ನಾಲ್ವರ ಹತ್ಯೆ: ಓರ್ವನಿಗೆ ಮರಣದಂಡನೆ, ಇನ್ನೋರ್ವನಿಗೆ ಜೀವಾವಧಿ ಶಿಕ್ಷೆ

| Published : May 13 2025, 11:52 PM IST

ನಾಲ್ವರ ಹತ್ಯೆ: ಓರ್ವನಿಗೆ ಮರಣದಂಡನೆ, ಇನ್ನೋರ್ವನಿಗೆ ಜೀವಾವಧಿ ಶಿಕ್ಷೆ
Share this Article
  • FB
  • TW
  • Linkdin
  • Email

ಸಾರಾಂಶ

ಪ್ರಕರಣದ ಎರಡನೇ ಆರೋಪಿ ವಿನಯ ಶ್ರೀಧರ ಭಟ್ ಈತನಿಗೆ ಮರಣ ದಂಡನೆ ಹಾಗೂ ಮೊದಲನೇ ಆರೋಪಿಯಾದ ಈತನ ತಂದೆ ಶ್ರೀಧರ ಜನಾರ್ಧನ ಭಟ್ ಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ

ಕಾರವಾರ: ಭಟ್ಕಳ ತಾಲೂಕಿನ ಹಾಡುವಳ್ಳಿಯ ಒಣಿಬಾಗಿಲು ಎನ್ನುವಲ್ಲಿ ಒಂದೇ ಕುಟುಂಬದ ನಾಲ್ವರನ್ನು ಬರ್ಬರವಾಗಿ ಹತ್ಯೆ ಮಾಡಿದ ಪ್ರಕರಣದ ಒಬ್ಬ ಅಪರಾಧಿಗೆ ಮರಣ ದಂಡನೆ ಹಾಗೂ ಇನ್ನೊಬ್ಬ ಅಪರಾಧಿಗೆ ಜೀವಾವಧಿ ಶಿಕ್ಷೆ ವಿಧಿಸಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆದೇಶಿಸಿದೆ.

ಪ್ರಕರಣದ ಎರಡನೇ ಆರೋಪಿ ವಿನಯ ಶ್ರೀಧರ ಭಟ್ ಈತನಿಗೆ ಮರಣ ದಂಡನೆ ಹಾಗೂ ಮೊದಲನೇ ಆರೋಪಿಯಾದ ಈತನ ತಂದೆ ಶ್ರೀಧರ ಜನಾರ್ಧನ ಭಟ್ ಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಮೂರನೇ ಆರೋಪಿ ವಿದ್ಯಾ ಶ್ರೀಧರ ಭಟ್ ಬಗ್ಗೆ ಸೂಕ್ತ ಸಾಕ್ಷ್ಯಾಧಾರಗಳು ಇಲ್ಲದೆ ಇರುವುದರಿಂದ ಅಪರಾಧಿ ಎಂದು ಪರಿಗಣಿಸಲಾಗಿಲ್ಲ.

2023ರಲ್ಲಿ ತಾಲೂಕಿನ ಹಲ್ಯಾಣಿಯವರಾದ ಶ್ರೀಧರ ಜನಾರ್ಧನ ಭಟ್ಟ ಹಾಗೂ ವಿನಯ ಶ್ರೀಧರ ಭಟ್ಟ ಇವರು ಹಾಡುವಳ್ಳಿಯ ಶಂಭು ವೆಂಕಟ್ರಮಣ ಭಟ್ಟ, ಅವರ ಪತ್ನಿ ಮಾದೇವಿ ಶಂಭು ಭಟ್ಟ, ರಾಘವೇಂದ್ರ (ರಾಘು) ಶಂಭು ಭಟ್ಟ ಹಾಗೂ ಆತನ ಪತ್ನಿ ಕುಸುಮಾ ರಾಘು ಭಟ್ಟ ಅವರ ನಿವಾಸಕ್ಕೆ ಹೋಗಿ ಮೊದಲನೇ ಆರೋಪಿ ಶ್ರೀಧರ ಭಟ್ ಅವರ ಮಗಳಿಗೆ ದೊರೆಯಬೇಕಾದ ಆಸ್ತಿಯ ಕುರಿತು ತಕರಾರು ತೆಗೆದು ತಾವು ಮೊದಲೇ ತಯಾರಿಮಾಡಿಕೊಂಡು ಬಂದಿದ್ದ ಕತ್ತಿಯಿಂದ ನಾಲ್ವರನ್ನೂ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದರು.

ಭಟ್ಕಳ ಗ್ರಾಮೀಣ ಠಾಣೆಯ ಪೊಲೀಸ್ ಇನ್ಸಪೆಕ್ಟರ್ ಚಂದನ ಗೋಪಾಲ ಆರೋಪಿತರನ್ನು ಪತ್ತೆ ಹಚ್ಚಿ ಬಂಧಿಸಿ ಅವರ ಮೇಲೆ ಆರೋಪ ಪಟ್ಟಿ ಸಲ್ಲಿಸಿದ್ದರು.

ಜಿಲ್ಲಾ ನ್ಯಾಯಾಧೀಶ ಡಿ.ಎಸ್. ವಿಜಯಕುಮಾರ್ ಪ್ರಕರಣದ ವಿಚಾರಣೆ ನಡೆಸಿ ಮರಣ ದಂಡನೆ ವಿಧಿಸಿದ್ದಾರೆ. ಸರ್ಕಾರಿ ಅಭಿಯೋಜಕಿ ತನುಜಾ ಹೊಸಪಟ್ಟದ ವಾದಿಸಿದ್ದರು.

2004ರಲ್ಲಿ ಅಂಕೋಲಾದ ಹಿಲ್ಲೂರು ಪ್ರಕರಣಕ್ಕೆ ಸಂಬಂಧಪಟ್ಟಂತೆ ಮರಣ ದಂಡನೆ ವಿಧಿಸಲಾಗಿತ್ತು. ಆದಾದ 21 ವರ್ಷಗಳ ತರುವಾಯ ಜಿಲ್ಲೆಯಲ್ಲಿ ಈ ಪ್ರಕರಣದಲ್ಲಿ ಮರಣ ದಂಡನೆ ವಿಧಿಸಿ ತೀರ್ಪು ನೀಡಲಾಗಿದೆ.