ಮಕ್ಕಳು ದೇವರಿಗೆ ಸಮಾನ. ವಿದ್ಯಾರ್ಥಿ ಜೀವನದಲ್ಲಿ ಅವರೆಲ್ಲರ ಮನಸ್ಸು ಹಸಿ ಗೋಡೆ ಇದ್ದಂತೆ. ಈ ಅವಧಿಯಲ್ಲಿ ಅವರಿಗೆ ಒಳ್ಳೆಯ ವಿಚಾರಧಾರೆಗಳನ್ನು ಅಳವಡಿಸಿಕೊಳ್ಳುವಂತೆ ಮಾಡಬೇಕು.
ಕನ್ನಡಪ್ರಭ ವಾರ್ತೆ ರಾಮನಗರ
ಪ್ರತಿಭಾ ಕಾರಂಜಿ ಮಕ್ಕಳಲ್ಲಿ ಅಡಗಿರುವ ಸುಪ್ತ ಪ್ರತಿಭೆ ಅನಾವರಣ ಮಾತ್ರವಲ್ಲದೆ ಸ್ಪರ್ಧಾತ್ಮಕ ಮನೋಭಾವ ಮತ್ತು ಆತ್ಮವಿಶ್ವಾಸ ಬೆಳೆಸಲು ಸಹಕಾರಿಯಾಗಿದೆ ಎಂದು ಶಾಸಕ ಇಕ್ಬಾಲ್ ಹುಸೇನ್ ಹೇಳಿದರು.ನಗರದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು (ಪ್ರೌಢಶಾಲಾ ವಿಭಾಗ) ಆವರಣದಲ್ಲಿ ಜಿಪಂ, ರಾಮನಗರ ತಾಪಂ ಹಾಗೂ ಶಾಲಾ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ 2025-26 ಕಾರ್ಯಕ್ರಮ ಉದ್ಘಾಟಿಸಿದ ಅವರು, ಮಕ್ಕಳಲ್ಲಿ ಶಿಕ್ಷಣ, ಮನರಂಜೆ ಹಾೂಗ ವ್ಯಕ್ತಿತ್ವ ವಿಕಸನಕ್ಕೆ ಉತ್ತಮ ವೇದಿಕೆಯಾಗಿದೆ ಎಂದು ಹೇಳಿದರು.
ಮಕ್ಕಳು ದೇವರಿಗೆ ಸಮಾನ. ವಿದ್ಯಾರ್ಥಿ ಜೀವನದಲ್ಲಿ ಅವರೆಲ್ಲರ ಮನಸ್ಸು ಹಸಿ ಗೋಡೆ ಇದ್ದಂತೆ. ಈ ಅವಧಿಯಲ್ಲಿ ಅವರಿಗೆ ಒಳ್ಳೆಯ ವಿಚಾರಧಾರೆಗಳನ್ನು ಅಳವಡಿಸಿಕೊಳ್ಳುವಂತೆ ಮಾಡಬೇಕು. ಆಗ ಮಾತ್ರ ಸಮಾಜಕ್ಕೆ ಉತ್ತಮ ನಾಗರೀಕನಾಗಿ ರೂಪುಗೊಳ್ಳಲು ಸಾಧ್ಯ. ಪ್ರತಿಯೊಬ್ಬರಿಗೂ ವಿದ್ಯಾರ್ಥಿ ಜೀವನ ಪ್ರಮುಖ ಘಟ್ಟ. ವಿದ್ಯಾವಂತರಾಗಲು ಮತ್ತು ಜ್ಞಾನವಂತರಾಗಲು ಎಲ್ಲರಿಗೂ ಅವಕಾಶ ಸಿಗುವುದಿಲ್ಲ. ಅದನ್ನು ಸದುಪಯೋಗ ಪಡಿಸಿಕೊಂಡು ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲೂ ಮಕ್ಕಳು ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದು ತಿಳಿಸಿದರು.