ಸಾರಾಂಶ
ಕನ್ನಡಪ್ರಭ ವಾರ್ತೆ ಹಾಸನ
ಮಾನವ ಹಕ್ಕುಗಳ ವೇದಿಕೆ ಕಾರ್ಯಕರ್ತರು ಎಂದು ಹೇಳಿಕೊಂಡು ಮೋಸ ಮಾಡಿ ಕೋಟ್ಯಂತರ ರುಪಾಯಿಗಳನ್ನು ನಮ್ಮಿಂದ ಪಡೆದು ವಂಚಿಸಿದ್ದಾರೆ. ಪೊಲೀಸ್ ಠಾಣೆಗೆ ದೂರು ನೀಡಲು ಹೋದರೇ ನಮ್ಮ ದೂರನ್ನು ಸ್ವೀಕರಿಸದೇ ಮೋಸ ಮಾಡಿದ ವ್ಯಕ್ತಿಗಳಿಂದ ದೂರು ಪಡೆದುಕೊಂಡು ನಮ್ಮ ಮೇಲೆ ಸುಳ್ಳು ಕೇಸು ದಾಖಲಿಸಲಾಗಿದೆ. ಕೂಡಲೇ ನಮಗೆ ಮೋಸ ಮಾಡಿರುವ ವ್ಯಕ್ತಿಗಳು ಮತ್ತು ಅವರೊಂದಿಗೆ ಶಾಮೀಲಾಗಿರುವ ಪೊಲೀಸ್ ಇಲಾಖೆಯ ಅಧಿಕಾರಿಗಳ ವಿರುದ್ಧ ಕ್ರಮಕೈಗೊಂಡು ನಮಗೆ ನ್ಯಾಯ ಕೊಡಿಸುವಂತೆ ರೈತರು ಎಸ್ಪಿ ಮಹಮ್ಮದ್ ಸುಜೀತಾ ಅವರಿಗೆ ಮನವಿ ಸಲ್ಲಿಸಿದರು. ಹಾಸನ ನಗರದ ಸಮೀಪ ವಿಜಯನಗರದ ವಾಸಿಯಾದ ಅನುಷಾ ಕೃಪಾ ಮತ್ತು ಇವರ ಸ್ನೇಹಿತರಾದ ಭುವನೇಶ್ವರಿ ಅಶ್ವಿನಿ, ದೇವರಾಜ್, ಗಫಾರ್, ಶಶಿ, ಅಭಿಷೇಕ್ ಹಾಗೂ ಮಾನವ ಹಕ್ಕುಗಳ ಕಾರ್ಯಕರ್ತನೆಂದು ಹೇಳಿಕೊಳ್ಳುವ ಸಯ್ಯದ್ ಏಜಾಜ್ ಇವರು ನನಗೆ ಮತ್ತು ಇತರರಿಗೆ ಮೋಸ ಮಾಡಿ ನಮ್ಮಿಂದ ಕೋಟ್ಯಂತರ ರುಪಾಯಿ ಹಣವನ್ನು ಪಡೆದು ವಂಚಿಸಿದ್ದು, ನಮಗೆ ವಂಚಿಸಿರುವವರ ಮೇಲೆ ನಾವುಗಳು ಹಾಸನ ಪೆನ್ನನ್ ಮೊಹಲ್ಲಾ ಪೊಲೀಸ್ ಠಾಣೆಯ ಸರ್ಕಲ್ ಇನ್ಸ್‌ಪೆಕ್ಟರ್‌ರವರಿಗೆ ದೂರು ನೀಡಲು ಹೋದಾಗ ಇನ್ಸ್‌ಪೆಕ್ಟರ್‌ರವರು ನಮ್ಮ ದೂರನ್ನು ಸ್ವೀಕರಿಸಿಲ್ಲ ಎಂದರು.