ಬೆಳಗಾವಿ: ಶಿವಂ ಅಸೋಸಿಯೇಟ್ ಕಂಪನಿಗೆ ಸಂಬಂಧಿಸಿದ ವಂಚನೆ ಪ್ರಕರಣದಲ್ಲಿ ಬಂಧಿತರಾಗಿದ್ದ ಶಿವಾನಂದ ನೀಲಣ್ಣವರ ಸೋಮವಾರ ರಾತ್ರಿ ಹಿಂಡಲಗಾ ಜೈಲಿನಿಂದ ಬಿಡುಗಡೆಯಾದರು.
ಮೇ.15ರಂದು ಮಾಳಮಾರುತಿ ಪೊಲೀಸರು ಅವರನ್ನು ಬಂಧಿಸಿದ್ದರು. ನಂತರ ಪ್ರಕರಣವನ್ನು ಸಿಐಡಿಗೆ ವರ್ಗಾವಣೆ ಮಾಡಲಾಗಿತ್ತು. ಜೂನ್ 12ರಂದು ಬೆಂಗಳೂರಿನ 92ನೇ ಸಿಟಿ ಸಿವಿಲ್ ಮತ್ತು ಸೆಷನ್ಸ್ ಕೋರ್ಟ್ ಮಧ್ಯಂತರ ಜಾಮೀನು ಮಂಜೂರು ಮಾಡಿತ್ತು. ಜೈಲಿನಿಂದ ಹೊರಬಂದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಶಿವಾನಂದ ನೀಲಣ್ಣವರ್, ಓಂ ನಮಃ ಶಿವಾಯ, ಎಲ್ಲರಿಗೂ ಒಳ್ಳೆಯದಾಗಬೇಕು ಎಂದು ಬಯಸುವ ವ್ಯಕ್ತಿ ನಾನು. ಬೇರೆ ಏನು ಹೇಳುವುದಿಲ್ಲ ಎಂದಷ್ಟೆ ಹೇಳಿದರು.ನ್ಯಾಯಾಲಯವು ಜಾಮೀನಿಗೆ ಹಲವು ಷರತ್ತುಗಳನ್ನು ವಿಧಿಸಿದೆ. ₹3 ಲಕ್ಷದ ಬಾಂಡ್, ಓರ್ವ ಜಾಮೀನುದಾರ, ತನಿಖಾಧಿಕಾರಿಗೆ ಸಹಕಾರ, ದೇಶ ತೊರೆಯದಿರಲು ಸೂಚನೆ ಹಾಗೂ ಜೂನ್ 27ರಂದು ನ್ಯಾಯಾಲಯಕ್ಕೆ ಹಾಜರಾಗುವಂತೆ ನಿರ್ದೇಶನ ನೀಡಲಾಗಿದೆ.