ಭವಿಷ್ಯದಲ್ಲಿ ಯಾವ ಮಕ್ಕಳು ಯಾವ ಸ್ಥಾನ ಅಲಂಕರಿಸುತ್ತಾರೊ ಊಹಿಸಲು ಸಾಧ್ಯವಿಲ್ಲ. ಸಮಾಜದ ಮುಖ್ಯ ವಾಹಿನಿಗೆ ಬರಲು ಶ್ರಮ ವಹಿಸಬೇಕು. ಸರ್ಕಾರ ಮಕ್ಕಳ ಶಿಕ್ಷಣಕ್ಕಾಗಿ ಹೆಚ್ಚಿನ ಒತ್ತು ನೀಡುತ್ತಿದ್ದು, ಎಲ್ಲ ಸವಲತ್ತುಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಕ್ರೀಡೆಗಳಲ್ಲಿ ಸೋಲು ಗೆಲುವು ಸಹಜ. ಎರಡನ್ನೂ ಸಮಾನವಾಗಿ ಸ್ವೀಕಾರ ಮಾಡಬೇಕು. ಗೆದ್ದ ಮಾತ್ರಕ್ಕೆ ಹಿಗ್ಗದೆ, ಸೋಲಿನಿಂದ ಕುಗ್ಗಬಾರದು. ಸೋಲನ್ನು ಮುಂದಿನ ಗೆಲುವಿಗೆ ಮೆಟ್ಟಿಲು ಮಾಡಿಕೊಳ್ಳಬೇಕು. ಪ್ರತಿಯೊಬ್ಬ ಮಕ್ಕಳು ಕ್ರೀಡಾ ಮನೋಭಾವನೆ ಮೈಗೂಡಿಸಿಕೊಳ್ಳಬೇಕು ಎಂದು ಇಕ್ಬಾಲ್ ಹುಸೇನ್ ಕಿವಿಮಾತು ಹೇಳಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಸೋಮಲಿಂಗಯ್ಯ ಮಾತನಾಡಿ, ಮಗುವಿನಲ್ಲಿರುವ ಸಾಂಸ್ಕೃತಿಕ ಚಟುವಟಿಕೆ ಗುರುತಿಸಿ, ಪ್ರೋತ್ಸಾಹಿಸುವುದು ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ. ಮಕ್ಕಳಲ್ಲಿ ಅದ್ಭುತ ಪ್ರತಿಭಗಳಿದ್ದು, ಅದನ್ನು ತೋರ್ಪಡಿಸಲು ಇಂತಹ ವೇದಿಕೆಗಳು ಸಹಕಾರಿಯಾಗಿವೆ. ಮಕ್ಕಳ ಭವಿಷ್ಯಕ್ಕೆ ಶಿಕ್ಷಕರನ್ನು ಮಾತ್ರ ಹೊಣೆ ಮಾಡದೇ ಪೋಷಕರೂ ಹೆಚ್ಚಿನ ಆಸಕ್ತಿ ವಹಿಸಬೇಕು ಎಂದು ತಿಳಿಸಿದರು.ಸಮಾರಂಭದಲ್ಲಿ ಜಿಲ್ಲಾ ಗ್ಯಾರಂಟಿ ಯೋಜನೆ ಸಮಿತಿ ಅಧ್ಯಕ್ಷ ಕೆ.ರಾಜು, ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ (ಶಶಿ), ರಾಮನಗರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎ.ಬಿ.ಚೇತನ್ ಕುಮಾರ್, ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಕೆ.ಸತೀಶ್,ನಗರಸಭೆ ಸದಸ್ಯರಾದ ಬೈರೇಗೌಡ, ಅಣ್ಣು, ಸಮದ್, ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ವಿಜಯ್ ಕುಮಾರ್, ಪದಾಧಿಕಾರಿ ಗಳಾದ ಸತೀಶ್, ಶಿವಸ್ವಾಮಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ರುದ್ರಾಣಮ್ಮ ಮತ್ತಿತರರು ಇದ್ದರು.
ಹೋಬಳಿ ಹಂತದಲ್ಲಿ ವಿಜೇತರಾದ ಮಕ್ಕಳು ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.