ಈ ಬಾರಿ 150 ಜೊತೆ ಕೋಣಗಳಿರುವ ಕಂಬಳವನ್ನು 24 ಗಂಟೆಯೊಳಗೆ ಹಾಗೂ ಅದಕ್ಕಿಂತ ಹೆಚ್ಚಿನ ಕೋಣಗಳಿರುವ ಕಂಬಳವನ್ನು 30 ಗಂಟೆಯೊಳಗೆ ಪೂರ್ಣಗೊಳಿಸುವ ಹೊಸ ನಿಯಮ ಜಾರಿಗೊಳಿಸಲಾಗಿದೆ ಎಂದು ಜಿಲ್ಲಾ ಕಂಬಳ ಸಮಿತಿಯ ನೂತನ ಅಧ್ಯಕ್ಷ ಚಂದ್ರಹಾಸ್ ಸಾಧು ಸನಿಲ್ ತಿಳಿಸಿದರು.

ಮೂಡುಬಿದಿರೆ: ಈ ಬಾರಿ 150 ಜೊತೆ ಕೋಣಗಳಿರುವ ಕಂಬಳವನ್ನು 24 ಗಂಟೆಯೊಳಗೆ ಹಾಗೂ ಅದಕ್ಕಿಂತ ಹೆಚ್ಚಿನ ಕೋಣಗಳಿರುವ ಕಂಬಳವನ್ನು 30 ಗಂಟೆಯೊಳಗೆ ಪೂರ್ಣಗೊಳಿಸುವ ಹೊಸ ನಿಯಮ ಜಾರಿಗೊಳಿಸಲಾಗಿದೆ ಎಂದು ಜಿಲ್ಲಾ ಕಂಬಳ ಸಮಿತಿಯ ನೂತನ ಅಧ್ಯಕ್ಷ ಚಂದ್ರಹಾಸ್ ಸಾಧು ಸನಿಲ್ ತಿಳಿಸಿದರು.ಮೂಡುಬಿದಿರೆಯ ಸೃಷ್ಟಿ ಗಾರ್ಡನ್‌ನಲ್ಲಿ ಭಾನುವಾರ ನಡೆದ ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು ಜಿಲ್ಲೆಗಳನ್ನೊಳಗೊಂಡ ಜಿಲ್ಲಾ ಕಂಬಳ ಸಮಿತಿಯ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಅವರು ಮಾತನಾಡಿದರು.

ಬೆಳಗ್ಗೆ 9 ಗಂಟೆಗೆ ಆರಂಭವಾಗುವ ಕಂಬಳವು ಮರುದಿನ ಬೆಳಿಗ್ಗೆ 9 ಗಂಟೆಯೊಳಗೆ ಮುಕ್ತಾಯವಾದರೆ ಮಾತ್ರ ಅನುದಾನಕ್ಕೆ ಅರ್ಹತೆ ದೊರೆಯಲಿದೆ. ಈ ವರ್ಷ ನಾಲ್ಕು ಹೊಸ ಕಂಬಳಗಳು ಸೇರ್ಪಡೆಯಾಗುತ್ತಿದ್ದು, ಎಲ್ಲ ಕಂಬಳ ನಡೆಯುವ ಸ್ಥಳಗಳಲ್ಲಿ ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ ಕಡ್ಡಾಯವಾಗಿ ಕಲ್ಪಿಸಬೇಕು. ತೀರ್ಪುಗಾರರು ಕಡ್ಡಾಯವಾಗಿ ಜಿಲ್ಲಾ ಕಂಬಳ ಸಮಿತಿಯ ಸದಸ್ಯತ್ವ ಪಡೆದು ಮತದಾನದ ಹಕ್ಕು ಹೊಂದಬೇಕು ಎಂದರು.

