ಎಟಿಎಂ ದರೋಡೆಕೋರ ಹರಿಯಾಣ ಗ್ಯಾಂಗ್‌ನ ನಾಲ್ವರ ಬಂಧನ

| Published : Apr 27 2025, 01:31 AM IST

ಸಾರಾಂಶ

Four members of Haryana ATM robbery gang arrested

-ಎಟಿಎಂ ದೋಚಿದ್ದ ನಾಲ್ವರು ದರೋಡೆಕೋರರಿಗೆ ಗುಂಡು । ಗ್ಯಾಸ್ ಕಟರ್ ಬಳಸಿ ಎಸ್ಬಿಐ ಎಟಿಎಂನಲ್ಲಿದ್ದ 18ಲಕ್ಷ ರು. ದೋಚಿದ್ದವರ ಬಂಧನ

----

ಕನ್ನಡಪ್ರಭ ವಾರ್ತೆ ಕಲಬುರಗಿ

ಕಲಬುರಗಿ ಪೊಲೀಸರು ಶನಿವಾರ ಬೆಳ್ಳಂಬೆಳಗ್ಗೆ ನಡೆಸಿದ ಗುಂಡಿನ ದಾಳಿಯಲ್ಲಿ ಹರಿಯಾಣ ಮೂಲದ ಅಂತರಾಜ್ಯ ಖತರ್‌ನಾಕ್‌ ಎಟಿಎಂ ದರೋಡೆಕೋರ ಗ್ಯಾಂಗ್‌ ಮೇಲೆ ಗುಂಡು ಹಾರಿಸಿ ನಾಲ್ವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಂಧಿತರನ್ನು ಹರಿಯಣ ರಾಜ್ಯದ ಶಿರೋಳಿಯ ತಸ್ಲೀಂ (28), ತವಾಣೆಯ ಶರೀಫ್‌ (20), ಶಿಕಾಂಪೂರದ ಶಾಹೀದ್‌ (27) ಹಾಗೂ ಕಾರ್‌ ಚಾಲಕ ಹೈದ್ರಾಬಾದ್‌ನ ಅಮೀರ್‌ (25) ಎಂದು ಗುರುತಿಸಲಾಗಿದೆ.

ಇವರೆಲ್ಲರೂ ರಿಂಗ್‌ ರಸ್ತೆಯ ಪೂಜಾರಿ ಚೌಕ್‌ ಹತ್ತಿರವಿರುವ ಎಸ್ಬಿಐ ಎಟಿಎಂನಲ್ಲಿ ಏ.9ರಂದು 18ಲಕ್ಷ ಕಳವು ಮಾಡಿಕೊಂಡು ಪರಾರಿಯಾಗಿದ್ದರು.

ಈಗ ಬೇಲೂರ್‌ ಕ್ರಾಸ್‌ ಬಲಿ ಇರುವ ಇನ್ನೊಂದು ಎಟಿಎಂ ಕಳವಿಗೆ ಹೊಂಚು ಹಾಕಿ ಕಲಬುರಗಿಗೆ ಬಂದಿದ್ದರು. ವಿಚಾರಣೆಯಲ್ಲಿ ಈ ಗ್ಯಾಂಗ್‌ ಪೂಜಾರಿ ಚೌಕ್‌ ಎಟಿಎಂ ತಾವೇ ದರೋಡೆ ಮಾಡಿರೋದನ್ನ ಒಪ್ಪಿಕೊಂಡಿದೆ.

