ನಗರಸಭೆಯಲ್ಲಿ ಘನತ್ಯಾಜ್ಯ ವಿಲೇವಾರಿ ನಿಯಮ -2026ರ ಪರಿಣಾಮಕಾರಿ ಅನುಷ್ಟಾನ
ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರುನಗರದಲ್ಲಿ ಜುಲೈ 1 ರಿಂದ ನಾಲ್ಕು ಹಂತದಲ್ಲಿ ಕಸ ವಿಂಗಡಣೆ ಕಡ್ಡಾಯವಾಗಿದ್ದು ತಪ್ಪಿದರೆ ಸುಪ್ರೀಂ ಕೋರ್ಟ್ ಆದೇಶದಂತೆ ದಂಡ ವಿಧಿಸಲಾಗುವುದು ಎಂದು ನಗರಸಭಾ ಪೌರಾಯುಕ್ತ ಬಿ.ಸಿ. ಬಸವರಾಜು ಎಚ್ಚರಿಕೆ ನೀಡಿದರು.
ಮಂಗಳವಾರ ನಗರಸಭೆಯಲ್ಲಿ ನಡೆದ ಘನತ್ಯಾಜ್ಯ ವಿಲೇವಾರಿ ನಿಯಮ -2026ರ ಪರಿಣಾಮಕಾರಿ ಅನುಷ್ಟಾನ ಕುರಿತು ಬೃಹತ್ ತ್ಯಾಜ್ಯ ಉತ್ಪಾದಕರಿಗೆ, ಹೋಟೆಲ್, ಬಾರ್ ಅಂಡ್ ರೆಸ್ಟೋರೆಂಟ್, ಬೇಕರಿ ಮತ್ತು ಬೀದಿ ಬದಿ ಆಹಾರ ತಯಾರಕರು ಹಾಗೂ ಮಾರಾಟಗಾರರಿಗೆ ತ್ಯಾಜ್ಯ ನಿರ್ವಹಣೆ ಮತ್ತು ಆಹಾರದ ಗುಣಮಟ್ಟ ಕುರಿತ ಅರಿವು ಕಾರ್ಯಕ್ರಮದಲ್ಲಿ ಮಾತನಾಡಿ ಕಸ ವಿಲೇವಾರಿ ಕಾರ್ಯವನ್ನು ನಗರಸಭೆ ಸಿಬ್ಬಂದಿ ಸರಿಯಾಗಿ ನಿರ್ವಹಿಸುತ್ತಿಲ್ಲ. ಎಲ್ಲೆಂದರಲ್ಲಿ ಕಸ ಹಾಕುತ್ತಿರುವ ಬಗ್ಗೆ ಕ್ರಮ ವಹಿಸಬೇಕು. ಶಾಶ್ವತ ಕಸ ನಿರ್ವಹಣೆ ಮೂಲಕ ನಗರ ಸೌಂದರ್ಯ ಹೆಚ್ಚಿಸಬೇಕೆಂದು ಸೂಚಿಸಿದರು.ಭೂಪಾಲ್ ನಗರದ ಮಾದರಿಯಲ್ಲಿ ನಮ್ಮ ನಗರವನ್ನು ಸ್ವಚ್ಛ ಕಸ ಮುಕ್ತ ಹಾಗೂ ಹೈಟೆಕ್ ನಗರವಾಗಿಸಲು ಶ್ರಮಿಸಬೇಕು. ನಾಗರಿಕರಲ್ಲಿ ಜಾಗೃತಿ ಮೂಡಿಸಬೇಕೆಂದು ಹೇಳಿದರು.
ಕಸ ವಿಂಗಡಣೆ ಕಾರ್ಯವನ್ನು ಹಾಸ್ಟೆಲ್, ಮನೆ, ಹೋಟೆಲ್, ಕಲ್ಯಾಣ ಮಂಟಪಗಳಲ್ಲಿ ಖಂಡಿತಾ ವಿಂಗಡಣೆ ಮಾಡಬೇಕು ಇಲ್ಲದಿದ್ದರೆ ನಗರಸಭೆಯಿಂದ ವಿದ್ಯುತ್, ಕುಡಿಯುವ ನೀರು, ಯುಜಿಡಿ ಸೇರಿದಂತೆ ಮೂಲ ಸೌಕರ್ಯ ಕಡಿತಗೊಳಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದೆಂದು ಎಚ್ಚರಿಸಿದರು.
ಜಿಲ್ಲೆ ಪ್ರವಾಸೋದ್ಯಮಕ್ಕೆ ಹೆಸರುವಾಸಿ. ಅತಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುವುದರಿಂದ ರಾಜ್ಯದಲ್ಲೆ ಮಾದರಿ ನಗರವಾಗಬೇಕು. ಜೊತೆಗೆ ಮೊದಲ ಸ್ಥಾನಕ್ಕೆ ತರುವಲ್ಲಿ ಒಗ್ಗಟ್ಟಿನಿಂದ ಶ್ರಮಿಸಬೇಕೆಂದು ಕರೆ ನೀಡಿದರು.