ಜಿಲ್ಲಾ ಕಂಬಳ ಸಮಿತಿಯ ಮಾಜಿ ಅಧ್ಯಕ್ಷ ಭಾಸ್ಕರ್ ಎಸ್. ಕೊಟ್ಯಾನ್ ಮಾತನಾಡಿ, ಉತ್ತಮ ಯೋಜನೆ, ಸಮನ್ವಯದೊಂದಿಗೆ ಕಂಬಳವನ್ನು ನಿಗದಿತ ಸಮಯಕ್ಕೆ ಮುಕ್ತಾಯಗೊಳಿಸಬೇಕು ಎಂದು ಸಲಹೆ ನೀಡಿದರು.ಮಾಜಿ ಸಚಿವ ಕೆ. ಅಭಯಚಂದ್ರ ಜೈನ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ ನೂತನ ಪದಾಧಿಕಾರಿಗಳಿಗೆ ಶುಭ ಹಾರೈಸಿದರು.ರಾಜ್ಯ ಕಂಬಳ ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ ವಿಜಯ್ ಕುಮಾರ್ ಕಂಗಿನಮನೆ, ಜಿಲ್ಲಾ ಸಮಿತಿಯ ಗೌರವ ಸಲಹೆಗಾರ ಕೊಳಚ್ಚೂರು ಕೊಂಡೊಟ್ಟು ಸುಕುಮಾರ್ ಶೆಟ್ಟಿ, ಜಿಲ್ಲಾ ಕಂಬಳ ಸಮಿತಿಯ ಮಾಜಿ ಅಧ್ಯಕ್ಷರಾದ ಕೊಳಕ್ಕೆ ಇರ್ವತ್ತೂರು ಭಾಸ್ಕರ್ ಕೊಟ್ಯಾನ್, ಎರ್ಮಾಳ್ ರೋಹಿತ್ ಹೆಗ್ಡೆ, ಜಿಲ್ಲಾ ಕಂಬಳ ಸಮಿತಿ ಪ್ರಧಾನ ಕಾರ್ಯದರ್ಶಿ ರೆಂಜಾಳ ವಿದ್ಯಾಧರ್ ಜೈನ್, ಕೋಶಾಧಿಕಾರಿ ಸಂದೀಪ್ ಶೆಟ್ಟಿ, ಉಪಾಧ್ಯಕ್ಷರಾದ ಮಲ್ಲಿಕಾ ಯಶವಂತ ಶೆಟ್ಟಿ, ರಶ್ಮಿತ್ ಶೆಟ್ಟಿ, ಉದಯ ಶೆಟ್ಟಿ ಕಾಂತಾವರ, ಬೋಳಾದ ತ್ರಿಶಾಲ್ ಕೆ. ಪೂಜಾರಿ, ಮಿಜಾರು ಶಕ್ತಿಪ್ರಸಾದ್ ಶೆಟ್ಟಿ, ಇರುವೈಲು ಪಾಣಿಲ ಸತೀಶ್ಚಂದ್ರ ಸಾಲ್ಯಾನ್ ,ಗಿರೀಶ್ ಆಳ್ವ, ಜೊತೆ ಕಾರ್ಯದರ್ಶಿ ಬೆಳ್ಳಿಪಾಡಿ ಕೈಪ ಕೇಶವ ಭಂಡಾರಿ, ತೀರ್ಪುಗಾರರ ಸಂಚಾಲಕ ಸುಧೀಶ್ ಕುಮಾರ್ ಆರಿಗ ಬಂಗಾಡಿ ಉಪಸ್ಥಿತರಿದ್ದರು.ಮೈಸೂರು ಕಂಬಳ ಸಿದ್ಧತೆ: ರಾಜ್ಯ ಕಂಬಳ ಅಸೋಸಿಯೇಷನ್ ಅಧ್ಯಕ್ಷ, ಜಿಲ್ಲಾ ಕಂಬಳ ಸಮಿತಿಯ ನಿಕಟಪೂರ್ವ ಅಧ್ಯಕ್ಷ ಡಾ. ದೇವಿಪ್ರಸಾದ್ ಶೆಟ್ಟಿ ಬೆಳಪು ಅವರು ನೂತನ ಅಧ್ಯಕ್ಷ ಚಂದ್ರಹಾಸ್ ಸಾಧು ಸನಿಲ್ ಅವರಿಗೆ ಅಧಿಕಾರ ಹಸ್ತಾಂತರಿಸಿ ಮಾತನಾಡಿ, ಮೈಸೂರು ದಸರಾ ಅಂಗವಾಗಿ ಕಂಬಳ ಆಯೋಜನೆಗೆ ರಾಜ್ಯ ಸರ್ಕಾರ ಸಕಾರಾತ್ಮಕ ಸ್ಪಂದನೆ ನೀಡಿದ್ದು, ಮುಖ್ಯಮಂತ್ರಿ ನೇತೃತ್ವದ ಸಭೆಯಲ್ಲಿ ದಸರಾ ಕಾರ್ಯಸೂಚಿಗೆ ಸೇರಿಸಲಾಗಿದೆ. ಅ.18, 19ರಂದು ಮೈಸೂರು ದಸರಾ ಕಂಬಳ ನಡೆಸುವ ಉದ್ದೇಶವಿದ್ದು, ಕಂಬಳ ಯಜಮಾನರ ಅಭಿಪ್ರಾಯದ ಮೇರೆಗೆ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದರು.ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯ 29 ಕಂಬಳಗಳಿಗೆ ಪ್ರವಾಸೋದ್ಯಮ ಇಲಾಖೆಯಿಂದ ತಲಾ ₹5 ಲಕ್ಷ, ಮೂಲಸೌಕರ್ಯ ಅಭಿವೃದ್ಧಿಗೆ ಕ್ರೀಡಾ ಇಲಾಖೆಯಿಂದ ₹2 ಲಕ್ಷ ಅನುದಾನ ಮಂಜೂರಾಗಿದ್ದು, ತೀರ್ಪುಗಾರರು, ಪರಿಚಾರಕರಿಗೆ ವಿಶೇಷ ಕಾರ್ಮಿಕ ಕಾರ್ಡ್ ವಿತರಿಸುವ ಯೋಜನೆಯೂ ಜಾರಿಯಾಗಲಿದೆ ಎಂದರು.