ಧಾರವಾಡ ಜಿಲ್ಲೆಯಲ್ಲಿ ಹೆಚ್ಚುತ್ತಿವೆ ಫೋಕ್ಸೋ ಪ್ರಕರಣ

| Published : Jan 30 2025, 12:30 AM IST

ಸಾರಾಂಶ

ಧಾರವಾಡ ಜಿಲ್ಲೆಯಲ್ಲಿ ಹೆಚ್ಚು ಪೋಕ್ಸೋ ಪ್ರಕರಣಗಳು ದಾಖಲಾಗುತ್ತಿವೆ. ಈ ಕುರಿತು ದೂರು ನೀಡಲು ಪಾಲಕರು ಹಲವಾರು ಕಾರಣಗಳಿಂದ ನಿರಾಕರಿಸುತ್ತಾರೆ. ಅಂತಹ ಪ್ರಕರಣಗಳು ಸುಮಾರು ಇದ್ದು ಎಲ್ಲಿ ತಪ್ಪುಗಳನ್ನು ಮಾಡುತ್ತಿದ್ದೇವೆ ಎಂಬುದನ್ನು ತಿಳಿಯಬೇಕಿದೆ.

ಧಾರವಾಡ:

ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ಮಕ್ಕಳ ರಕ್ಷಣಾ ನಿರ್ದೇಶನಾಲಯ, ಜಿಲ್ಲಾಡಳಿತ ಹಾಗೂ ವಿವಿಧ ಇಲಾಖೆಗಳು ಜತೆಗೂಡಿ ಶಾಲೆಯಲ್ಲಿದೆ ಶಿಕ್ಷಣದೊಂದಿಗೆ ರಕ್ಷಣೆ ಎನ್ನುವ ಶೀರ್ಷಿಕೆಯಡಿ ಜಿಲ್ಲೆಯ ಕ್ಷೇತ್ರ ಸಂಪನ್ಮೂಲ ವ್ಯಕ್ತಿಗಳು ಹಾಗೂ ಸಮೂಹ ಸಂಪನ್ಮೂಲ ವ್ಯಕ್ತಿಗಳಿಗೆ ವಿವಿಧ ಕಾಯ್ದೆಗಳ ಕುರಿತು ಬುಧವಾರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸಭಾ ಭವನದಲ್ಲಿ ಆಯೋಜಿಸಿದ್ದ ಕಾರ್ಯಾಗಾರ ಯಶಸ್ವಿಯಾಯಿತು.

ಕಾರ್ಯಾಗಾರ ಉದ್ಘಾಟಿಸಿದ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶೇಖರಗೌಡ ರಾಮತ್ನಾಳ, ಶಾಲೆಯಲ್ಲಿ ಶಿಕ್ಷಣವಿದೆ. ಆದರೆ, ರಕ್ಷಣೆಯಲ್ಲಿ ನಾವೆಲ್ಲರು ಹಿಂದೆ ಉಳಿಯುತ್ತಿದ್ದೇವೆ. ಸಮಾಜದ ರಾಷ್ಟ್ರ ನಿರ್ಮಾಣಕಾರರಾದ ಎಲ್ಲ ಬಿಆರ್‌ಪಿ ಮತ್ತು ಸಿಆರ್‌ಪಿಗಳು ಮಕ್ಕಳ ರಕ್ಷಣೆ ಮಾಡುವಲ್ಲಿ ಶ್ರಮಿಸಬೇಕು. ಮಕ್ಕಳ ರಕ್ಷಣಾ ನೀತಿಯನ್ನು ಎಲ್ಲ ಶಾಲೆಯಲ್ಲಿ ಅನುಷ್ಠಾನಗೊಳಿಸಬೇಕು. ಮಕ್ಕಳ ಸುರಕ್ಷತಾ ಸಮಿತಿ, ಸಲಹಾ ಪೆಟ್ಟಿಗೆ, ಮಕ್ಕಳ ಸಹಾಯವಾಣಿ-1098 ನಾಮಫಲಕ ಅಳವಡಿಸಬೇಕು. ಮಕ್ಕಳೊಂದಿಗೆ ಶಾಲೆಯಲ್ಲಿ ಹೆಚ್ಚು ಸಮಯ ಮೀಸಲಿರಿಸಿ ಗುಣಮಟ್ಟದ ಶಿಕ್ಷಣ ಒದಗಿಸಲು ಸೂಚಿಸಿದರು.

