ಗ್ರಾಮ ದೇವತೆ ಪಟ್ಟಲದಮ್ಮ, ಶ್ರೀಸಿದ್ದೇಶ್ವರಸ್ವಾಮಿ ಸತ್ತಿಗೆ ಹಾಗೂ ಪಟ್ಟದ ರಾಣಿ ದೇವರಿಗೆ ನಡುಕೇರಿ ವೀರಭದ್ರ ದೇವಸ್ಥಾನದ ಆವರಣದಲ್ಲಿ ಹೂ-ಹೊಂಬಾಳೆ ಮಾಡಿಕೊಂಡು ವಿಶೇಷವಾಗಿ ಅಲಂಕರಿಸಿ ಪೂಜಾ ಕುಣಿತದೊಡನೆ ಮೆರವಣಿಗೆ ಮುಖಾಂತರ ದೇವಸ್ಥಾನಕ್ಕೆ ದೇವರ ಮೂರ್ತಿಗಳನ್ನು ತರಲಾಯಿತು.

ಕನ್ನಡಪ್ರಭ ವಾರ್ತೆ ಹಲಗೂರು

ಗಾಣಿಗರ ಬೀದಿಯ ಶ್ರೀಪಟ್ಟದರಾಣಿ ದೇವಸ್ಥಾನದ ನಾಲ್ಕನೇ ವರ್ಷದ ವಾರ್ಷಿಕೋತ್ಸವವನ್ನು ಭಕ್ತಿ ಭಾವ ಪೂರಕವಾಗಿ ಆಚರಿಸಲಾಯಿತು.

ಗುರುವಾರ ಬೆಳಗ್ಗೆ ಪಟ್ಟದ ರಾಣಿ ಅಮ್ಮನವರ ಮೂರ್ತಿಯನ್ನು ಶುಚಿಗೊಳಿಸಿದ ನಂತರ ದುರ್ಗಾ ಹೋಮ ಮಹಾಗಣಪತಿ ಹೋಮ ನವಗ್ರಹ ಶಾಂತಿ ಹೋಮ, ಪಂಚಾಮೃತ ಅಭಿಷೇಕ ನಡೆಸಿ ನಂತರ ವಿವಿಧ ಪುಷ್ಪಗಳಿಂದ ದೇವರ ಮೂರ್ತಿಯನ್ನು ಅಲಂಕರಿಸಿ ವಿಶೇಷವಾಗಿ ಪೂಜಾ ಪುನಸ್ಕಾರಗಳನ್ನು ನಡೆಸಲಾಯಿತು.

ಗ್ರಾಮ ದೇವತೆ ಪಟ್ಟಲದಮ್ಮ, ಶ್ರೀಸಿದ್ದೇಶ್ವರಸ್ವಾಮಿ ಸತ್ತಿಗೆ ಹಾಗೂ ಪಟ್ಟದ ರಾಣಿ ದೇವರಿಗೆ ನಡುಕೇರಿ ವೀರಭದ್ರ ದೇವಸ್ಥಾನದ ಆವರಣದಲ್ಲಿ ಹೂ-ಹೊಂಬಾಳೆ ಮಾಡಿಕೊಂಡು ವಿಶೇಷವಾಗಿ ಅಲಂಕರಿಸಿ ಪೂಜಾ ಕುಣಿತದೊಡನೆ ಮೆರವಣಿಗೆ ಮುಖಾಂತರ ದೇವಸ್ಥಾನಕ್ಕೆ ದೇವರ ಮೂರ್ತಿಗಳನ್ನು ತರಲಾಯಿತು. ನಂತರ ಮಹಾಮಂಗಳಾರತಿ ನಡೆಸಿ ಬಂದ ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ನಡೆಸಲಾಯಿತು.

ದೇವಸ್ಥಾನದ ಆವರಣದಲ್ಲಿ ರವಿ ಮಾತನಾಡಿ, ನಾವು ಪ್ರತಿವರ್ಷ ಅಮ್ಮನವರಿಗೆ ಪೂಜೆ ಪುನಸ್ಕಾರ ನಡೆಸಿಕೊಂಡು ಬರುತ್ತಿದ್ದು, ಇಂದು ನಾಲ್ಕನೇ ವರ್ಷದ ಪ್ರಯುಕ್ತ ವಿಶೇಷವಾಗಿ ಪೂಜೆ, ಭಕ್ತಾಧಿಗಳಿಗೆ ಅನ್ನ ಸಂತರ್ಪಣೆ ಮಾಡಿದ್ದೇವೆ ಎಂದು ತಿಳಿಸಿದರು. ಈ ವೇಳೆ ಪಟ್ಟದ ರಾಣಿ ಅಮ್ಮನವರ ಸೇವಾ ಟ್ರಸ್ಟಿನ ಅಧ್ಯಕ್ಷರು ಮತ್ತು ಎಲ್ಲಾ ಸದಸ್ಯರು ಉಪಸ್ಥಿತರಿದ್ದರು.ಇಂದಿನಿಂದ ಶ್ರೀ ರಾಘವೇಂದ್ರ ಸ್ವಾಮಿ ಅವರ 355ನೇ ಆರಾಧನಾ ಮಹೋತ್ಸವ

ಕನ್ನಡಪ್ರಭ ವಾರ್ತೆ ನಾಗಮಂಗಲಪಟ್ಟಣದ ಶ್ರೀರಾಘವೇಂದ್ರಸ್ವಾಮಿ ಸೇವಾ ಸಮಿತಿಯಿಂದ ಶ್ರೀರಾಘವೇಂದ್ರ ಸ್ವಾಮಿ ಅವರ 355ನೇ ಆರಾಧನಾ ಮಹೋತ್ಸವ ಆ.28ರಿಂದ 31ರವರೆಗೆ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ಆಯೋಜಿಸಲಾಗಿದೆ.

