ಸಾರಾಂಶ
ಕನ್ನಡಪ್ರಭ ವಾರ್ತೆ ಕಲಬುರಗಿ
ಜೇವರ್ಗಿ ಶಾಸಕ, ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ಡಾ. ಅಜಯಸಿಂಗ್ ಮಾಜಿ ಆಪ್ತ ಸಹಾಯಕನನ್ನು ಸಾರ್ವಜನಿಕರಿಗೆ, ಅದರಲ್ಲಿಯೂ ಕಾಂಗ್ರೆಸ್ ಕಾರ್ಯಕರ್ತರಿಗೆ ಸರ್ಕಾರಿ ನೌಕರಿ ಹಾಗೂ ಕಾಮಗಾರಿ ಕೊಡಿಸುವ ನೆಪದಲ್ಲಿ ಕೋಟ್ಯಂತರ ರುಪಾಯಿ ವಂಚನೆ ಮಾಡಿದ ಆರೋಪದ ಪೋಲಿಸರು ಬಂಧಿಸಿದ್ದಾರೆ.ಪರಶುರಾಮ್ 2020ರಿಂದ 2024ರ ಅವಧಿಯಲ್ಲಿ ವಿವಿಧ ಕಾಮಗಾರಿಗಳನ್ನು ಕೊಡಿಸುವುದಾಗಿ ಹಾಗೂ ಸರ್ಕಾರಿ ನೌಕರಿ ಕೊಡಿಸುವುದಾಗಿ ಕಲಬುರ್ಗಿ, ಜೇವರ್ಗಿ, ಯಡ್ರಾಮಿ, ಸುರಪುರ, ಬೀದರ್ ಸೇರಿ ವಿವಿಧ ಗ್ರಾಮಗಳಲ್ಲಿನ ಸುಮಾರು 39 ಜನರಿಂದ ಹಣ ತೆಗೆದುಕೊಂಡು ತಲೆ ಮರೆಸಿಕೊಂಡಿದ್ದ. ಕೆಲವರಿಗೆ ಈತ ಚೆಕ್ಕು ಕೊಟ್ಟಿದ್ದು ಎರಡ್ಮೂರು ಚೆಕ್‍ಗಳು ಬೌನ್ಸ್ ಆಗಿದ್ದವು. ಈ ಹಿನ್ನೆಲೆಯಲ್ಲಿ ನೊಂದವರು ದೂರು ಸಲ್ಲಿಸಿದ್ದು, ಪೋಲಿಸರು ಆತನನ್ನು ಬೆಂಗಳೂರಿನಿಂದ ಕರೆತಂದು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.
ಪರಶುರಾಮ್ 39 ಜನರಿಗೆ 1.50 ಕೋಟಿ ರು. ವಂಚನೆ ಮಾಡಿರೋದು ಗೊತ್ತಾಗಿದೆ. ಪ್ರಭಾವಿ ವ್ಯಕ್ತಿಗಳೂ ಸಹ ವಂಚನೆಗೆ ಒಳಗಾಗಿದ್ದಾರೆ. ಎಎಸ್‍ಐ ಸೇರಿ ಕೇಂದ್ರ ಸಚಿವರೊಬ್ಬರ ಸಂಬಂಧಿ ಸಹ ಹಣ ಕಳೆದುಕೊಂಡಿದ್ದಾರೆಂದು ವಿಚಾರಣೆ ವೇಳೆ ಬಯಲಾಗಿದೆ.ಹಣ ಕೊಟ್ಟವರಂದ ತಪ್ಪಿಸಿಕೊಳ್ಳಲು ತಲೆ ಬೋಳಿಸಿಕೊಂಡು ಕಣ್ಣು ತಪ್ಪಿಸಿಕೊಂಡು ಓಡಾಡಿಕೊಡಿದ್ದ. ಈತನ ಬಂಧನಕ್ಕಾಗಿ ಜೇವರ್ಗಿ ಸಿಪಿಐ ರಾಜೇಸಾಬ್ , ಪಿಎಸ್‌ಐ ಸುರೇಶ ಕುಮಾರ್ ಅವರನ್ನೊಳಗೊಂಡ ಪತ್ತೆದಳ ರಚಿಸಲಾಗಿತ್ತು.
