ಸಬ್ಸಿಡಿ ದರದಲ್ಲಿ ಸಾಲ ಕೊಡಿಸುವುದಾಗಿ ನಂಬಿಸಿ ಹಣ ಪಡೆದು ವಂಚಿಸಿರುವವರ ವಿರುದ್ಧ ಸಂತ್ರಸ್ತರು ಆಕ್ರೋಶ ವ್ಯಕ್ತಪಡಿಸಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು.

ಸಾಲ ಕೊಡಿಸುವುದಾಗಿ ನಂಬಿಸಿ ಹಣ ವಸೂಲಿ ಮಾಡಿದವರ ವಿರುದ್ಧ ಕ್ರಮಕ್ಕೆ ಆಗ್ರಹಕನ್ನಡಪ್ರಭ ವಾರ್ತೆ ಶಿರಹಟ್ಟಿ

ಸಬ್ಸಿಡಿ ದರದಲ್ಲಿ ಸಾಲ ಕೊಡಿಸುವುದಾಗಿ ನಂಬಿಸಿ ಹಣ ಪಡೆದು ವಂಚಿಸಿರುವವರ ವಿರುದ್ಧ ಸಂತ್ರಸ್ತರು ಆಕ್ರೋಶ ವ್ಯಕ್ತಪಡಿಸಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು.

ಪಟ್ಟಣದ ಜನತಾ ಬಜಾರ ಎದುರಿಗೆ ಶ್ರೀ ಲಕ್ಷ್ಮೀ ಎಂಟರ್‌ಪ್ರೈಸೆಸ್ ಹೆಸರಿನಲ್ಲಿ ಕಾರ್ಯಾಲಯ ತೆರೆದಿದ್ದು, ಕಳೆದ ಒಂದು ತಿಂಗಳಿನಿಂದ ತಾಲೂಕಿನಾದ್ಯಂತ ಸಂಚರಿಸಿ ಒಂದು ತಿಂಗಳ ಒಳಗೆ ಸಾಲ ಕೊಡಿಸುವುದಾಗಿ ಹೇಳಿದ್ದಾರೆ.

ಸರ್ಕಾರದ ವಿವಿಧ ಯೋಜನೆಗಳಡಿ ಸಬ್ಸಿಡಿ ಸಹಿತ ಸಾಲ ಸೌಲಭ್ಯ ದೊರೆಯಲಿದೆ ಎಂಬ ಭರವಸೆಯನ್ನು ನಂಬಿದ ಅನೇಕ ಸಾಮಾನ್ಯ ಜನರು, ಸಣ್ಣ ವ್ಯಾಪಾರಿಗಳು ಹಾಗೂ ಆರ್ಥಿಕವಾಗಿ ಹಿಂದುಳಿದವರು ಸಾಲದ ನಿರೀಕ್ಷೆಯಲ್ಲಿ ಹಣ ನೀಡಿದ್ದಾರೆ. ಆದರೆ, ಭರವಸೆ ನೀಡಿದಂತೆ ಸಾಲ ಕೊಡಿಸದೆ, ಪಡೆದ ಹಣವನ್ನೂ ಹಿಂದಿರುಗಿಸದೆ ಪರಾರಿಯಾಗಿದ್ದು, ಸಂತ್ರಸ್ತರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಕಡಿಮೆ ಬಡ್ಡಿದರದಲ್ಲಿ ಹಾಗೂ ಸಬ್ಸಿಡಿ ಸೌಲಭ್ಯದೊಂದಿಗೆ ಸಾಲ ಪಡೆದು ಸ್ವಂತ ಉದ್ಯೋಗ ಆರಂಭಿಸಬೇಕು, ಕುಟುಂಬದ ಆರ್ಥಿಕ ಸ್ಥಿತಿ ಸುಧಾರಿಸಿಕೊಳ್ಳಬೇಕು ಎಂಬ ಉದ್ದೇಶದಿಂದ ಹಣ ನೀಡಿದ್ದ ಜನರು ಇದೀಗ ಅತಂತ್ರರಾಗಿದ್ದಾರೆ. ಕೆಲವರು ಸಾಲ ಮಾಡಿ ಹಣ ನೀಡಿದ್ದರೆ, ಇನ್ನೂ ಕೆಲವರು ತಮ್ಮ ಕಷ್ಟದ ದುಡಿಮೆಯ ಹಣವನ್ನು ಕಳೆದುಕೊಂಡು ಕಂಗಾಲಾಗಿದ್ದಾರೆ.