ಆ.28ರ ಶುಕ್ರವಾರ ಪೂರ್ಣಿಮೆಯ ಪ್ರಯುಕ್ತ ಬೆಳಗ್ಗೆ 10.30ಕ್ಕೆ ಸಾಮೂಹಿಕ ಶ್ರೀಸತ್ಯನಾರಾಯಣ ಸ್ವಾಮಿ ಪೂಜೆ ನಡೆಯಲಿದೆ. ಬಳಿಕ ಧ್ವಜಾರೋಹಣ, ಗೋಪೂಜೆ, ಧನ-ಧಾನ್ಯ ಲಕ್ಷ್ಮೀ ಪೂಜೆ, ಸ್ವಸ್ತಿವಾಚನ, ಮಹಾ ಮಂಗಳಾರತಿ ಹಾಗೂ ಪ್ರಸಾದ ವಿನಿಯೋಗ ನೆರವೇರಲಿದೆ.ಆ.29ರಂದು ಪೂರ್ವಾರಾಧನೆ ಹಾಗೂ ಆ.30ರಂದು ಮಧ್ಯಾರಾಧನೆ, ಎರಡೂ ದಿನಗಳಂದು ಬೆಳಗ್ಗೆ 5.30ಕ್ಕೆ ಸುಪ್ರಭಾತ ಹಾಗೂ ನಿರ್ಮಾಲ್ಯ ಸೇವೆ, 7.30ಕ್ಕೆ ಕ್ಷೀರಾಭಿಷೇಕ, ಫಲ-ಪಂಚಾಮೃತಾಭಿಷೇಕ, ಬೆಳಗ್ಗೆ 8.30ರಿಂದ 10.30ರವರೆಗೆ ಪಾದಪೂಜೆ, ಕನಕಾಭಿಷೇಕ, ಮಹಾಪೂಜೆ ಹಾಗೂ ಸರ್ವ ಸೇವೆಗಳು ಜರುಗಲಿವೆ. ಮಧ್ಯಾಹ್ನ 12.30ಕ್ಕೆ ಅಲಂಕಾರ ಸೇವೆ, ಮಹಾನೈವೇದ್ಯ, ಮಹಾಮಂಗಳಾರತಿ ಬಳಿಕ ಪ್ರಸಾದ ವಿನಿಯೋಗ ನಡೆಯಲಿದೆ.

ಆ.31ರಂದು ಉತ್ತರಾರಾಧನೆ ಅಂಗವಾಗಿ ಪಟ್ಟಣದ ರಾಜಬೀದಿಗಳಲ್ಲಿ ವೇದಘೋಷದೊಂದಿಗೆ ಶ್ರೀರಾಘವೇಂದ್ರ ಸ್ವಾಮಿಗಳ ಪಲ್ಲಕ್ಕಿ ಉತ್ಸವ ನಡೆಯಲಿದೆ. ಇದೇ ವೇಳೆ ಶ್ರೀಮಠದಲ್ಲಿ ರಥೋತ್ಸವ ಸೇವೆಯೂ ನೆರವೇರಲಿದೆ.ಆರಾಧನಾ ಮಹೋತ್ಸವದ ಅಂಗವಾಗಿ ಪ್ರತಿದಿನ ಸಂಜೆ 6.30ರಿಂದ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಆ.29ರಂದು ನಂಜನಗೂಡಿನ ಶ್ರೀಮತಿ ರೇಖಾ ಭಟ್ ಮತ್ತು ತಂಡದವರಿಂದ ದಾಸರ ಪದಗಳ ಗಾಯನ, ಆ.30ರಂದು ರಾಗತರಂಗದ ಆರತಿ ಭಾಸ್ಕರ್ ಮತ್ತು ತಂಡದವರಿಂದ ದಾಸರ ಪದಗಳ ಗಾಯನ ಹಾಗೂ ಆ.31ರಂದು ಬೆಂಗಳೂರಿನ ಭಾಗ್ಯಲಕ್ಷ್ಮೀ, ಮಂಜುನಾಥ್ ಮತ್ತು ತಂಡದವರಿಂದ ದಾಸರ ಪದಗಳ ಗಾಯನ ನಡೆಯಲಿದೆ.

ಶ್ರೀಮಠದಿಂದ ಮೂರು ದಿನಗಳ ಕಾಲ ಅನ್ನಸಂತರ್ಪಣೆ ವ್ಯವಸ್ಥೆ ಮಾಡಲಾಗಿದೆ. ಭಕ್ತರು ಪಾಲ್ಗೊಂಡು ಶ್ರೀ ರಾಯರ ಕೃಪೆಗೆ ಪಾತ್ರರಾಗಬೇಕು ಎಂದು ಶ್ರೀಮಠದ ಅಧ್ಯಕ್ಷ ಡಾ.ಐ. ವಿಷ್ಣುಮೂರ್ತಿ ಭಟ್ ಹಾಗೂ ಮಠದ ಗುರುಗಳಾದ ಕೆ.ಎಂ.ಭಾರತೀಶಾಚಾರ್ ಕೋರಿದ್ದಾರೆ.