ಗ್ಯಾಸ್‌ ಕಟ್ಟರ್‌ ಬಳಸಿ ಪ್ರಕರಣದಲ್ಲಿ 18ಲಕ್ಷ ರು. ಹಣ ದೋಚಲಾಗಿತ್ತಾದರೂ ಆರೋಪಿಗಳ ಬಳಿ ದೋಚಿದ್ದ ಹಣ ಪತ್ತೆಯಾಗಿಲ್ಲ. ಬಂಧಿತರಿಂದ ಗ್ಯಾಸ್‌ ಕಟ್ಟರ್‌ ಮಶೀನ್‌, ಗ್ಯಾಸ್ ಸಿಲಿಂಡರ್‌, ಐ20 ಕಾರ್‌ ಜಪ್ತಿ ಮಾಡಲಾಗಿದೆ ಎಂದು ನಗರ ಪೊಲೀಸ್‌ ಆಯುಕ್ತ ಡಾ. ಶರಣಪ್ಪ ಢಗೆ ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪೂಜಾರಿ ಚೌಕ್‌ ಬಳಿಯ ಎಟಿಎಂ ದರೋಡೆ ಪ್ರಕರಣದ ಬೆನ್ನು ಬಿದ್ದಿದ್ದ ಕಲಬುರಗಿ ಪೊಲೀಸ್‌ ಬಳಿ ಕೃತ್ಯಕ್ಕೆ ಬಿಳಿ ಬಣ್ಣದ ಐ20 ಕಾರ್‌ ಬಳಸಿರೋ ಬಗ್ಗೆ ಬಲವಾದ ಸಾಕ್ಷ್ಯಗಳಿದ್ದವು. ಡಿಎಲ್‌ ಪಾಸಿಂಗ್‌ ಬಿಳಿ ಬಣ್ಣದ ಕಾರೇನಾದರೂ ಕಲಬುರಗಿಗೆ ಬಂದರೆ ನಿಗಾ ಇಡುವಂತೆಯೂ ಪ್ರಮುಖ ರಸ್ತೆ, ವೃತ್ತಗಳಲ್ಲಿ ಎಚ್ಚರಿಸಲಾಗಿತ್ತು.

ಶುಕ್ರವಾರ ರಾತ್ರಿ ನಗರದ ಹೊರವಲಯ ಬೇಲೂರು ಕ್ರಾಸ್‌ ಬಳಿ ಇದ್ದ ಎಸ್ಬಿಐ ಎಟಿಎಂ ಹತ್ತಿರ ಐ20 ಕಾರ್‌ ಸುತ್ತಾಡೋದನ್ನು ರಾತ್ರಿ ಗಸ್ತಿನಲ್ಲಿದ್ದ ಪೊಲೀಸರು ಕಂಡಿದ್ದಾರೆ. ತಕ್ಷಣ ಪ್ರಕರಣದ ತನಿಖಾಧಿಕಾರಿ ಗ್ರಾಮೀಣ ಠಾಣೆ ಪಿಐ ಸಂತೋಷ ತಟ್ಟೆಪಳ್ಳಿ ಅವರಿಗೆ ಮಾಹಿತಿ ರವಾನಿಸಿದ್ದಾರೆ.

ಸುದ್ದಿ ತಿಳಿಯುತ್ತಿದ್ದಂತೆ ಸಂತೋಷ ತಟ್ಟೇಪಳ್ಳಿ ಸಿಬ್ಬಂದಿ ಸಮೇತ ಸ್ಥಳಕ್ಕೆ ಧಾವಿಸಿ ಐ20 ಕಾರ್ ಬೆನ್ನಟ್ಟಿ ಆರೋಪಿಗಳ ಬಂಧನಕ್ಕೆ ಮುಂದಾದ ಆರೋಪಿಗಳು ಪೊಲೀಸರ ವಿರುದ್ಧವೇ ತಿರುಗಿ ಬಿದ್ದಿದ್ದಾರೆ. ಆಗ ಆತ್ಮರಕ್ಷಣೆಗೋಸ್ಕರ ಪಿಐ ಸಂತೋಷ ತಟ್ಟೇಪಳ್ಳಿ ಪಿಎಸ್‌ಐ ಬಸವರಾಜ ಇಬ್ಬರೂ ಆರೋಪಿಗಳಿಬ್ಬರ ಕಾಲಿಗೆ ಗುಂಡು ಹೊಡೆದು ಬಂಧಿಸಿದ್ದಾರೆಂದು ಕಮೀಷನರ್‌ ಡಾ. ಶರಣಪ್ಪ ಢಗೆ ಹೇಳಿದ್ದಾರೆ.