ವಿಜಯನಗರದ ವಾಸಿಯಾದ ಅನುಷಾ ಎಂಬುವವರು ಸಕಲೇಶಪುರ ತಾಲೂಕು, ದೊಡ್ಡನಹಳ್ಳಿ ಚೌಡೇಶ್ವರಿ ದೇವಸ್ಥಾನಕ್ಕೆ ಪ್ರತಿ ತಿಂಗಳು ಪೂಜೆಗೆ ಬಂದು ಹಂದಿಯನ್ನು ಒಪ್ಪಿಸಿಕೊಂಡು ಹೋಗುತ್ತಿದ್ದರು. ಅಲ್ಲಿ ಹಂದಿ ವ್ಯಾಪಾರ ಮಾಡುತ್ತಿದ್ದ ನಮಗೆ, ಪರಿಚಯಸ್ಥರಾದ ಹಿರಿಯೂರು ಕೂಡಿಗೆಯ ಸತೀಶ್‌ರವರ ಮೂಲಕ ನನಗೆ ಪರಿಚಯವಾಗಿರುತ್ತದೆ. ಅನುಷಾರೊಂದಿಗೆ ಭುವನೇಶ್ವರಿ ಎಂಬುವವರು ಹಾಗೂ ಅವರೊಂದಿಗೆ ಈ ವ್ಯಕ್ತಿಗಳು ಬರುತ್ತಿದ್ದರು. ಪ್ರತಿ ತಿಂಗಳು ಬಂದು ದೇವರಲ್ಲಿ ಅನುಷಾಳಿಗೆ ನೂರು ಕೋಟಿ ಆಸ್ತಿ ಇದ್ದು, ಆಸ್ತಿಯ ಮೇಲೆ ನ್ಯಾಯಾಲಯದಲ್ಲಿ ಕೇಸು ದಾಖಲಾಗಿರುತ್ತದೆ ಮತ್ತು ಆದಾಯ ತೆರಿಗೆಯವರು ಅನುಷಾ ಕೃಪಾರವರ ಖಾತೆಯಲ್ಲಿದ್ದ ೩ ಕೋಟಿ ಎಂಬತ್ತು ಲಕ್ಷ ಹಣವನ್ನು ಸೀಜ್ ಮಾಡಿರುವುದರಿಂದ ಈ ಕೇಸು ಬೇಗ ಇತ್ಯರ್ಥವಾದರೆ ದೇವರಿಗೆ ೧ ಕೋಟಿ ಹಣ ಮತ್ತು ಹಂದಿಯನ್ನು ಅರ್ಪಿಸುತ್ತೇನೆಂದು ಪ್ರತಿ ತಿಂಗಳು ಬಂದು ಕೇಳಿಕೊಳ್ಳುತ್ತಿದ್ದರು. ಅನುಷಾ ಮತ್ತು ಅವರ ಕಡೆಯವರು ಸತೀಶ್ ಕಡೆಯಿಂದ ಪರಿಚಯವಾದ ಮೇಲೆ ನಮ್ಮ ಮನೆಗೆ ಬಂದು ಹೋಗುತ್ತಿದ್ದರು. ಪ್ರತಿ ತಿಂಗಳು ನನ್ನನ್ನು ಮತ್ತು ನಮ್ಮ ಸುತ್ತಮುತ್ತಲ ಗ್ರಾಮದ ಸುಮಾರು ೧೦ ಜನರನ್ನು ದೇವಸ್ಥಾನದ ಹತ್ತಿರ ಬರುವಂತೆ ಹೇಳುತ್ತಿದ್ದರು ಎಂದರು.
