ಸಾರಾಂಶ
ವಿಶೇಷ ವರದಿ
ಕನ್ನಡಪ್ರಭ ವಾರ್ತೆ ಕಾರ್ಕಳಪ್ರಾಥಮಿಕ ಹಾಗೂ ಪ್ರೌಢ ಶಾಲಾ ವಿದ್ಯಾರ್ಥಿಗಳ ವೈಜ್ಞಾನಿಕ ಪ್ರತಿಭೆಗಳಿಗೆ ವೇದಿಕೆ ಒದಗಿಸುವ ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯವು ನಡೆಸುವ ವಿಜ್ಞಾನ ಮಾದರಿ ತಯಾರಿಕೆಯ ರಾಜ್ಯಮಟ್ಟದ ಇನ್‌ಸ್ಫಯರ್ ಸ್ಪರ್ಧೆಯಲ್ಲಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದ ಕಾರ್ಕಳ ತಾಲೂಕಿನ ಕುಕ್ಕುಜೆಯ ಸರ್ಕಾರಿ ಪ್ರೌಢಶಾಲೆಯ ನಾಲ್ಕು ವಿದ್ಯಾರ್ಥಿಗಳು ರಾಜ್ಯಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.
ಅನೀಶ್ ಪೂಜಾರಿ, ಅಮೂಲ್ಯ ಹೆಗ್ಡೆ, ಶ್ರೇಯಾ ಹಾಗೂ ನಿಕಿತಾ ಈ ಸಾಧನೆ ಮಾಡಿದ ವಿದ್ಯಾರ್ಥಿಗಳಾಗಿದ್ದಾರೆ.ಈ ಬಾರಿ ಉಡುಪಿ ಜಿಲ್ಲಾಮಟ್ಟಕ್ಕೆ ಒಟ್ಟು 133 ವಿದ್ಯಾರ್ಥಿಗಳು ಆಯ್ಕೆಯಾಗಿದ್ದರು. ಅವರಲ್ಲಿ ಜಿಲ್ಲೆಯ ೫ ತಾಲೂಕುಗಳಿಂದ ರಾಜ್ಯಮಟ್ಟಕ್ಕೆ ೧೩ ವಿದ್ಯಾರ್ಥಿಗಳು ಆಯ್ಕೆಯಾಗಿದ್ದು, ಅವರಲ್ಲಿ ಕುಕ್ಕುಜೆ ಶಾಲೆಯೊಂದರಿಂದಲೇ ಸ್ಪರ್ಧಿಸಿದ್ದ ನಾಲ್ಕೂ ವಿದ್ಯಾರ್ಥಿಗಳು ಆಯ್ಕೆಯಾಗಿದ್ದು ಒಂದು ಸಾಧನೆಯಾಗಿದೆ.
ಶಾಲೆಯ ರಾಜ್ಯಪ್ರಶಸ್ತಿ ಪುರಸ್ಕೃತ ಸಮಾಜ ವಿಜ್ಞಾನ ಶಿಕ್ಷಕ ಸುರೇಶ್ ಮರಕಾಲ ಅವರು ಈ ವಿದ್ಯಾರ್ಥಿಗಳಿಗೆ ಮಾಡೆಲ್ ತಯಾರಿಕೆಗೆ ಮಾರ್ಗದರ್ಶನ ನೀಡಿ ತರಬೇತಿಗೊಳಿಸಿದ್ದಾರೆ. ವಿಜ್ಞಾನ ಶಿಕ್ಷಕಿ ಪ್ರತಿಮಾ, ಗಣಿತ ಶಿಕ್ಷಕರಾದ ಬಾಬುರಾಯ ಕಾಮತ್ ಹಾಗೂ ಜಯಪ್ರಕಾಶ್ ಸಹಕರಿಸಿದ್ದಾರೆ.ಸುರೇಶ್ ಮರಕಾಲ ಹಿಂದೆ ಕುಂದಾಪುರ ತಾಲೂಕಿನ ಚಾರ್ಮಕ್ಕಿ ಸರ್ಕಾರಿ ಪ್ರೌಢಶಾಲೆಯಲ್ಲಿ ಶಿಕ್ಷರಾಗಿದ್ದಾಗ ತರಬೇತುಗೊಳಿಸಿದ್ದ ಇಬ್ಬರು ವಿದ್ಯಾರ್ಥಿಗಳು ರಾಷ್ಟಮಟ್ಟದಲ್ಲಿ ತೃತೀಯ ಸ್ಥಾನ ಪಡೆದಿದ್ದರು.
