ಸಾರಾಂಶ
ಕನ್ನಡಪ್ರಭ ವಾರ್ತೆ ಮಡಿಕೇರಿ ಪ್ರತಿಭಾ ಕಾರಂಜಿ ಮಕ್ಕಳ ಪ್ರತಿಭೆ ಅಭಿವ್ಯಕ್ತಪಡಿಸಲು ಸೂಕ್ತ ವೇದಿಕೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪ ನಿರ್ದೇಶಕ ಚಂದ್ರಕಾಂತ್ ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ನಗರದ ಸಂತ ಮೈಕಲರ ಶಾಲೆಯಲ್ಲಿ ಗುರುವಾರ ನಡೆದ ಕೊಡಗು ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಸ್ಪರ್ಧಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.ಪ್ರತಿಭಾ ಕಾರಂಜಿಯು ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಸಹಕಾರಿಯಾಗಿದೆ. ವಿದ್ಯಾರ್ಥಿಗಳ ಆಸಕ್ತಿ ಅಭಿರುಚಿ ಗುರುತಿಸಿ ಮುಂದಿನ ದಿನಗಳಲ್ಲಿ ಉತ್ತಮ ಭವಿಷ್ಯ ರೂಪಿಸಲು ಉತ್ತಮ ವೇದಿಕೆಯಾಗಿದೆ. ಕೊಡಗು ಜಿಲ್ಲೆಯಿಂದ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿ ಯಶಸ್ಸು ಗಳಿಸಬೇಕು ಎಂದು ಸಲಹೆ ಮಾಡಿದರು.
ಜಿಲ್ಲಾ ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಸಿ.ಟಿ.ಸೋಮಶೇಖರ್ ಅವರು ಮಾತನಾಡಿ ಎಲೆ ಮರೆಯ ಕಾಯಿಯಂತೆ ಗೂಡಿನಲ್ಲಿ ಇರುವವರಿಗೆ ಪ್ರತಿಭೆ ಹೊರತರಲು ಸೂಕ್ತ ವೇದಿಕೆಯಾಗಿದೆ ಎಂದರು.ವಿದ್ಯಾರ್ಥಿಗಳು ಪ್ರತಿಭಾ ಕಾರಂಜಿ ಕಾರ್ಯಕ್ರಮವನ್ನು ಸದುಪಯೋಗ ಪಡಿಸಿಕೊಳ್ಳಬೇಕು. ಆಸಕ್ತಿ ಇರುವ ಕ್ಷೇತ್ರದಲ್ಲಿ ಸಾಧನೆ ಮಾಡಲು ಪ್ರೌಢ ಹಂತ ಮೊದಲ ಮೆಟ್ಟಿಲು ಇದನ್ನು ಗುರುತಿಸಿ ಅವಕಾಶ ನೀಡುವಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದಾಗಿದ್ದು, ಪೋಷಕರಿಗೆ, ಶಿಕ್ಷಕರಿಗೆ ಕೀರ್ತಿ ತರುವಂತಾಗಲಿ ಎಂದು ಕೋರಿದರು.
ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಸಹ ಕಾರ್ಯದರ್ಶಿಯಾದ ಎಸ್.ಎ.ಯೋಗೇಶ್ ಮಾತನಾಡಿ ಸಾಹಿತ್ಯ ಸಂಗೀತ, ಕಲೆ, ಹಾಡುಗಾರಿಕೆ, ನೃತ್ಯ ಹೀಗೆ ಹಲವು ಚಟುವಟಿಕೆಗಳು ಜೀವನದಲ್ಲಿ ಯಶಸ್ಸು ತಂದುಕೊಡುತ್ತದೆ. ಕ್ರೀಡೆ ದೈಹಿಕ ಆರೋಗ್ಯ ನೀಡುತ್ತದೆ. ಹಾಗೆಯೇ ನೃತ್ಯ ಸಂಗೀತ ಮಾನಸಿಕ ಆರೋಗ್ಯ ನೀಡುತ್ತದೆ ಎಂದು ತಿಳಿಸಿದರು.ಜಿಲ್ಲಾ ಉಪ ಯೋಜನಾ ಸಂಯೋಜಕರಾದ ಸೌಮ್ಯ ಪೊನ್ನಪ್ಪ ಮಾತನಾಡಿ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವಲ್ಲಿ ಪೋಷಕರ ಪಾತ್ರ ಹಾಗೂ ಶಿಕ್ಷಕರ ಪಾತ್ರ ಮಹತ್ತರದಾಗಿದೆ. ವಿದ್ಯಾರ್ಥಿಗಳು ಗೆಲುವಿಗೆ ಪ್ರಾಮುಖ್ಯತೆ ನೀಡದೆ ಭಾಗವಹಿಸುವಿಕೆಗೆ ಪ್ರಾಮುಖ್ಯತೆ ನೀಡಬೇಕು ಯಶಸ್ಸು ಇಂದಲ್ಲ ನಾಳೆ ಕಾಣಬಹುದು ಭಾಗವಹಿಸುವಿಕೆಯ ಮನೋಭಾವ ಇದ್ದರೆ ಸಾಧಿಸುವ ಮೆಟ್ಟಿಲು ತೆರೆದಂತೆ ಎಂದು ತಿಳಿಸಿದರು.
ಜನಪದ ಗೀತೆ, ನೃತ್ಯ, ಸಂಗೀತ, ಭರತನಾಟ್ಯ, ಕೋಲಾಟ, ರಂಗೋಲಿ ಸ್ಪರ್ಧೆ, ಛದ್ಮವೇಷ, ಛಾಯಾಚಿತ್ರ ಮತ್ತಿತರ ಸ್ಪರ್ಧೆಗಳು ಜರುಗಿದವು. ವಿದ್ಯಾರ್ಥಿಗಳು ಭಾಗವಹಿಸಿ ಬಹುಮಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾದರು.ಜಿಲ್ಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷರಾದ ಸದಾಶಿವ ಪಲ್ಲೇದ್, ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಮೋಹನ್ ಪೆರಾಜೆ, ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷರಾದ ಕಿರಣ್ ಪಿಎಂ, ವಿಜ್ಞಾನ ಪರಿಷತ್ತಿನ ಅಧ್ಯಕ್ಷರಾದ ಟಿ.ಜಿ.ಪ್ರೇಮ್‌ಕುಮಾರ್ ಮತ್ತಿತರರು ಇದ್ದರು.
;Resize=(128,128))
;Resize=(128,128))
;Resize=(128,128))
;Resize=(128,128))
;Resize=(128,128))