ಸಾರಾಂಶ
ಕನ್ನಡಪ್ರಭ ವಾರ್ತೆ ತಿಪಟೂರು
ಇಲ್ಲಿನ ಎಪಿಎಂಸಿ ಆವರಣದಲ್ಲಿ ತೆರೆಯಲಾಗಿರುವ ರಾಗಿ ಖರೀದಿ ಕೇಂದ್ರದ ವ್ಯವಸ್ಥೆ ಬಗ್ಗೆ ಕನ್ನಡಪ್ರಭ ಪತ್ರಿಕೆಯಲ್ಲಿ ಸುದ್ದಿ ಪ್ರಕಟವಾದ ಕಾರಣ ಎಚ್ಚೆತ್ತುಕೊಂಡ ಅಧಿಕಾರಿಗಳು ನಾಲ್ಕು ಕೌಂಟರ್‌ಗಳನ್ನು ತೆರೆದು ಕುಡಿಯುವ ನೀರಿನ ವ್ಯವಸ್ಥೆ, ನೆರಳಿನ ವ್ಯವಸ್ಥೆಯನ್ನು ಕಲ್ಪಿಸಿದ್ದಾರೆ.ಕಂಪ್ಯೂಟರ್‌ನಲ್ಲಿ ಎಂಟ್ರಿ ಮಾಡಿಕೊಳ್ಳಲು ನಾಲ್ಕು ಜನರನ್ನು ನೇಮಿಸಲಾಗಿದ್ದು ಈಗ ರೈತರು ಊಟ-ತಿಂಡಿ ಬಿಟ್ಟು ಗಂಟೆ ಗಟ್ಟಲೆ ಕಾಯುವ ಬದಲು ಬಹುಬೇಗನೆ ತಮ್ಮ ಹೆಸರುಗಳನ್ನು ನೊಂದಾಯಿಸಿಕೊಳ್ಳುತ್ತಿದ್ದಾರೆ. ಇಲ್ಲಿಯವರೆಗೆ ತಾಲೂಕಿನಲ್ಲಿ 3725 ಜನ ರೈತರು ತಮ್ಮ ಹೆಸರನ್ನು ನೊಂದಾಯಿಸಿದ್ದು 58,827 ಕ್ವಿಂಟಾಲ್ ರಾಗಿ ರಿಜಿಸ್ಟರ್ ಆಗಿದೆ. ಪತ್ರಿಕೆಯ ಕಾರ್ಯಕ್ಕೆ ರೈತರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಈ ವೇಳೆ ಸದೃಢ ಫೌಂಡೇಶನ್‌ನ ಅಧ್ಯಕ್ಷ ಭೋಜರಾಜ್ ಮಾತನಾಡಿ, ಎಪಿಎಂಸಿ ಆವರಣದಲ್ಲಿ ತೆರೆದಿರುವ ರಾಗಿ ಖರೀದಿ ಕೇಂದ್ರ ಒಂದು ಕೌಂಟರ್‌ನಿಂದ ಪ್ರಾರಂಭವಾಗಿತ್ತು. ಕಳೆದ ಒಂದು ವಾರದಿಂದ ರೈತರ ಸಂಖ್ಯೆ ಹೆಚ್ಚಾದ ಕಾರಣ ಈಗ ನಾಲ್ಕು ಕೌಂಟರ್ ತೆರೆಯಲಾಗಿದ್ದು ಮಹಿಳೆಯರ ಸಂಖ್ಯೆ ತೀರಾ ಕಡಿಮೆ ಇರುವ ಕಾರಣ ಪ್ರತ್ಯೇಕವಾಗಿ ತೆರೆಯಲಾಗಿಲ್ಲ. ರೈತರಿಗೆ ಅಗತ್ಯ ನೀರಿನ ವ್ಯವಸ್ಥೆ ಹಾಗೂ ನೆರಳಿಗಾಗಿ ಶಾಮಿಯಾನದ ವ್ಯವಸ್ಥೆ ಕಲ್ಪಿಸಲಾಗಿದೆ. ಸಮಯದ ಅವಕಾಶ ಸಾಕಷ್ಟಿದ್ದು ರೈತರು ಮುಗಿಬೀಳುವ ಅವಶ್ಯಕತೆ ಇಲ್ಲ. ಸರ್ಕಾರ ರಾಜ್ಯದಲ್ಲಿ 43ಲಕ್ಷ ಕ್ವಿಂಟಾಲ್ ರಾಗಿ ಖರೀದಿಗೆ ಅವಕಾಶ ನೀಡಿದ್ದು ಇದುವರೆಗೆ ರಾಜ್ಯದಲ್ಲಿ 8ಲಕ್ಷ ಕ್ವಿಂಟಾಲ್ ರಾಗಿ ರಿಜಿಸ್ಟರ್ ಆಗಿದ್ದು ರೈತರು ಆತಂಕ ಪಡದೆ ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳಬಹುದಾಗಿದೆ ಎಂದರು.