ಜುಲೈ 1 ರಿಂದ ಸುಪ್ರಿಂ ಕೋರ್ಟ್ ಆದೇಶದಂತೆ ಕಟ್ಟುನಿಟ್ಟಿನ ಕಾನೂನು ಕ್ರಮಕ್ಕೆ ನಗರಸಭೆ ಮುಂದಾಗಿದೆ. ಘರ್ಷಣೆಗೆ ಆಸ್ಪದ ಕೊಡದೆ ಕರ್ತವ್ಯ ನಿರ್ವಹಿಸಬೇಕು ಎಂದರು.ಹೊಸದಾಗಿ 10 ಆಟೋ ಟಿಪ್ಪರ್ ಖರೀದಿಸಲಾಗುತ್ತಿದ್ದು ಇನ್ನೊಂದು ತಿಂಗಳಲ್ಲಿ ನಗರಸಭೆಗೆ ಬಂದರೆ ಸ್ವಚ್ಛತಾ ಕಾರ್ಯ ಸುಧಾರಣೆಯಾಗಲಿದೆ. ಸಾರ್ವಜನಿಕರಿಂದ ನೀರಿನ ತೆರಿಗೆ ₹9 ಕೋಟಿ ಬಾಕಿ ಇದ್ದು, ಕೂಡಲೇ ನಗರಸಭೆಗೆ ತೆರಿಗೆ ಪಾವತಿಸು ವಂತೆ ವಿನಂತಿಸಿದ ಅವರು ಪಾವತಿ ವಿಳಂಭ ಮಾಡಿದರೆ ನಗರಸಭೆ ಸಿಬ್ಬಂದಿ ತಂಡ ಮನೆ ಮನೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ನಲ್ಲಿ ಸಂಪರ್ಕ ಕಡಿತಗೊಳಿಸುವುದಾಗಿ ತಿಳಿಸಿದರು.
ಪರಿಸರ ಅಭಿಯಂತರ ವೆಂಕಟೇಶ್ ಮಾತನಾಡಿ ಸುಪ್ರಿಂ ಕೋರ್ಟ್ ಆದೇಶದಂತೆ ಹಸಿ, ಒಣ, ನೈರ್ಮಲ್ಯ ತ್ಯಾಜ್ಯ, ವಿಶೇಷ ಕಾಳಜಿ ತ್ಯಾಜ್ಯ ಈ ರೀತಿ 4 ಹಂತದಲ್ಲಿ ಕಸ ವಿಂಗಡಿಸಿ ಸಾರ್ವಜನಿಕರು ಕಸದ ಗಾಡಿಗೆ ನೀಡಿ ನಗರ ಸೌಂದರ್ಯ ಹೆಚ್ಚಿಸಲು ಸಹಕರಿಸಬೇಕೆಂದು ಮನವಿ ಮಾಡಿದರು.ಆಹಾರ ಸುರಕ್ಷತಾ ರಾಜ್ಯ ಮುಖ್ಯಸ್ಥ ಅಭಿಲಾಷ್ ಮಾತನಾಡಿ, ಆಹಾರ ಸುರಕ್ಷತಾ ತರಬೇತಿ ಮತ್ತು ಪ್ರಮಾಣ ಪತ್ರ ವಿತರಿಸ ಲಾಗುತ್ತಿದೆ. ಆಹಾರ ತಯಾರಕರು ಕಡ್ಡಾಯವಾಗಿ ಪ್ರಮಾಣ ಪತ್ರ ಪಡೆಯಬೇಕು ಎಂದರು. ಗ್ರಾಹಕರಿಗೆ ಗುಣಮಟ್ಟದ ಆಹಾರ ನೀಡುವ ಜೊತೆಗೆ ಸ್ವಚ್ಛತೆಗೆ ಸಹಕರಿಸಬೇಕು. ಆಹಾರ ಕಲಬೆರಿಕೆ ಆಗದಂತೆ ಸುರಕ್ಷಿತ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.
ಜಿಲ್ಲೆಯ ಎಲ್ಲಾ ಆಹಾರ ತಯಾರಕರಿಗೆ ಆಹಾರ ಸುರಕ್ಷತೆ ತರಬೇತಿ ಬಗ್ಗೆ ಒಂದು ದಿನದ ತರಬೇತಿ ಹಮ್ಮಿಕೊಳ್ಳ ಲಾಗುವುದು ಪ್ರತಿಯೊಬ್ಬರ ನೋಂದಣಿ ಕಡ್ಡಾಯ ಎಂದರು.ಈ ವೇಳೆ ಪರಿಸರ ಅಭಿಯಂತರ ವೆಂಕಟೇಶ್, ಆರೋಗ್ಯ ನಿರೀಕ್ಷಕ ಈಶ್ವರ್, ರಂಗಪ್ಪ, ನಾಗಪ್ಪ, ಚೇತನ್ ಸ್ವಾಮಿ, ಯುವರಾಜ್, ಆರೋಗ್ಯ ನಿರೀಕ್ಷಕ ವೆಂಕಟೇಶ್ ಇದ್ದರು.