ಪೇದೆಗಳ ಮೇಲೆ ಹಲ್ಲೆ ಮಾಡಿದ್ದ ನಾಲ್ವರ ಬಂಧನ

| Published : Apr 20 2025, 01:57 AM IST

ಸಾರಾಂಶ

ರಾಮನಗರ: ಚನ್ನಪಟ್ಟಣ ಸಂಚಾರ ಪೊಲೀಸ್ ಠಾಣೆ ಪೇದೆಗಳ ಮೇಲೆ ಹಲ್ಲೆ ನಡೆಸಿ ಬೈಕ್ ಕಿತ್ತುಕೊಂಡು ಪರಾರಿಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಮನಗರ ಪುರ ಠಾಣೆ ಪೊಲೀಸರು ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕ ಸೇರಿದಂತೆ ನಾಲ್ವರನ್ನು ಬಂಧಿಸಿದ್ದಾರೆ.

ರಾಮನಗರ: ಚನ್ನಪಟ್ಟಣ ಸಂಚಾರ ಪೊಲೀಸ್ ಠಾಣೆ ಪೇದೆಗಳ ಮೇಲೆ ಹಲ್ಲೆ ನಡೆಸಿ ಬೈಕ್ ಕಿತ್ತುಕೊಂಡು ಪರಾರಿಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಮನಗರ ಪುರ ಠಾಣೆ ಪೊಲೀಸರು ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕ ಸೇರಿದಂತೆ ನಾಲ್ವರನ್ನು ಬಂಧಿಸಿದ್ದಾರೆ.

ನಗರದ ಬೀಡಿ ಕಾಲೋನಿ ವಾಸಿಗಳಾದ ಯುಸೂಫ್ ಖಾನ್, ಫೈರೋಜ್ ಖಾನ್ ಹಾಗೂ ಸಮೀರ್ ಖಾನ್ ಬಂಧಿತರು.

ಚನ್ನಪಟ್ಟಣ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಬೆಂಗಳೂರು- ಮೈಸೂರು ಹೆದ್ದಾರಿಯ ಕೆಂಗಲ್ ಬಳಿ ಅಪರಿಚಿತ ಯುವಕರು ತಮ್ಮ ಜೀವಕ್ಕೆ ಹಾಗೂ ಸಾರ್ವಜನಿಕರ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ದ್ವಿಚಕ್ರ ವಾಹನದಲ್ಲಿ ವೀಲ್ಹಿಂಗ್ ಮಾಡುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

ಈ ಸಂಬಂಧ 2025ರ ಏಪ್ರಿಲ್ 15ರಂದು ಚನ್ನಪಟ್ಟಣ ಸಂಚಾರ ಠಾಣೆ ಮೊ.ಸಂ: 53/2025 ಕಲಂ 281, BNS 129, 184, 189 IMV ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ನಂತರ ಆರೋಪಿಗಳನ್ನು ಪತ್ತೆ ಮಾಡಿ ನೋಟಿಸ್ ಜಾರಿ ಮಾಡಲು ಪೇದೆಗಳಾದ ಜಯಕುಮಾರ್ ಮತ್ತು ಬಸವರಾಜ ಓನಿಮಣಿ ಹೋಗಿದ್ದರು.

ಈ ಸಂದರ್ಭದಲ್ಲಿ ಬಂಧಿತ ಆರೋಪಿಗಳು ಪೊಲೀಸ್ ಸಿಬ್ಬಂದಿಗೆ ಅವಾಚ್ಯ ಶಬ್ದಗಳಿಂದ ಬೈದು, ಹಲ್ಲೆ ಮಾಡಿ, ಸರ್ಕಾರಿ ಕೆಲಸಕ್ಕೆ ಅಡ್ಡಿ ಪಡಿಸಿ, ಕರ್ತವ್ಯಕ್ಕೆ ಬಳಸಿದ್ದ ದ್ವಿಚಕ್ರ ವಾಹನವನ್ನು ಕಿತ್ತುಕೊಂಡು ಹೋಗಿದ್ದರು.

ಈ ಬಗ್ಗೆ ಪೇದೆಗಳು ನೀಡಿದ ದೂರಿನ ಮೇರೆಗೆ ರಾಮನಗರ ಪುರ ಪೊಲೀಸ್ ಠಾಣೆ ಮೊ.ಸಂ:47/2025 ಕಲಂ:132, 352, 310 BNS ರೀತ್ಯಾ ಪ್ರಕರಣ ದಾಖಲಿಸಲಾಗಿತ್ತು. ಸದರಿ ಪ್ರಕರಣದಲ್ಲಿ ತನಿಖೆ ಕೈಗೊಂಡು, ತಲೆ ಮರೆಸಿಕೊಂಡಿದ್ದ ಆರೋಪಿಗಳ ಪತ್ತೆಗಾಗಿ ಮಾಹಿತಿ ಸಂಗ್ರಹಿಸಿ, ಮೂವರು ಆರೋಪಿಗಳನ್ನು ಹಾಗೂ ಓರ್ವ ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕನನ್ನು ವಶಕ್ಕೆ ಪಡೆದು, ದರೋಡೆ ಮಾಡಲಾಗಿದ್ದ ದ್ವಿಚಕ್ರ ವಾಹನವನ್ನು ಅಮಾನತ್ತು ಪಡಿಸಿಕೊಂಡಿದ್ದಾರೆ.

ಪೊಲೀಸರು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.

19ಕೆಆರ್ ಎಂಎನ್ 9,10,11.ಜೆಪಿಜಿ

9.ಯುಸೂಫ್ ಖಾನ್

10.ಫೈರೋಜ್ ಖಾನ್

11.ಸಮೀರ್ ಖಾನ್