ಘಟನೆಯಲ್ಲಿ ಪೊಲೀಸ್ ಕಾನ್ಸ್‌ಟೇಬಲ್‌ ಮಂಜು, ಫಿರೋಜ್, ರಾಜಕುಮಾರ್ ಅವರಿಗೂ ಗಾಯಗಳಾಗಿದ್ದು, ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಗುಡೇಟು ತಿಂದ ಎಟಿಎಂ ಕಳ್ಳರನ್ನು ಕಲಬುರಗಿಯ ಜಿಮ್ಸ್‌ಗೆ ದಾಖಲಿಸಲಾಗಿದೆ.

ಮತ್ತೊಂದು ಎಟಿಎಂ ಕಳವಿಗೆ ಈ ಗ್ಯಾಂಗ್‌ ಕಲಬುರಗಿಗೆ ಬಂದಾಗಲೇ ಖಾಕಿ ಕೈಗೆ ಸಿಕ್ಕಿ ಬಿದ್ದಿದೆ. ನಗರ ಹೊರವಲಯದ ಬೇಲೂರ ಕ್ರಾಸ್ ಬಳಿ ಕಾರ್ ತಡೆದು ಪರಿಶೀಲನೆಗೆ ಮುಂದಾದಾಗ ಕಾರಿನಲ್ಲಿದ್ದವರು ಪೊಲೀಸರ ಮೇಲೆ ಹಲ್ಲೆಗೆ ಮುಂದಾದರು. ನಾಲ್ವರ ಪೈಕಿ ಇಬ್ಬರಿಂದ ಪೊಲೀಸರ ಮೇಲೆ ದಾಳಿ ನಡೆದಾಗ ಆತ್ಮರಕ್ಷಣೆಗಾಗಿ ಆರೋಪಿಗಳ ಮೇಲೆ ಪೊಲೀಸ್ ಅಧಿಕಾರಿಗಳು ಗುಂಡು ಹಾರಿಸಿದ್ದಾರೆಂದು ಡಾ. ಶರಣಪ್ಪ ಹೇಳಿದ್ದಾರೆ.

ದರೋಡೆಕೋರರನ್ನು ಬಂಧಿಸಿರುವ ಸಬರ್ಬನ್‌ ಪಿಐ ಸಂತೋಷ ತಟ್ಟೇಪಳ್ಳಿ, ಗುವಿವಿ ಪಿಐ ಸುಶೀಲ್‌ ಕುಮಾರ್‌, ಪಿಎಸ್‌ಐ ಬಸವರಾಜ, ಪೇದೆಗಳಾದ ಮಂಜುನಾಥ, ಪಿರೋಜ್‌, ಶಶಿಕಾಂತ್‌, ವಿಠ್ಠಲ, ಭೀಮಾ ನಾಯಕ್‌, ರಾಜಕುಮಾರ್‌, ರಾಜು ಟಾಕಳೆ, ಗುರುರಾಜ, ಅನೀಲ, ನಾಗೇಂದ್ರ , ಚೆನ್ನವೀರ ಇವರಿದ್ದ ತಂಡಕ್ಕೆ ಕಮೀಷನರ್‌ ಶರಣಪ್ಪ 25 ಸಾವಿರ ನಗದು ಬಹುಮಾನ ಘೋಷಿಸಿದ್ದಾರೆ.

----

ಫೋಟೋ- ಕಮೀಚನರ್‌ ಭೇಟಿ

ಕಲಬುರಗಿ ಪೊಲೀಸ್‌ ಕಮೀಶ್ನರ್‌ ಡಾ. ಶರಣಪ್ಪ ಢಗೆ ಅವರು ಎಟಿಎಂ ದರೋಡೆಕೋರರನ್ನು ಬಂಧಿಸುವಾಗ ನಡೆದ ದಾಳಿಯಲ್ಲಿ ಗಾಯಗೊಂಡ ನಗರ ಪೊಲೀಸ್‌ ಪೇದೆಗಳನ್ನು ಆಸ್ಪತ್ರೆಯಲ್ಲಿ ಭೇಟಿ ಮಾಡಿ ಆರೋಗ್ಯವಿಚಾರಿಸಿದರು.

ಫೋಟೋ- ತಸ್ಲೀಂ

ಫೋಟೋ- ಶರೀಫ್‌

ಫೋಟೋ- ಶಹೀದ

ಫೋಟೋ-್‌ ಅಮೀರ್‌