ಮಾರ್ಚ್‌ 24ರಿಂದ ಹಾಸನದಲ್ಲಿ ನಾಲ್ಕು ದಿನ ಕಾಲೇಜು ರಂಗೋತ್ಸವ

| Published : Mar 23 2024, 01:10 AM IST

ಸಾರಾಂಶ

ಹಾಸನದ ಹಾಸನಾಂಬ ಕಲಾಕ್ಷೇತ್ರದಲ್ಲಿ ರಂಗಸಿರಿ ವತಿಯಿಂದ ಕಾಲೇಜು ರಂಗೋತ್ಸವವನ್ನು ಮಾ.೨೪ ರಿಂದ ೨೭ರ ವರೆಗೂ ನಾಲ್ಕು ದಿನಗಳ ಕಾಲ ಹಮ್ಮಿಕೊಳ್ಳಲಾಗಿದೆ ಎಂದು ರಂಗಸಿರಿಯ ಕಾರ್ಯದರ್ಶಿ ಪಿ.ಶಾಡ್ರಾಕ್ ತಿಳಿಸಿದರು. ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದರು.

ರಂಗಸಿರಿಯ ಕಾರ್ಯದರ್ಶಿ ಪಿ.ಶಾಡ್ರಾಕ್ ಮಾಹಿತಿ । ಆರು ನಾಟಕ ಪ್ರದರ್ಶನ

ಕನ್ನಡಪ್ರಭ ವಾರ್ತೆ ಹಾಸನ

ನಗರದ ಹಾಸನಾಂಬ ಕಲಾಕ್ಷೇತ್ರದಲ್ಲಿ ರಂಗಸಿರಿ ವತಿಯಿಂದ ಕಾಲೇಜು ರಂಗೋತ್ಸವವನ್ನು ಮಾ.೨೪ ರಿಂದ ೨೭ರ ವರೆಗೂ ನಾಲ್ಕು ದಿನಗಳ ಕಾಲ ಹಮ್ಮಿಕೊಳ್ಳಲಾಗಿದೆ ಎಂದು ರಂಗಸಿರಿಯ ಕಾರ್ಯದರ್ಶಿ ಪಿ.ಶಾಡ್ರಾಕ್ ತಿಳಿಸಿದರು.

ಮಾಧ್ಯಮಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿ, ವಿ, ಸತೀಶ್, ಎಚ್.ಡಿ. ಗುರುಪ್ರಸಾದ್, ಶ್ರೀನಿವಾಸ್ ಕೊಟ್ಟೂರು ಅವರ ನೆನಪಿನಲ್ಲಿ ನುರಿತ ತಜ್ಞರಿಂದ ಅನೇಕ ತರಬೇತಿ ಕೊಡುತ್ತ ರಂಗಸಿರಿಯೂ ಅನೇಕ ನಾಟಕವನ್ನು, ಕಾಲೇಜು ವಿದ್ಯಾರ್ಥಿಗಳಿಗೆ ಶಿಬಿರವನ್ನು ಪ್ರತಿವರ್ಷ ಏರ್ಪಡಿಸುತ್ತ ಬಂದಿದೆ. ಕಳೆದ ನಾಲ್ಕು ವರ್ಷಗಳಿಂದ ಕೋವಿಡ್ ಕಾರಣದಿಂದ ಈ ಚಟುವಟಿಕೆ ನಡೆಸಲು ಆಗಿರಲಿಲ್ಲ. ಈ ಬಾರಿ ಮತ್ತೆ ರಂಗ ಚಟುವಟಿಕೆಯನ್ನು ಕೈಗೆತ್ತಿಕೊಂಡು ಸುಮಾರು ೫ ಕಾಲೇಜುಗಳಿಗೆ ನಾಟಕವನ್ನು ಕಲಿಸುತ್ತ ಪ್ರಯೋಗವನ್ನು ಮಾ.೨೪ ರಿಂದ 27ರ ವರೆಗೂ ನಾಲ್ಕು ದಿನಗಳಲ್ಲಿ ಆರು ನಾಟಕವನ್ನು ಹಾಸನಾಂಬ ಕಲಾಕ್ಷೇತ್ರದಲ್ಲಿ ಪ್ರತಿದಿನ ಸಂಜೆ ೬ ಗಂಟೆಯಿಂದ ಪ್ರದರ್ಶನಗೊಳ್ಳುತ್ತಿದೆ ಎಂದು ಹೇಳಿದರು.

ಈ ಕಾಲೇಜು ರಂಗತ್ಸೋವದಲ್ಲಿ ೧೧ ಜನ ಕಾಲೇಜು ಪದವಿಧರರು ತರಬೇತಿ ನೀಡಿದ್ದು, ಉತ್ತಮವಾದ ನಾಟಕ ರಚನೆ ಮತ್ತು ಪ್ರಯೋಗ ಸಿದ್ಧವಾಗಿದೆ. ಹಿಂದೆ ಪತ್ರಕರ್ತರ ಸಂಘದ ಜತೆ ಕೂಡಿ ಅನೇಕ ಯಶಸ್ವಿ ಕಾರ್ಯಕ್ರಮ ಮಾಡಿಕೊಂಡು ಬಂದಿದೆ. ಈ ಬಾರಿ ರಂಗಸಿರಿ ಕಾರ್ಯಕ್ರಮದಲ್ಲಿ ಸರ್ಕಾರಿ ಕಲಾ ಕಾಲೇಜು, ಮಹಿಳಾ ಕಾಲೇಜು, ಗೃಹ ವಿಜ್ಞಾನ ಕಾಲೇಜು, ನವಿಕಿಸ್ ತಾಂತ್ರಿಕ ಕಾಲೇಜು, ಜ್ಞಾನಧಾರೆ ಪ್ಯಾರಾ ಮೆಡಿಕಲ್ ಕಾಲೇಜು ಸೇರಿ ಸುಮಾರು ೫ ಕಾಲೇಜುಗಳಿಂದ ಐದು ವಿಭಿನ್ನ ನಾಟಕಗಳನ್ನು ತಯಾರು ಮಾಡಿ ಪ್ರದರ್ಶನಗೊಳ್ಳಲಿದೆ. ರಂಗಸಿರಿಯಿಂದ ದಿವಂಗತ ಲಂಕೇಶ್ ರವರ ‘ನನ್ನ ತಂಗಿಗೊಂದು ಗಂಡು ಕೊಡಿ’ ಎನ್ನುವ ನಾಟಕ ಕೂಡ ಪ್ರದರ್ಶನಗೊಳ್ಳಲಿದೆ ಎಂದು ಮಾಹಿತಿ ನೀಡಿದರು.

ಉದ್ಘಾಟನೆಯನ್ನು ಲಂಕೇಶ್ ಪುತ್ರ ಇಂದ್ರಜೀತ್ ಲಂಕೇಶ್ ಹಾಗೂ ರಾಜ್ಯ ಕಾರ್ಯಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ್ ತಗಡೂರು ನೆರವೇರಿಸಲಿದ್ದಾರೆ. ಮಾ.೨೭ರ ಮುಕ್ತಾಯ ಸಮಾರಂಭಕ್ಕೆ ವಿಶ್ವ ರಂಗಭೂಮಿ ದಿನದಂದು ‘ತಂಗಿಗೊಂದು ಗಂಡು ಕೊಡಿ’ ನಾಟಕದಲ್ಲಿ ಪ್ರದರ್ಶಿಸಲಾಗುವುದು. ಇದರಲ್ಲಿ ಹಾಸನ ಜಿಲ್ಲೆಯ ಹಿರಿಯ ಮತ್ತು ಸಿನಿಮಾ ಕ್ಷೇತ್ರದಲ್ಲಿ ಪ್ರಸಿದ್ಧಿ ಪಡೆದಿರುವ ಹಿರಿಯ ನಟ ದೊಡ್ಡಣ್ಣ ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.

ಶಿಬಿರದ ನಿರ್ದೇಶಕ ಅನಿಲ್ ರೇವೂರ್ ಮಾತನಾಡಿ, ಮಾ.೨೪ರ ಮೊದಲ ದಿನ ನಿರ್ದೇಶಕ ಸಂತೋಷ್ ದಿಂಡಗೂರು ನಿರ್ದೇಶನದ ಸಂಕಮ್ಮನ ಸಾಲು ನಾಟಕ ಪ್ರದರ್ಶನಗೊಳ್ಳಲಿದೆ. ಸುಣ್ಣದ ಸುತ್ತು ನಾಟಕವು ಮಹೇಶ್ ಆಚಾರ್ಯ ನಿರ್ದೇಶನದಲ್ಲಿ ನಡೆಯಲಿದೆ. ವಿನೀತ್ ಕುಮಾರ್ ನಿರ್ದೇಶನದ ವಿಗಡ ವಿಕ್ರಮರಾಯ ನಾಟಕ ಪ್ರದರ್ಶನವಾಗಲಿದೆ ಎಂದರು.

ರಂಗಸಿರಿಯ ಸಂಚಾಲಕ ಬಿ.ಆರ್.ಉದಯಕುಮಾರ್, ಶಿಬಿರದ ನಿರ್ದೇಶಕ ಅನಿಲ್ ರೇವೂರ್, ರಂಗಸಿರಿಯ ಧ್ವನಿ ಮತ್ತು ಬೆಳಕಿನ ಮಲ್ಲೇಶ್, ಹಿರಿಯ ನಟ ಜವರೇಗೌಡ ಇದ್ದರು.

ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ರಂಗಸಿರಿಯ ಕಾರ್ಯದರ್ಶಿ ಪಿ. ಶಾಡ್ರಾಕ್.