರ ಮೇಲಿದೆ. ಕ್ಷೇತ್ರದಲ್ಲಿ ಬರುವ ಸರ್ಕಾರಿ ಶಾಲಾ ಕಾಲೇಜುಗಳ ಜಾಗದ ಸುತ್ತಲೂ ಕಾಂಪೌಂಡ್ ಹಾಕಿಸಿ ಸಂರಕ್ಷಣೆ ಮಾಡಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.

ಶಾಲೆಗಳ ಸುತ್ತಮುತ್ತಲ ಜಾಗದಲ್ಲಿ ಕಾಂಪೌಂಡ್ ನಿರ್ಮಾಣ ಮಾಡಿಸಬೇಕು. ಅದಕ್ಕೆ ತಕ್ಕಂತೆ ಸ್ಕೆಚ್, ಖಾತೆ ಮಾಡಿಸಬೇಕು. ಪಿಡಿಒ, ಗ್ರಾಮ ಲೆಕ್ಕಾಧಿಕಾರಿಗಳು ಜಂಟಿಯಾಗಿ ಸೇರಿ ಆಯಾಯ ಶಾಲೆಗಳ ಮುಖ್ಯೋಪಾಧ್ಯಾಯರು ಕುಳಿತು ಬೇಗನೆ ಕೆಲಸ ಮುಗಿಸಬೇಕು ಎಂದು ಅವರು ಸೂಚಿಸಿದರು.

ಗ್ರಾಮಸ್ಥರು ನಮ್ಮೂರಿನ ಶಾಲೆಗಳ ಅಭಿವೃದ್ಧಿ ಬಗ್ಗೆ ಯೋಚಿಸಬೇಕು. ಅಧಿಕಾರಿಗಳಿಗೆ ಮತ್ತು ಜನಪ್ರತಿನಿಧಿಗಳಿಗೆ ಮನವರಿಕೆ ಮಾಡಿಕೊಡಬೇಕು. ಯಾವುದೇ ಊರಾಗಲೀ, ಯಾವುದೇ ವಿಚಾರವಾಗಲೀ ನಾನು ರಾಜಕೀಯ ಮಾಡಲ್ಲ. ಶಿಕ್ಷಣಕ್ಕೆ ಸಂಬಂಧಿಸಿದಂತೆ ಬೇರೆಯವರು ರಾಜಕಾರಣ ಮಾಡುತ್ತಾರೆ. ಆದರೆ, ನಾನು ಅದಕ್ಕೆ ತಲೆ ಹಾಕಲ್ಲ ಎಂದು ಅವರು ಹೇಳಿದರು.

ಸರ್ಕಾರಿ ಶಾಲೆಗಳಲ್ಲಿ ಬರೀ ಬಡವರ ಮಕ್ಕಳು ಮಾತ್ರ ಓದುತ್ತಾರೆ. ಹಣವುಳ್ಳವರು ದೊಡ್ಡ ದೊಡ್ಡ ಕಾನ್ವೆಂಟ್‌ ಗಳಲ್ಲಿ ಓದಿಸುತ್ತಾರೆ. ಶಿಕ್ಷಕರು ಮಕ್ಕಳನ್ನು ತಮ್ಮ ಮಕ್ಕಳೆಂದು ಕಾಣಬೇಕು. ಮುಖ್ಯೋಪಾಧ್ಯಾಯರು ತಾಯಿಯ ಸಮಾನದಲ್ಲಿ ನಿಂತು ಸಹ ಶಿಕ್ಷಕರನ್ನು ಮಕ್ಕಳಂತೆ ಕಂಡುಒಟ್ಟಿಗೆ ಹೋಗಬೇಕು. ಶಾಲೆಗಳ ಅಭಿವೃದ್ಧಿ ಶಿಕ್ಷಕರ ಮೇಲೆ ನಿಂತಿರುವುದನ್ನು ನಾವು ಗಮನಿಸಬೇಕಾಗಿದೆ ಎಂದರು.

ಡಿಡಿಪಿಐ ಜವರೇಗೌಡ, ಮುಖಂಡರಾದ ಲೋಕೇಶ್, ಬೀರೇಗೌಡ, ರಾಮೇಗೌಡ, ಚಂದ್ರಶೇಖರ್, ಲಯನ್ಸ್ ಸಂಸ್ಥೆಯ ಮಮತಾ, ಸುಬ್ರಹ್ಮಣ್ಯ, ಮೂರ್ತಿ, ಜಯಕುಮಾರ್, ಶ್ರೀನಿವಾಸ್ ಮೊದಲಾದವರು ಇದ್ದರು.