ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರುವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ ಹಲವು ಕ್ಷೇತ್ರಗಳಲ್ಲಿ ಉತ್ತಮ ಅವಕಾಶಗಳಿವೆ. ವಿದ್ಯಾರ್ಥಿಗಳು ಯಾವುದೇ ಕಂಪನಿಯಲ್ಲಿ ಅಕೌಂಟೆಂಟ್ಅಥವಾ ಫೈನಾನ್ಸ್ ಆಫೀಸರ್ ಆಗಿ ಸೀಮಿತವಾಗಿ ಇರಬೇಡಿ ಎಂದು ಮೈಸೂರಿನ ವಿನ್ಯಾಸ್ ಇನ್ನೋವೇಟೀವ್ ಟೆಕ್ನಾಲಜೀಸ್ ಲಿಮಿಟೆಡ್ ನ ಸಂಸ್ಥಾಪಕ ವ್ಯವಸ್ಥಾಪಕ ನಿರ್ದೇಶಕ ನರೇಂದ್ರ ನಾರಾಯಣನ್ ಅಭಿಪ್ರಾಯಪಟ್ಟರು.ನಗರದ ವಿದ್ಯಾವರ್ಧಕ ಪ್ರಥಮ ದರ್ಜೆ ಕಾಲೇಜಿನ ಸ್ನಾತಕೋತ್ತರ ಕೇಂದ್ರದಲ್ಲಿ ಶನಿವಾರ ಆಯೋಜಿಸಿದ್ದ ಅಂತಿಮ ವರ್ಷದ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಕಾರ್ಯಕ್ರಮ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳ ವೇದಿಕೆಯ ಕಾರ್ಯಚಟುವಟಿಕೆಗಳ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ಸ್ವಂತ ಕೈಗಾರಿಕೆಗಳನ್ನು ಸ್ಥಾಪಿಸುವ ಹಾಗೂ ಸ್ವತಃ ಉದ್ಯಮಿಗಳಾಗುವ ಅವಕಾಶಗಳು ನಿಮಗಿದೆ. ಈ ಡಿಜಿಟಲ್ ಕ್ರಾಂತಿಯ ಯುಗದಲ್ಲಿ ಬೋಧನಾ ವೃತ್ತಿಯನ್ನು ಸಹ ನೀವು ಆಯ್ಕೆಮಾಡಿಕೊಳ್ಳಬಹುದು ಮತ್ತು ಸಂಶೋಧನೆಯನ್ನು ಮಾಡಬಹುದು ಎಂದು ತಿಳಿಸುತ್ತಾ ತಮ್ಮ ಸ್ವಂತ ಅನುಭವವನ್ನು ಹಂಚಿಕೊಂಡರು.ಪ್ರಾಂಶುಪಾಲ ಡಾ.ಎಸ್. ಮರೀಗೌಡ ಮಾತನಾಡಿ, ಶೈಕ್ಷಣಿಕ ವರ್ಷದ ಸ್ನಾತಕೋತ್ತರ ವಿಭಾಗದ ವಿದ್ಯಾರ್ಥಿಗಳ ಕಾರ್ಯಚಟುವಟಿಕೆಗಳ ಕುರಿತು ಮೆಚ್ಚುಗೆಯ ಮಾತುಗಳನ್ನಾಡಿದರು. ಸ್ನಾತಕೋತ್ತರ ವಿಭಾಗದ ಪಠ್ಯ ಚಟುವಟಿಕೆಗಳು ಸಹಪಠ್ಯ ಚಟುವಟಿಕೆಗಳು ಯಶಸ್ವಿಯಾಗಿ ನಡೆಯುತ್ತಿವೆ. ವಿದ್ಯಾರ್ಥಿಗಳು ಅವರ ಯಶಸ್ವಿ ಶೈಕ್ಷಣಿಕ ಜೀವನದಲ್ಲಿ ಗುರಿಗಳನ್ನು ಹೊಂದಿರಬೇಕೆಂದು ಒತ್ತಾಯಿಸಿದರು.
ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷ ಗುಂಡಪ್ಪಗೌಡ ಮಾತನಾಡಿ, ಭವಿಷ್ಯದಲ್ಲಿ ವಾಣಿಜ್ಯ ಪದವೀಧರರು ಜಗತ್ತನ್ನು ಆಳಲಿದ್ದಾರೆ ಎಂದು ಅಭಿಪ್ರಾಯಪಟ್ಟರು. ವಾಣಿಜ್ಯ ಕ್ಷೇತ್ರದ ವಿದ್ಯಾರ್ಥಿಗಳಿಗೆ ಹಣಕಾಸು ಮತ್ತು ಕೈಗಾರಿಕಾ ಕ್ಷೇತ್ರಗಳಲ್ಲಿ ಹೆಚ್ಚು ಉದ್ಯೋಗಾವಕಾಶವಿದ್ದು, ಸ್ಪರ್ಧಾತ್ಮಕ ಪರೀಕ್ಷೆಗಳನ್ನು ತೆಗೆದುಕೊಳ್ಳಬೇಕೆಂದು ತಿಳಿಸುತ್ತಾ ಪ್ರಾಮಾಣಿಕತೆ ಮತ್ತು ಸಮಯ ಪಾಲನೆಯೊಂದಿಗೆ ವೃತ್ತಿ ಜೀವನವನ್ನು ಯಶಸ್ವಿ ಗೊಳಿಸಿಕೊಳ್ಳಬೇಕು ಎಂದರು.2023-24ನೇ ಸಾಲಿನ ಕ್ರೀಡಾಕೂಟದಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನವನ್ನು ವಿತರಿಸಿದರು. 2022-23ನೇ ಶೈಕ್ಷಣಿಕ ಸಾಲಿನಲ್ಲಿ ಉತ್ತಮ ಅಂಕಗಳನ್ನು ಪಡೆದ ವಿದ್ಯಾರ್ಥಿಗಳನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಿತು.
ವಿದ್ಯಾರ್ಥಿ ಸಿ.ಎಸ್. ದರ್ಶನ್ ಪ್ರಾರ್ಥಿಸಿದರು. ಡಾ.ಎಸ್. ಪೂರ್ಣಿಮ ಸ್ವಾಗತಿಸಿ, ಅನ್ನಪೂರ್ಣ ವಂದಿಸಿದರು. ಕೆ.ಎನ್. ರೂಪ ಹಾಗೂ ಶ್ರೇಯಸ್ಕಾಂತ್ ನಿರೂಪಿಸಿದರು. ಅಧ್ಯಾಪಕರು, ಅಧ್ಯಾಪಕೇತರರು, ಹಿರಿಯ ವಿದ್ಯಾರ್ಥಿಗಳು ಹಾಗೂ ಪ್ರಸಕ್ತ ಸಾಲಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು.