ಸಾರಾಂಶ
ಕನ್ನಡಪ್ರಭ ವಾರ್ತೆ ರಾಮನಗರ
ನಗರ ವ್ಯಾಪ್ತಿಯಲ್ಲಿನ ಫುಟ್ ಪಾತ್ ಗಳನ್ನು ಆಕ್ರಮಿಸಿಕೊಂಡು ನಿರ್ಮಿಸಿರುವ ಅಂಗಡಿಗಳನ್ನು ನಾಲ್ಕೈದು ದಿನದೊಳಗೆ ತೆರವುಗೊಳಿಸಬೇಕು. ಇಲ್ಲದಿದ್ದರೆ ನಗರಸಭೆ ವತಿಯಿಂದ ಬಲವಂತವಾಗಿ ತೆರವುಗೊಳಿಸಬೇಕಾಗುತ್ತದೆ ಎಂದು ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ (ಶಶಿ) ಎಚ್ಚರಿಕೆ ನೀಡಿದರು.ನಗರಸಭೆ ಸಭಾಂಗಣದಲ್ಲಿ ಮಂಗಳವಾರ ಇ- ಖಾತಾ ವಿತರಿಸಿ ಮಾತನಾಡಿದ ಅವರು, ನಗರದ ಫುಟ್ ಪಾತ್ ಗಳಲ್ಲಿ ಬೀದಿ ಬದಿ ವ್ಯಾಪಾರಿಗಳು ವ್ಯಾಪಾರದಲ್ಲಿ ತೊಡಗಿದ್ದರೆ, ಮತ್ತೊಂದೆಡೆ ಫುಟ್ ಪಾತ್ ಮೇಲೆಯೇ ಶಾಶ್ವತವಾಗಿ ಅಂಗಡಿ ನಿರ್ಮಾಣ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ಅವುಗಳನ್ನು ಕೂಡಲೇ ತೆರವುಗೊಳಿಸಬೇಕು ಎಂದರು.
ಸೇತುವೆ ಬಳಿ ರಸ್ತೆಯಲ್ಲಿಯೇ ರಸ್ತೆ ಬದಿ ವ್ಯಾಪಾರಿಗಳು ವ್ಯಾಪಾರ ಮಾಡುತ್ತಿದ್ದರು. ಅವರಿಗೆಲ್ಲ ವಾಹನಗಳ ಸಂಚಾರಕ್ಕೆ ತೊಂದರೆಯಾಗದಂತೆ ವ್ಯಾಪಾರ ವಹಿವಾಟು ನಡೆಸುವಂತೆ ಸೂಚಿಸಲಾಗಿದೆ. ಅದೇ ರೀತಿ ಪಾದಚಾರಿಗಳಿಗೆ ಸಮಸ್ಯೆಯಾಗದಂತೆ ರಸ್ತೆಬದಿ ವ್ಯಾಪಾರಿಗಳು ವ್ಯಾಪಾರ ಮಾಡಬೇಕು. ಯಾವುದೇ ಕಾರಣಕ್ಕೂ ಪಾದಚಾರಿಗಳಿಗೆ ತೊಂದರೆಯಾಗಲು ಬಿಡುವುದಿಲ್ಲ ಎಂದು ಶೇಷಾದ್ರಿ ಹೇಳಿದರು.ಇ- ಖಾತೆಗಳ ವಿತರಣೆಗೆ ಸಮಯವನ್ನು ನಿಗದಿ ಮಾಡಿದ್ದೆವು. ನಿಗದಿತ ಅವಧಿಯಲ್ಲಿ ಇ- ಖಾತೆಗಳನ್ನು ವಿತರಿಸಲು ಅಧಿಕಾರಿಗಳು ಶ್ರಮಿಸುತ್ತಿದ್ದಾರೆ. ಮೊದಲನೆ ಹಂತದಲ್ಲಿ 200 ಇ- ಖಾತೆಗಳನ್ನು ವಿತರಿಸಲಾಗಿತ್ತು. ಎರಡನೇ ಹಂತದಲ್ಲಿ 70 ಖಾತೆಗಳನ್ನು ವಿತರಿಸಲಾಗುತ್ತಿದೆ ಎಂದು ತಿಳಿಸಿದರು.
