ಚತುಷ್ಪಥ ಎತ್ತರಿಸಿದ ರಾಷ್ಟ್ರೀಯ ಹೆದ್ದಾರಿ ಜನವರಿಗೆ ಸಂಚಾರಯೋಗ್ಯ: ಭರವಸೆ

| Published : Oct 29 2024, 12:58 AM IST

ಚತುಷ್ಪಥ ಎತ್ತರಿಸಿದ ರಾಷ್ಟ್ರೀಯ ಹೆದ್ದಾರಿ ಜನವರಿಗೆ ಸಂಚಾರಯೋಗ್ಯ: ಭರವಸೆ
Share this Article
  • FB
  • TW
  • Linkdin
  • Email

ಸಾರಾಂಶ

ರಾಷ್ಟ್ರೀಯ ಹೆದ್ದಾರಿ ಅಗಲೀಕರಣದ ಕಾಮಗಾರಿ ಅಗತ್ಯ ವೇಗ ಪಡೆದುಕೊಂಡು ಮುಂಬರುವ ಜನವರಿಯೊಳಗೆ ಚತುಷ್ಪಥ ರಸ್ತೆ ಸಂಚಾರಯೋಗ್ಯವನ್ನಾಗಿಸುವ ಭರವಸೆ ಹೊಂದಲಾಗಿದೆ ಎಂದು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಉಪ್ಪಿನಂಗಡಿ

ರಾಷ್ಟ್ರೀಯ ಹೆದ್ದಾರಿ ಅಗಲೀಕರಣದ ಕಾಮಗಾರಿ ಅಗತ್ಯ ವೇಗ ಪಡೆದುಕೊಂಡು ಮುಂಬರುವ ಜನವರಿಯೊಳಗೆ ಚತುಷ್ಪಥ ರಸ್ತೆ ಸಂಚಾರಯೋಗ್ಯವನ್ನಾಗಿಸುವ ಭರವಸೆ ಹೊಂದಲಾಗಿದೆ ಎಂದು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ತಿಳಿಸಿದ್ದಾರೆ.

ಶನಿವಾರ ೩೪ನೇ ನೆಕ್ಕಿಲಾಡಿಯ ಪುತ್ತೂರು ತಿರುವಿನ ಬಳಿ ನಿರ್ಮಿಸಲಾದ ಅಂಡರ್ ಪಾಸ್ ಮತ್ತದರ ಸಾಧಕ ಬಾಧಕಗಳ ಬಗ್ಗೆ ಹೆದ್ದಾರಿ ಇಲಾಖಾಧಿಕಾರಿಗಳು, ಲೋಕೋಪಯೋಗಿ ಇಲಾಖಾಧಿಕಾರಿಗಳು ಹಾಗೂ ಕೆಎನ್‌ಆರ್‌ ಸಂಸ್ಥೆ ಅಧಿಕಾರಿಗಳೊಂದಿಗೆ ಪರಿಶೀಲನಾ ಕಾರ್ಯ ನಡೆಸಿ ಅವರು ಮಾತನಾಡಿದರು.

