ಸಾರಾಂಶ
ಲಕ್ಷಾಂತರ ಮೌಲ್ಯದ ವಸ್ತು ವಶಕ್ಕೆ । ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಾಹಿತಿ
ಕನ್ನಡಪ್ರಭ ವಾರ್ತೆ ಕೊಪ್ಪಳ2023ರ ಜುಲೈಯಿಂದ 2024ರ ಜುಲೈ 27ರವರೆಗೆ ಕುಕನೂರು, ಯಲಬುರ್ಗಾ, ಬೇವೂರು , ಕುಷ್ಟಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ನಾಲ್ಕು ಕಳ್ಳತನ ಪ್ರಕರಣದ ಒಟ್ಟು 16 ಆರೋಪಿಗಳನ್ನು ಬಂಧಿಸಿರುವ ಪೊಲೀಸರು ಲಕ್ಷಾಂತರ ರೂಪಾಯಿ ಮತ್ತು ಲಕ್ಷಾಂತರ ರೂ. ಮೌಲ್ಯದ ವಸ್ತು ವಶಪಡಿಸಿಕೊಂಡಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ರಾಮ್ ಎಲ್. ಅರಸಿದ್ದಿ ಹೇಳಿದ್ದಾರೆ.
ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಪೊಲೀಸ್ ಕಾರ್ಯಾಚರಣೆಯನ್ನು ಶ್ಲಾಘಿಸಿದ್ದಾರೆ.ಭಾನಾಪುರ ಕುಕನೂರು ನಡುವಿನ ವೀರಾಪುರ ಕ್ರಾಸ್ ನ ಮೈಲಾರಲಿಂಗೇಶ್ವರ ಸ್ಟೋನ್ ಕ್ರಷರ್ ನಲ್ಲಿ ಸಿಸಿ ಕ್ಯಾಮರಾ ಲೈನ್ ಕತ್ತರಿಸಿ 3 ಲಕ್ಷ 32 ಸಾವಿರ ರೂ. ಮೌಲ್ಯದ ಕಬ್ಬಿಣ ವಸ್ತು ಕಳ್ಳತನ ಮಾಡಿದ್ದ ಆರೋಪಿಗಳನ್ನು ಯಲಬುರ್ಗಾ ಸಿಪಿಐ, ಕುಕನೂರು ಠಾಣೆ ಪಿಎಸ್ಐ ಗುರುರಾಜ ತಂಡ ಬಂಧಿಸಿ ₹ 1 ಲಕ್ಷದ 10 ಸಾವಿರ ಮೌಲ್ಯದ ಕ್ರಷರ್ ಬಿಡಿ ಭಾಗ, ಕರೆಂಟ್ ತಂತಿ ಮತ್ತು ₹1 ಲಕ್ಷ ನಗದು ವಶಪಡಿಸಿಕೊಂಡಿದ್ದಾರೆ.
ಯಲಬುರ್ಗಾ ಪೊಲೀಸ್ ಠಾಣೆ ವ್ಯಾಪ್ತಿಯ ಗೆದಗೇರಿ ಸರ್ಕಾರಿ ಪ್ರೌಢಶಾಲೆಯ ಬಿಸಿಯೂಟ ಕೋಣೆಯ ಬೀಗ ಮುರಿದು ₹19,800 ಬೆಲೆಯ ಬಿಸಿಊಟದ ಅಡುಗೆ ಸಾಮಗ್ರಿ ಕಳ್ಳತನ ನಡೆದಿತ್ತು. ಯಲಬುರ್ಗಾ ಸಿಪಿಐ ಮೌನೇಶ್ವರ ಪಾಟೀಲ್, ಯಲಬುರ್ಗಾ ಪಿಎಸ್ಐ ವಿಜಯ ಪ್ರತಾಪ್ ತಂಡ ಆರೋಪಿಗಳಾದ ಗಜೇಂದ್ರಗಡದ ಕೊರವರ ಓಣಿಯ ಶ್ರೀನಿವಾಸ ಕಂದಗಲ್, ವೆಂಕಟೇಶ ಮುಧೋಳನನ್ನು ಬಂಧಿಸಿದ್ದು, ಇವರಿಂದ ಬೇರೆ ಬೇರೆ ಐದು ಕಳ್ಳತನ ಪ್ರಕರಣದ ವಸ್ತು ಸೇರಿ ₹ 50 ಸಾವಿರ ಬೆಲೆಯ ವಸ್ತು ವಶಪಡಿಸಿಕೊಂಡಿದ್ದಾರೆ.ಬೇವೂರು ಪೊಲೀಸ್ ಠಾಣೆ ವ್ಯಾಪ್ತಿಯ ಗುನ್ನಾಳನ ಜಮೀನೊಂದರಲ್ಲಿದ್ದ ಸೆಕ್ಯೂರಿಟಿ ಗಾರ್ಡ್‌ಗೆ ಚಾಕು ತೋರಿಸಿ ವಿದ್ಯುತ್ ಸಾಮಗ್ರಿ ಕಳ್ಳತನ ನಡೆದಿತ್ತು. ಕೊಪ್ಪಳ ತಾಲೂಕಿನ ಹಾಲಹಳ್ಳಿಯ ಹಾಲಪ್ಪ ಭಜಂತ್ರಿ, ಸಿದ್ದೇಶ ಭಜಂತ್ರಿ, ಗವಿಸಿದ್ದಪ್ಪ ಭಜಂತ್ರಿ, ಕುಕನೂರು ತಾಲೂಕಿನ ಮಾಳೆಕೊಪ್ಪದ ಹನುಮಂತಪ್ಪ ಚಲವಾದಿ, ಕೊಪ್ಪಳ ಸಜ್ಜಿಹೊಲದ ಆನಂದ ಕಲಾಲ್, ಶ್ರೀಕಾಂತ ಕೊರವರ, ತಾಯಪ್ಪ ಭಜಂತ್ರಿ, ಕೊಪ್ಪಳ ಹತ್ತಿರ ಭಾಗ್ಯನಗರದ ಗಂಗಾಧರ ಭಜಂತ್ರಿ, ದೇವರಾಜ ಹೊಸಮನಿ ಎಂಬವರನ್ನು ಬಂಧಿಸಿ ₹ 7 ಲಕ್ಷ ನಗದು, 5 ಕ್ವಿಂಟಲ್ ಅಲ್ಯೂಮಿನಿಯಂ ತಂತಿ, ಅಶೋಕ ಲೇಲ್ಯಾಂಡ್ ಗೂಡ್ಸ್ ವಾಹನ, ಚಾಕು ಬ್ಲೇಡ್ ಕಟರ್ 2 ಬೈಕ್ ವಶಪಡಿಸಿಕೊಂಡಿದ್ದಾರೆ.
ಕುಷ್ಟಗಿಯ ಮಾರುತಿ ಸರ್ಕಲ್ ನಲ್ಲಿರುವ ಮೊಬೈಲ್ ಶಾಪ್ ಕಳ್ಳತನ ಪ್ರಕರಣ ಬೇಧಿಸಿದ ಪೊಲೀಸರು ಬೆಂಗಳೂರಿನ ಸಲ್ಮಾನ್ ಮನ್ಸೂರ್, ಸೈ. ನದೀಮ್ ನನ್ನು ಬಂಧಿಸಿ ₹5 ಲಕ್ಷ 28 ಸಾವಿರ ಬೆಲೆಯ 27 ಮೊಬೈಲ್ ವಶಪಡಿಸಿಕೊಂಡಿದ್ದಾರೆ. ಪರಾರಿಯಾಗಿರುವ ಇನ್ನೊರ್ವನ ಪತ್ತೆ ಕಾರ್ಯ ನಡೆಸಿದ್ದಾರೆ.ಈ ನಾಲ್ಕು ಕಳ್ಳತನ ಪ್ರಕರಣದ ಆರೋಪಿಗಳ ಬಂಧಿಸಿರುವ ಪೊಲೀಸ್ ಅಧಿಕಾರಿಗಳ ತಂಡ ಮತ್ತು ಸಿಬ್ಬಂದಿಗೆ ಬಹಮಾನ ಘೋಷಣೆ ಮಾಡಿರುವುದಾಗಿ ಎಸ್ಪಿ ಡಾ. ರಾಮ್ ಅರಸಿದ್ದಿ ತಿಳಿಸಿದರು.