ಇ- ಖಾತೆಗಳ ವಿಚಾರದಲ್ಲಿ ಮಧ್ಯವರ್ತಿಗಳನ್ನು ಸಂಪರ್ಕಿಸುವುದು ಬೇಡ ಎಂದು ಪದೇ ಪದೇ ಸಾರ್ವಜನಿಕರಿಗೆ ತಿಳಿಸಲಾಗಿದೆ. ಆದಾಗ್ಯೂ ಮಧ್ಯವರ್ತಿಗಳನ್ನೇ ಕೆಲವರು ಅವಲಂಬಿಸಿದ್ದಾರೆ. ಇ- ಖಾತೆಗಳನ್ನು ಪಡೆಯುವ ವಿಚಾರದಲ್ಲಿ ನಾಗರಿಕರು ನೇರವಾಗಿ ಅಧಿಕಾರಿಗಳನ್ನು ಸಂಪರ್ಕಿಸುವುದು ಒಳಿತು. ಜನರಿಗೆ ಸರಿಯಾದ ಮಾಹಿತಿ ಮತ್ತು ಅಗತ್ಯ ದಾಖಲೆಗಳ ಬಗ್ಗೆ ವಿವರಿಸಿ ತಿಳಿಸಲಾಗುವುದು, ಹೀಗಾಗಿ ಮಧ್ಯವರ್ತಿಗಳ ಅವಲಂಬನೆ ಬೇಡ ಎಂದರು.ಬಿ- ಖಾತೆಗಳ ವಿಚಾರದಲ್ಲಿ ಮುಖ್ಯಮಂತ್ರಿಗಳು ಫೆಬ್ರವರಿ 10ರೊಳಗೆ ಅಗತ್ಯ ಸೂಚನೆಗಳನ್ನು ಹೊರಡಿಸುವುದಾಗಿ ತಿಳಿಸಿದ್ದಾರೆ. ಸೂಚನೆಗಳ ಬಂದ ನಂತರ ಈ ವಿಚಾರದಲ್ಲಿ ನಾಗರಿಕರ ಗಮನ ಸೆಳೆಯಲಾಗುವುದು ಎಂದು ಶೇಷಾದ್ರಿ ಹೇಳಿದರು.
ಪೌರಾಯುಕ್ತ ಡಾ.ಜಯಣ್ಣ ಮಾತನಾಡಿ, ಇ- ಖಾತಾ ಮಾಡಲು ಸಮಸ್ಯೆಯಿರುವ ಸ್ವತ್ತುಗಳಿಗೆ ಕಾನೂನಾತ್ಮಕ ಹಕ್ಕು ಕೊಡಲು 6 ಸಾವಿರ ಸ್ವತ್ತುಗಳಿಗೆ ಬಿ-ಖಾತಾ ಮಾಡಲು ಸರ್ಕಾರ ಅವಕಾಶ ಕಲ್ಪಿಸಿದೆ. ಒಂದು ವಾರದ ನಂತರ ಅದಕ್ಕೆ ಚಾಲನೆ ಸಿಗಲಿದೆ. ಜೊತೆಗೆ ಪ್ಲಾಸ್ಟಿಕ್ ಮುಕ್ತ ರಾಮನಗರವನ್ನಾಗಿಸುವ ಸಂಕಲ್ಪಕ್ಕೆ ಸಾರ್ವಜನಿಕರು ಕೈ ಜೋಡಿಸಬೇಕಿದೆ ಎಂದು ತಿಳಿಸಿದರು.ನಗರಸಭೆ ಸದಸ್ಯರಾದ ಬಿ.ಸಿ.ಪಾರ್ವತಮ್ಮ, ಅಜ್ಮತ್, ಮೋಯಿನ್ ಖುರೇಷಿ, ಅಬ್ದುಲ್ ಸಮದ್ , ಗೋವಿಂದ ರಾಜು , ಅಧಿಕಾರಿಗಳಾದ ಕಿರಣ್, ಲಕ್ಷ್ಮೀ, ನಟರಾಜು, ತಸ್ಲೀಂ, ವೇದಾವತಿ ಮತ್ತಿತರರು ಇದ್ದರು.