ಪುತ್ತೂರು ರಸ್ತೆ ಹೆದ್ದಾರಿಗೆ ಜೋಡಿಸಲ್ಪಡುವ ಪ್ರಕ್ರಿಯೆಯಲ್ಲಿ ಅನಗತ್ಯ ತಿರುವು ಲಭಿಸಲಿದ್ದು, ಅದರ ನಿವಾರಣೆಗೆ ಅಂಡರ್ ಪಾಸ್ ಇರುವಲ್ಲಿಯೇ ನೇರ ಸಂಪರ್ಕ ರಸ್ತೆ ನಿರ್ಮಿಸಿ ಪುತ್ತೂರು ರಸ್ತೆಗೆ ಸಂಪರ್ಕಿಸುವಂತೆ ಮಾಡಿದರೆ ಉತ್ತಮ ಎಂಬ ಸಾರ್ವಜನಿಕರ ಅಭಿಪ್ರಾಯಕ್ಕೆ ಸ್ಪಂದಿಸಿದ ಶಾಸಕ, ಅದಕ್ಕೆ ಹೆಚ್ಚುವರಿ ೧೦ ಕೋಟಿ ರು. ಹಣ ಒದಗಿಸುವ ಆಶ್ವಾಸನೆ ನೀಡಿ, ತ್ವರಿತ ಇಲಾಖಾತ್ಮಕ ಕ್ರಮ ಜರುಗಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಮೇಲ್ಕಾರ್, ಪಾಣೆಮಂಗಳೂರು, ಮಾಣಿಯಲ್ಲಿ ಎತ್ತರಿಸಿದ ರಸ್ತೆಯನ್ನು ಮುಂಬರುವ ನವೆಂಬರ್ ಒಳಗಾಗಿ ಸಂಚಾರಕ್ಕೆ ಮುಕ್ತಗೊಳೀಸಲಾಗುವುದು ಹಾಗೂ ಉಪ್ಪಿನಂಗಡಿ ಮತ್ತು ನೆಲ್ಯಾಡಿಯಲ್ಲಿ ನಿರ್ಮಿಸಲಾಗುತ್ತಿರುವ ಎತ್ತರಿಸಿದ ಸೇತುವೆಯ ಕಾಮಗಾರಿಯನ್ನು ಮುಂಬರುವ ಜನವರಿಯ ಒಳಗಾಗಿ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಲಾಗಿದೆ. ನೆಲ್ಯಾಡಿಯಲ್ಲಿ ಅಲ್ಲಿನ ಜನತೆಯ ಒತ್ತಾಯದಂತೆ ಫ್ಲೈಓವರ್ ರಸ್ತೆ ನಿರ್ಮಾಣ ಕಾರ್ಯ ಅಸಾಧ್ಯವಾಗಿದ್ದು, ನಿಲ್ಲಿಸಲಾಗಿದ್ದ ಎತ್ತರಿಸಿದ ರಸ್ತೆಯ ಕಾಮಗಾರಿ ಪುನರಾರಂಭಗೊಳಿಸಲಾಗುವುದೆಂದರು.

ಹೆದ್ದಾರಿ ಮಧ್ಯದಲ್ಲಿ ನೆಟ್ಟಿರುವ ಹೂವು , ಹಣ್ಣುಗಳ ಗಿಡ ಮರಗಳನ್ನು , ನೀರು ಸರಬರಾಜಿಗೆ ಅಳವಡಿಇದ ಪೈಪುಗಳನ್ನು , ಮ್ಯಾಟ್ ಗಳನ್ನು ಯಾರೂ ಕದ್ದೊಯ್ಯಬಾರದು. ರಸ್ತೆಯ ಅಲಂಕಾರಕ್ಕಾಗಿ ಅದೆಲ್ಲವನ್ನೂ ಉಳಿಸುವ ನಿಟ್ಟಿನಲ್ಲಿ ನಾಗರಿಕ ಸಮಾಜದ ಸಹಕಾರ ಅಗತ್ಯವಾಗಿದೆ ಎಂದರು.

ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಜಾವೇದ್ ಅಖ್ತಾರ್, ಇಲಾಖಾ ಎಂಜಿನಿಯರ್ ಗಳಾದ ವಿವೇಕಾನಂದ, ಮಹೇಂದ್ರ ಕುಮಾರ್ ಸಿಂಗ್, ರಘುನ್ನಾಥ್ ರೆಡ್ಡಿ, ಪ್ರಮುಖರಾದ ಡಾ. ರಾಜಾರಾಮ ಕೆ ಬಿ, ರಾಧಾಕೃಷ್ಣ ನಾಯ್ಕ್, ಮಹಮ್ಮದ್ ತೌಶಿಫ್, ಮುರಳೀಧರ್ ರೈ , ಅಬ್ದುಲ್ ರಹಿಮಾನ್ ಯೂನಿಕ್, ಅಸ್ಕಾರಲಿ, ಸದಾನಂದ , ರೂಪೇಶ್ ರೈ ಅಲಿಮಾರ , ಅನಿಮಿನೇಜಸ್ ಮತ್ತಿತರರು ಇದ್ದರು.