ಮಲೇಷಿಯಾದ ರೆಸ್ಟೋರೆಂಟ್‌ನಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ₹2.25 ಲಕ್ಷ ಪಡೆದು, ನಕಲಿ ದಾಖಲೆಗಳನ್ನು ನೀಡಿ ವಂಚಿಸಿರುವುದಾಗಿ ಆರೋಪಿಸಿ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾರ್ಕಳ: ಮಲೇಷಿಯಾದ ರೆಸ್ಟೋರೆಂಟ್‌ನಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ₹2.25 ಲಕ್ಷ ಪಡೆದು, ನಕಲಿ ದಾಖಲೆಗಳನ್ನು ನೀಡಿ ವಂಚಿಸಿರುವುದಾಗಿ ಆರೋಪಿಸಿ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಮಿಯ್ಯಾರು ಗ್ರಾಮದ ಪ್ರಕಾಶ ಆಚಾರ್ಯ (34) ಅವರು ನೀಡಿದ ದೂರಿನಂತೆ, ಬಜಗೋಳಿಯ ಕೃಷ್ಣ ಕುಲಾಲ್ ಹಾಗೂ ಬೆಂಗಳೂರಿನ ಮೋಹಿತ್ ಎಂಬವರು ಅವರನ್ನು ಸಂಪರ್ಕಿಸಿ ಮಲೇಷಿಯಾದ ರೆಸ್ಟೋರೆಂಟ್‌ನಲ್ಲಿ ಉದ್ಯೋಗ ಕೊಡಿಸುವುದಾಗಿ ಭರವಸೆ ನೀಡಿದ್ದರು. ಈ ಸಂಬಂಧ ಉದ್ಯೋಗದ ಜಾಹೀರಾತಿನ ಫೋಟೊವನ್ನು ಮೊಬೈಲ್‌ಗೆ ಕಳುಹಿಸಿ, ದಾಖಲೆಗಳ ಸಿದ್ಧತೆ, ಮಲೇಷಿಯಾ ಪ್ರಯಾಣ ಹಾಗೂ ವೀಸಾ ವೆಚ್ಚಕ್ಕಾಗಿ ಹಣ ನೀಡುವಂತೆ ಕೇಳಿಕೊಂಡಿದ್ದರು ಎನ್ನಲಾಗಿದೆ.ಆರೋಪಿಗಳ ಮಾತನ್ನು ನಂಬಿದ ಪ್ರಕಾಶ್ ಅವರು ಗೂಗಲ್ ಪೇ ಮೂಲಕ ಹಂತ ಹಂತವಾಗಿ ಕೃಷ್ಣ ಕುಲಾಲ್ ಅವರ ಖಾತೆಗೆ ₹1.40 ಲಕ್ಷ ಹಾಗೂ ಮೋಹಿತ್ ಅವರ ಖಾತೆಗೆ ₹85 ಸಾವಿರ, ಒಟ್ಟು ₹2.25 ಲಕ್ಷ ವರ್ಗಾವಣೆ ಮಾಡಿದ್ದರು ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಬಳಿಕ ಆರೋಪಿಗಳು ವಿಮಾನ ಟಿಕೆಟ್, ಇಮಿಗ್ರೇಶನ್ ಪಾಸ್ ಹಾಗೂ ಎಂಪ್ಲಾಯ್‌ಮೆಂಟ್ ಪಾಸ್ ನೀಡಿದ್ದು, ಅವುಗಳನ್ನು ನಂಬಿ ಮಲೇಷಿಯಾಗೆ ತೆರಳಿದಾಗ ವಿಮಾನ ನಿಲ್ದಾಣದ ಅಧಿಕಾರಿಗಳು ಪರಿಶೀಲನೆ ನಡೆಸಿ ದಾಖಲೆಗಳು ನಕಲಿ ಎಂದು ತಿಳಿಸಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ. ಅಲ್ಲದೆ, ಮಲೇಷಿಯಾದಲ್ಲಿದ್ದ ವೇಳೆ ಮನ್ವಿರ್ ಸಿಂಗ್ ಎಂಬ ಏಜೆಂಟ್‌ ₹35 ಸಾವಿರ ಪಡೆದುಕೊಂಡಿದ್ದಾನೆ ಎಂದು ಆರೋಪಿಸಲಾಗಿದೆ.

ಆರೋಪಿಗಳು ಸುಳ್ಳು ದಾಖಲೆಗಳನ್ನು ನೀಡಿ ನಂಬಿಸಿ ವಂಚಿಸಿದ್ದಾರೆ ಎಂಬ ದೂರಿನ ಮೇರೆಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