ಅನುಷಕ್ಕನ ಖಾತೆಯಲ್ಲಿ ಕೋಟಿಗಟ್ಟಲೆ ಹಣ ಇದೆ, ಅದನ್ನು ನ್ಯಾಯಾಲಯದಿಂದ ಸೀಜ್ ಮಾಡಿದ್ದಾರೆಂದು ಒಂದು ಪಾಸ್‌ಪುಸ್ತಕವನ್ನು ತೋರಿಸಿ ೩ ಕೋಟಿ ಎಂಬತ್ತು ಲಕ್ಷ ರುಪಾಯಿಗಳು ನಮೂದಾಗಿರುವುದನ್ನು ಅಲ್ಲಿದ್ದ ನಮ್ಮೆಲ್ಲರಿಗೂ ತೋರಿಸಿ ನೀವು ಅಕ್ಕನನ್ನು ನಂಬಿ ಅವರಿಗೆ ಸಹಾಯ ಮಾಡಿ ನಿಮ್ಮ ಜೀವನ ಪೂರ್ತಿ ನೀವು ಸುಖವಾಗಿರಬಹುದು. ಅವರು ನಿಮ್ಮ ಕೈಬಿಡುವುದಿಲ್ಲ ಎಂದು ಭರವಸೆ ನೀಡಿದ್ದರು. ಅನುಷಾರವರು ಹೇಳಿದ ಅವರ ಸ್ನೇಹಿತರುಗಳಾದ ಭುವನೇಶ್ವರಿ ಅಶ್ವಿನಿ, ದೇವರಾಜ್, ಗಫಾರ್, ಶಶಿ, ಅಭಿಷೇಕ್ ಇವರುಗಳ ಬ್ಯಾಂಕ್ ಖಾತೆಗೆ ಅನುಷಾರವರು ಕೇಳಿದಷ್ಟು ಹಣವನ್ನು ವರ್ಗಾವಣೆ ಮಾಡಿರುತ್ತೇವೆ. ಈಗ ಒಟ್ಟು ಸುಮಾರು ೩ ಕೋಟಿ ಎಂಬತ್ತು ಲಕ್ಷ ರು.ಗಳಿಗೂ ಅಧಿಕ ಹಣವನ್ನು ವರ್ಗಾಯಿಸಿದ್ದೇವೆ ಎಂದರು.ಇತ್ತೀಚೆಗೆ ಅನುಷಾರವರ ವರ್ತನೆಯ ಮೇಲೆ ಅನುಮಾನ ಬಂದು ಅನುಷಾರವರು ಹೇಳಿದ ನ್ಯಾಯಾಲಯದ ಪ್ರಕರಣದ ಕುರಿತು ವಿಚಾರಿಸಲಾಗಿ ಅಂತಹ ಯಾವುದೇ ವ್ಯಾಜ್ಯವು ನ್ಯಾಯಾಲಯದಲ್ಲಿ ಇರುವುದಿಲ್ಲ. ಅನುಷಾ ಸುಳ್ಳು ಹೇಳಿ ಹಣ ಪಡೆದಿರುವುದು ಬೆಳಕಿಗೆ ಬಂದಿರುತ್ತದೆ. ನಾವು ಕೂಡಲೇ ಅನುಷಾ ಮತ್ತು ಅವರ ಸ್ನೇಹಿತರುಗಳನ್ನು ವಿಚಾರಿಸಲಾಗಿ ಅವರು ವಾಪಾಸ್ಸು ಹಣ ನೀಡುವುದಾಗಿ ತಿಳಿಸಿರುತ್ತಾರೆ.