ಸಾಲ ಕೊಡಿಸುವುದಾಗಿ ನಂಬಿಸಿ ಹಣ ಪಡೆದವರು ಸಂತ್ರಸ್ತರಿಗೆ ಸಮರ್ಪಕ ಉತ್ತರ ನೀಡದೆ ಪೋನ್ ಸ್ವಿಚ್ ಆಫ್ ಮಾಡಿಕೊಂಡು ಹೋಗಿದ್ದಾರೆ. ಇದರಿಂದ ಹಣ ಕಳೆದುಕೊಂಡವರು ತೀವ್ರ ಮಾನಸಿಕ ಒತ್ತಡ ಹಾಗೂ ಆರ್ಥಿಕ ಸಂಕಷ್ಟ ಅನುಭವಿಸುವಂತಾಗಿದೆ. ದೂರು ಸ್ವೀಕರಿಸಲು ಪೊಲೀಸರು ಹಿಂದೇಟು ಹಾಕುತ್ತಿದ್ದಾರೆ ಎಂದು ಸಂತ್ರಸ್ತ ಮಹಿಳೆಯರು ಆರೋಪಿಸಿದ್ದಾರೆ.

ನ್ಯಾಯ ಒದಗಿಸಲು ಆಗ್ರಹ:

ಸಂಬಂಧಪಟ್ಟ ಅಧಿಕಾರಿಗಳು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಹಣ ಕಳೆದುಕೊಂಡ ಸಂತ್ರಸ್ತರಿಂದ ದೂರುಗಳನ್ನು ಸ್ವೀಕರಿಸಬೇಕು. ಹಣ ಪಡೆದಿರುವ ಕುರಿತು ದಾಖಲೆಗಳನ್ನು ಪರಿಶೀಲಿಸಿ, ಆರೋಪಗಳ ಕುರಿತು ನಿಷ್ಪಕ್ಷಪಾತ ತನಿಖೆ ನಡೆಸಬೇಕು. ತಪ್ಪಿತಸ್ಥರೆಂದು ಸಾಬೀತಾದವರ ವಿರುದ್ಧ ಕಾನೂನು ಕ್ರಮ ಕೈಗೊಂಡು, ಸಂತ್ರಸ್ತರಿಗೆ ಹಣ ಮರಳಿ ದೊರಕಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.

ಸದ್ಯ ಸಾಲ ಕೊಡಿಸುವುದಾಗಿ ನೂರಾರು ಜನರಿಗೆ ಪಂಗನಾಮ ಹಾಕಿರುವ ವ್ಯಕ್ತಿ ಸ್ಥಳೀಯ ಪಟ್ಟಣ ಪಂಚಾಯತಿಯಿಂದ ಪರವಾನಗಿ ಪಡೆದು ಕಾರ್ಯಾಲಯ ತೆರೆಯದೇ ಅಮಾಯಕರಿಗೆ ಮೋಸ ಮಾಡಿದ್ದು, ಎಲ್ಲೆಡೆ ಚರ್ಚೆಯಾಗುತ್ತಿದೆ. ಮುಂದೆ ಈ ಘಟನೆ ಯಾವ ತಿರುವು ಪಡೆದುಕೊಳ್ಳುತ್ತದೆ ಎಂಬುದು ತಿಳಿಯದಾಗಿದೆ.ಘಟನೆ ಕುರಿತಂತೆ ತಕ್ಷಣ ಸ್ಥಳಕ್ಕೆ ಹೋಗಿ ವಿಚಾರಿಸಿ, ವಿಷಯ ಏನೆಂದು ತಿಳಿದುಕೊಂಡು ಪ್ರಕರಣ ದಾಖಲಿಸಿಕೊಳ್ಳುವಂತಿದ್ದರೆ ಕೇಸ್ ಮಾಡಿಕೊಳ್ಳಲು ತಿಳಿಸುತ್ತೇನೆ.

ಮಿಥುನ್ ಎನ್.ಎಚ್. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