ಹಿರಿಯ ಸಿವಿಲ್ ನ್ಯಾಯಾಧೀಶ ಪರಶುರಾಮ ದೊಡ್ಡಮನಿ ಮಾತನಾಡಿ, ಜಿಲ್ಲೆಯಲ್ಲಿ ಹೆಚ್ಚು ಪೋಕ್ಸೋ ಪ್ರಕರಣಗಳು ದಾಖಲಾಗುತ್ತಿವೆ. ಈ ಕುರಿತು ದೂರು ನೀಡಲು ಪಾಲಕರು ಹಲವಾರು ಕಾರಣಗಳಿಂದ ನಿರಾಕರಿಸುತ್ತಾರೆ. ಅಂತಹ ಪ್ರಕರಣಗಳು ಸುಮಾರು ಇದ್ದು ಎಲ್ಲಿ ತಪ್ಪುಗಳನ್ನು ಮಾಡುತ್ತಿದ್ದೇವೆ ಎಂಬುದನ್ನು ತಿಳಿಯಬೇಕಿದೆ. ಮಕ್ಕಳು ತುಂಬಾ ಆತಂಕದಲ್ಲಿ ಇರುತ್ತಾರೆ. ಅಂತಹ ವಿಚಾರದಲ್ಲಿ ಶಿಕ್ಷಕರ ಪಾತ್ರ ದೊಡ್ಡದು. ಶಾಲೆಯಲ್ಲಿ ಕಡ್ಡಾಯವಾಗಿ ಪೋಕ್ಸೋ ಮತ್ತು ಬಾಲ್ಯವಿವಾಹಗಳ ಕುರಿತು ಹೆಚ್ಚು ಅರಿವು ನೀಡಬೇಕು ಎಂದು ಹೇಳಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಡಾ. ಎಚ್.ಎಚ್. ಕುಕನೂರ, ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ರಾಜೇಶ್ವರಿ ಸಾಲಗಟ್ಟಿ, ಡಿಡಿಪಿಐ ಎಸ್.ಎಸ್. ಕೆಳದಿಮಠ, ಬಿಇಒ ಉಮೇಶ ಬೋಮ್ಮಕ್ಕಣ್ಣವರ, ಆರ್‌ಟಿಇ ಕಾಯ್ದೆ ಕುರಿತು ಹಾಗೂ ಶಾಲೆಯಿಂದ ಹೊರಗುಳಿದ ಮಕ್ಕಳ ಪುನರ್ವಸತಿ ಕುರಿತು ತರಬೇತಿ ನೀಡಿದರು. ನಂತರ ಪ್ರಕಾಶ ಕೊಡ್ಲಿವಾಡ ಬಾಲನ್ಯಾಯ ಕಾಯ್ದೆ ಕುರಿತು, ನೂರಜಹಾನ ಕಿಲ್ಲೆದಾರ ಬಾಲ್ಯ ವಿವಾಹ ನಿಷೇಧ ಕಾಯ್ದೆ, ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ ಕಾಯ್ದೆ ಕುರಿತು ಉಪನ್ಯಾಸ ನೀಡಿದರು.

ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ನೀತಾ ವಾಡಕರ ಪ್ರಾಸ್ತಾವಿಕ ಮಾತನಾಡಿದರು. ಮಹ್ಮದಅಲಿ ತಹಶೀಲ್ದಾರ ನಿರೂಪಿಸಿದರು.