ಸಾರಾಂಶ
ಕನ್ನಡಪ್ರಭ ವಾರ್ತೆ ಕುಶಾಲನಗರ ಮೈಸೂರು ದಸರಾ ಮಹೋತ್ಸವ ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳುವ ಸಂಬಂಧ ದುಬಾರೆ ಆನೆ ಶಿಬಿರದಿಂದ ಭಾನುವಾರ ನಾಲ್ಕು ಆನೆಗಳನ್ನು ಹುಣಸೂರು ಬಳಿಯ ವೀರನ ಹೊಸಹಳ್ಳಿ ಶಿಬಿರಕ್ಕೆ ಲಾರಿಗಳ ಮೂಲಕ ಸಾಗಿಸಲಾಯಿತು. ದುಬಾರೆ ಶಿಬಿರದ ಧನಂಜಯ, ಕಂಜನ್, ಪ್ರಶಾಂತ ಮತ್ತು ಕಾವೇರಿ ಆನೆಗಳನ್ನು ಇಲಾಖೆಯ ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ಕಳುಹಿಸಿಕೊಡಲಾಯಿತು. ಧನಂಜಯ ಆನೆ ಕಳೆದ ಏಳು ವರ್ಷಗಳಿಂದ ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳುತ್ತಿದ್ದರೆ ಕಂಜನ್ ಮೂರನೇ ಬಾರಿ ಪ್ರಶಾಂತ ಕಳೆದ 15 ವರ್ಷಗಳಿಂದ ದಸರಾದಲ್ಲಿ ಪಾಲ್ಗೊಳ್ಳುತ್ತಿದೆ. ಕಾವೇರಿ ಕಳೆದ ಅನೇಕ ಬಾರಿ ದಸರಾ ಮಹೋತ್ಸವದಲ್ಲಿ ಭಾಗಿಯಾಗಿದ್ದು ಈ ಸಾಲಿನ ದಸರಾ ಮಹೋತ್ಸವಕ್ಕೂ ಆಯ್ಕೆಯಾಗಿದೆ. ಎರಡನೇ ತಂಡದಲ್ಲಿ ದುಬಾರೆ ಶಿಬಿರದಿಂದ ಸುಗ್ರೀವ, ಗೋಪಿ, ಹರ್ಷ ಮತ್ತು ಹೇಮಾವತಿ ಆನೆಗಳು ತೆರಳಲಿದೆ ಎಂದು ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ.ದುಬಾರೆಯಲ್ಲಿ ಈ ಸಂದರ್ಭ ಅರಣ್ಯ ಇಲಾಖೆ ಮಡಿಕೇರಿ ವಿಭಾಗದ ಉಪಅರಣ್ಯ ಸಂರಕ್ಷಣಾಧಿಕಾರಿ ಅಭಿಷೇಕ್, ಸೋಮವಾರಪೇಟೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎ ಎ ಗೋಪಾಲ್, ಕುಶಾಲನಗರ ಅರಣ್ಯ ವಲಯ ಅಧಿಕಾರಿ ರತನ್ ಕುಮಾರ್, ಉಪ ವಲಯ ಅರಣ್ಯ ಅಧಿಕಾರಿಗಳಾದ ಕನ್ನಂಡ ರಂಜನ್, ಧರ್ಮೇಂದ್ರ ಮತ್ತು ಪಶು ತಜ್ಞ ವೈದ್ಯರಾದ ಡಾ. ಚಿಟ್ಟಿಯಪ್ಪ ಮತ್ತಿತರರು ಇದ್ದರು.ಸೋಮವಾರ ಬೆಳಗ್ಗೆ ವೀರನಹೊಸಹಳ್ಳಿಯಿಂದ ಮೈಸೂರು ಕಡೆಗೆ ಮೊದಲ ಹಂತದ ಆನೆಗಳ ದಸರಾ ಗಜಪಯಣ ವಿದ್ಯುಕ್ತವಾಗಿ ಚಾಲನೆಗೊಳ್ಳಲಿದೆ.