ಅದರಂತೆ ನನ್ನನ್ನು ಮತ್ತು ಇತರೆ ೫-೬ ಜನಗಳು ಮಾತ್ರ ಹಾಸನಕ್ಕೆ ಬನ್ನಿ ಬೇರೆ ಯಾರಿಗೂ ಹೇಳಬೇಡಿ ನಿಮಗೆ ಕೊಡಬೇಕಾದ ಹಣವನ್ನು ನಾನು ಕೊಡುತ್ತೇನೆ ಎಂದು ತಿಳಿಸಿರುತ್ತಾರೆ. ಕದಂಬ ಹೊಟೇಲ್ ಹತ್ತಿರವಿರುವ ಮಾನವ ಹಕ್ಕುಗಳ ಆಯೋಗದ ಕಚೇರಿಗೆ ಬರುವಂತೆ ತಿಳಿಸಿರುತ್ತಾರೆ. ನಾವು ಅಲ್ಲಿಗೆ ಹೋದಾಗ ಅಲ್ಲಿ ಅನುಷಾ, ಭುವನೇಶರಿ ಮತ್ತು ಸಯ್ಯದ್ ಏಜಾಜ್ ಇದ್ದರು. ಅವರು ನಮ್ಮೆಲ್ಲರಿಗೂ ಅಲ್ಲಿಗೆ ಇಲ್ಲಿ ಮೊಬೈಲ್‌ನಲ್ಲಿ ರೆಕಾರ್ಡ್ ಮಾಡಿಕೊಳ್ಳಬಾರದು. ಮೊಬೈಲ್ ತೆಗೆದು ಹೊರಗೆ ಇಡಿ. ನಮ್ಮ ಕಚೇರಿಯಲ್ಲಿ ಸಿಸಿ ಕ್ಯಾಮೆರಾ ಇದೆ. ನಿಮಗೆ ರೆಕಾರ್ಡ್ ಬೇಕಾದರೆ ನಾವು ಕೊಡುತ್ತೇವೆಂದು ನಮಗೆ ಹೇಳಿದರು ಎಂದು ವಿವರಿಸಿದರು.ಸಿಸಿ ಕ್ಯಾಮರಾ ನಾಟಕವನ್ನಾಡಿ ಕಚೇರಿಗೆ ಕರೆಸಿರುವುದು ನಮಗೆ ತಿಳಿದಿರುವುದಿಲ್ಲ. ರೈತರಿಗೆ ಹಣವನ್ನು ಕೊಡುವುದಕ್ಕೆ ಎಲ್ಲಿಂದ ಬರುತ್ತದೆ ಎಂದು ಕೇಳಿದಾಗ ನಾವುಗಳು ಕಾಫಿ, ಮೆಣಸು ಮರಗಳನ್ನು ಮಾರಾಟ ಮಾಡಿ ಸುಮಾರು ೪೦ ಲಕ್ಷಕ್ಕೆ ಚಿನ್ನಾಭರಣ ಇಟ್ಟಿದ್ದೇವೆ ಎಂದಾಗ, ಹಾಸನದ ಎಷ್ಟೋ ಜನಗಳ ಹತ್ತಿರ ವ್ಯವಹಾರ ಮಾಡಿದ್ದೇನೆ ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿ ನಮಗೆ ಬೆದರಿಕೆ ಹಾಕಿರುವುದಾಗಿ ದೂರಿದರು.
ನಮಗೆ ಮೋಸ ಮಾಡಿ ನಮ್ಮ ಮೇಲೆಯೇ ಸುಳ್ಳು ಕೇಸು ದಾಖಲಿಸಿರುವ ಅನುಷಾ ಮತ್ತು ಅವರ ಗುಂಪಿನ ಮೇಲೆ ಮತ್ತು ನಿಜಾಂಶ ಗೊತ್ತಿದ್ದರೂ ಸಹ ಅಧಿಕಾರವನ್ನು ದುರುಪಯೋಗ ಪಡಿಸಿಕೊಂಡು ನಮ್ಮ ಮೇಲೆ ಕೊಲೆ ಯತ್ನ ಕೇಸು ಹಾಕಿರುವ ಪೋಲಿಸ್ ಇನ್ಸ್‌ಪೆಕ್ಟರ್ ವಿರುದ್ಧ ಸಿ.ಒ.ಡಿ ಅಥವಾ ಸಿ.ಬಿ.ಐ ತನಿಖೆ ನಡೆಸಿ ನಮಗೆ ನ್ಯಾಯ ಒದಗಿಸಿಕೊಡಬೇಕು ನಮಗೆ ಹಣವನ್ನು ವಾಪಾಸ್ಸು ಕೊಡಿಸಬೇಕಾಗಿ ಎಸ್ಪಿ ಕಚೇರಿ ಮುಂದೆ ಕೋರಿಕೊಂಡರು.