ವಿದ್ಯಾರ್ಥಿಗಳ ಹಾಗೂ ಸಂಸ್ಥೆಯ ಈ ಸಾಧನೆಗೆ ಜಿಲ್ಲಾ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪನಿರ್ದೇಶಕ ಗಣಪತಿ ಕೆ., ಇನ್‌ಸ್ಫಯರ್ ಅವಾರ್ಡ್ ಜಿಲ್ಲಾ ನೋಡಲ್ ಅಧಿಕಾರಿ ಸುಬ್ರಹ್ಮಣ್ಯ ಭಟ್, ಕಾರ್ಕಳ ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಎ. ಲೋಕೇಶ್, ಸಂಸ್ಥೆಯ ಶಿಕ್ಷಕ ವೃಂದದವರು ಅಭಿನಂದಿಸಿದ್ದಾರೆ.ಮುಫಲ್, ಫ್ಲಡ್ ಡಿಟೆಕ್ಟರ್, ಕ್ರಾಪ್ ಸೇವರ್, ರೋಪೋಮೀಟರ್
ಅನಿಶ್ ಪೂಜಾರಿ ತಯಾರಿಸಿದ್ದ ‘ಮುಫತ್’ (ಮಲ್ಟಿ ಫಂಕ್ಷನಲ್ ಅಗ್ರಿಕಲ್ಚರ್ ಟೂಲ್) ಯಂತ್ರವು ರೈತನ ಹದಿಮೂರಕ್ಕಿಂತಲೂ ಹೆಚ್ಚು ಕೆಲಸಗಳನ್ನು ನಿರ್ವಹಿಸಬಲ್ಲದು. ಅಮೂಲ್ಯ ಹೆಗ್ಡೆ ತಯಾರಿಸಿದ ‘ಫ್ಲಡ್ ಡಿಟೆಕ್ಟರ್’ ಪ್ರವಾಹದಂತಹ ನೈಸರ್ಗಿಕ ವಿಕೋಪದ ಕಾಲದಲ್ಲಿ ಊರನ್ನೇ ಜಾಗೃತಗೊಳಿಸಿ, ಪ್ರಾಣ ಹಾನಿಯನ್ನು ತಡೆಯುತ್ತದ. ಶ್ರೇಯಾ ತಯಾರಿಸಿದ ‘ಕ್ರಾಪ್ ಸೇವರ್’ ರೈತನ ಬೆಳೆಗಳನ್ನು ಕದಿಯುವ ಪ್ರಾಣಿ, ಪಕ್ಷಿಗಳು, ಕಳ್ಳಕಾಕರರ ಚಲನವಲವನ್ನು ಗುರುತಿಸಿ, ಪ್ರಕಾಶಮಾನ ಬೆಳಕನ್ನು ಅವರ ಮೇಲೆ ಹಾಯಿಸಿ, ಸೈರನ್ ಮೊಳಗಿಸಿ ಓಡಿಸುತ್ತದೆ. ನಿಕಿತಾ ತಯಾರಿಸಿದ ‘ರೋಪೋ ಮೀಟರ್’ ವಯರ್, ತಂತಿ, ಹಗ್ಗ ಇತ್ಯಾದಿಗಳನ್ನು ಚಿಟಿಕೆ ಹಾಕುವುರಲ್ಲಿ ಕರಾರುವಕ್ಕಾಗಿ ಅಳೆಯಬಲ್ಲುದು.ರಾಷ್ಟ್ರಮಟ್ಟದಲ್ಲಿ ಗೆದ್ದರೆ ಜಪಾನಿನ ಸುಕುರಾ ಮೇಳಕ್ಕೆಜಿಲ್ಲಾಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗೂ ಕೇಂದ್ರ ಸಚಿವಾಲಯವು ಪ್ರಾಜೆಕ್ಟ್ ತಯಾರಿಕೆ ಖರ್ಚುವೆಚ್ಚಗಳಿಗಾಗಿ ತಲಾ 10 ಸಾವಿರ ರು. ನೀಡುತ್ತದೆ. ಜಿಲ್ಲಾ, ರಾಜ್ಯಮಟ್ಟದಲ್ಲಿ ವಿಜೇತ ಪ್ರತಿಭಾವಂತ 60 ವಿದ್ಯಾರ್ಥಿಗಳು ರಾಷ್ಟಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸುತ್ತಾರೆ. ಅವರಲ್ಲಿ ಆಯ್ದ ವಿದ್ಯಾರ್ಥಿಗಳು ಜಪಾನಿನಲ್ಲಿ ನಡೆಯುವ ಅಂತಾರಾಷ್ಟ್ರೀಯ ವಿಜ್ಞಾನ ವಿನಿಮಯ ಮೇಳ ‘ಸುಕುರಾ’ ಕಾರ್ಯಕ್ರಮದಲ್ಲಿ ಭಾಗವಹಿಸುವ ಸುವರ್ಣಾವಕಾಶ ಪಡೆಯುತ್ತಾರೆ.