ಆರೋಪಿತನ ಸ್ಥಿರಾಸ್ತಿ, ಚರಾಸ್ತಿ ಬಗ್ಗೆ ವಿಚಾರಣೆ ನಡೆದಿದೆ. ಈತನನ್ನು ನ್ಯಾಯಂಗ ಬಂಧನಕ್ಕೊಪ್ಪಿಸಲಾಗಿದೆ. ಈತನ ಬಂಧನದ ವಿಚಾರ ಗೊತ್ತಾಗಿ ಅನೇಕರು ದೂರು ಸಲ್ಲಿಸಿದ್ದಾರೆಂದು ಎಸ್ಪಿ ಅಕ್ಷಯ್ ಹಾಕೆ ತಿಳಿಸಿದ್ದಾರೆ.ಕೇಂದ್ರ ನವೀಕರಿಸಬಹುದಾದ ಇಂಧನ ಮೂಲಗಳು, ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವರೂ ಆದ ಬೀದರ್ ಸಂಸದ ಭಗವಂತ್ ಖೂಬಾ ಅವರ ಅಳಿಯ ಬಾಪುರಾವ್ ತಂದೆ ಮಾಣಿಕ್ ಅವರೂ ಸಹ ಪರಶುರಾಮ್‍ನಿಗೆ ಹದಿನೈದು ಲಕ್ಷಕ್ಕಿಂತ ಅಧಿಕ ಹಣ ಕೊಟ್ಟಿದ್ದಾರೆ. ವಿವಿಧ ಕಾಮಗಾರಿಗಳ ಹೆಸರಿನಲ್ಲಿ ಹಣ ವಸೂಲಿ ಮಾಡಿದ್ದಾನೆ ಎಂದು ಬಾಪುರಾವ್ ಅವರು ಹಣ ಕೊಟ್ಟ ಚೆಕ್‍ಗಳ ಸಮೇತ ಪೋಲಿಸರಿಗೆ ಮೊದಲ ದೂರು ಸಲ್ಲಿಸಿದ್ದಾರೆ ಎಂದು ಗೊತ್ತಾಗಿದೆ. ಬಾಪುರಾವ್ ಅವರು ಕಲಬುರ್ಗಿಯಲ್ಲಿಯೇ ವಾಸವಾಗಿದ್ದು, ಪರಶುರಾಮ್ ವಂಚನೆ ಬಯಲಿಗೆಳೆದ ಮೊದಲಿಗರು ಎನ್ನಲಾಗಿದೆ.
ತೀವ್ರ ವಿಚಾರಣೆ: ಲಿಖಿತ ದೂರು ಪಡೆದ ಪೋಲಿಸರು ಮಂಗಳವಾರ ಬೆಳಗಿನ ಜಾವ ಆರೋಪಿ ಪರಶುರಾಮ್‍ನನ್ನು ಬೆಂಗಳೂರಿನಿಂದ ಕರೆತಂದು ಡಿಎಸ್‍ಪಿ ಬಿಂದು ಅವರ ನೇತೃತ್ವದಲ್ಲಿ ವಿಚಾರಣೆಗೆ ಒಳಪಡಿಸಿದ್ದಾರೆ. ಪ್ರಾಥಮಿಕ ವಿಚಾರಣೆ ವೇಳೆ ಆರೋಪಿ ಪರಶುರಾಮ್ ಕಲಬುರ್ಗಿ ನಗರದಲ್ಲಿ ಎರಡು ಮನೆ, ಜೇವರ್ಗಿಯಲ್ಲಿ ಎರಡು ಮನೆ ಹೊಂದಿದ್ದು, ಅವುಗಳನ್ನು ಸಂಬಂಧಿಕರ ಹೆಸರಿಗೆ ಮಾಡಿದ್ದಾನೆ ಎನ್ನಲಾಗಿದೆ. ಜೊತೆಗೆ ಪರಶುರಾಮ್ ತಾಲೂಕಿನ ನೆಲೋಗಿ ಮತ್ತು ಜೇರಟಗಿ ಗ್ರಾಮದಲ್ಲಿ ಎಂಎಸ್‍ಐಎಲ್ ಶಾಪ್‍ಗಳನ್ನೂ ಸಹ ಹೊಂದಿರುವುದು ತಿಳಿದುಬಂದಿದೆ.ಪರಶುರಾಮ್ ವಂಚನೆಗೆ ಒಳಗಾದವರು: ಪರಶುರಾಮ್‍ನ ವಂಚನೆಯ ಜಾಲದಲ್ಲಿ ಎಎಸ್‍ಐ ರಮೇಶ್ ನಾರಾಯಣಪುರ ಅವರ 8.50 ಲಕ್ಷ ರು, ಶಿವುಕುಮಾರ್ ಕಾಸರಭೋಸಗಾ- 10 ಲಕ್ಷ ರು, ಲಿಂಗರಾಜ್ ಆಂದೋಲಾ 3.25 ಲಕ್ಷ ರು. ಗೌಡಪ್ಪಗೌಡ ಕಲಶೆಟ್ಟಿ 5 ಲಕ್ಷ ರು., ಮಾನಯ್ಯ ಹಣಮಯ್ಯ ಯಾಳವಾರ್ 10 ಲಕ್ಷ ರು., ರಾಜಾರಾಮಪ್ಪ ನಾಯಕ್ ಸುರಪುರ 25 ಲಕ್ಷ ರು., ಮಲ್ಲಣ್ಣ ಬಸಣ್ಣ ಲಖ್ಖಣ್ಣಿ ಆಂದೋಲಾ 4.50 ಲಕ್ಷ ರು., ನಾಸೀರ್ ಹುಸೇನ್ ಕೊಂಡಾಳ್ ಸುರಪುರ ಅವರು 11 ಲಕ್ಷ ರು., ಇಬ್ರಾಹಿಂ ಶಿರವಾಳರ 35 ಲಕ್ಷ ರು., ಭೀಮಣ್ಣ ಭಜಂತ್ರಿ 1.50 ಲಕ್ಷ ರು., ಯಲ್ಲಾಲಿಂಗ್ ಅವರಾದ್ 4.50 ಲಕ್ಷ ರು., ಕಮರಸಾಬ್ 10 ಲಕ್ಷ ರು., ದೌಲತರಾಯ್ ಸುಭಾಷ್ 3 ಲಕ್ಷ ರು. ವಂಚನೆಗೆ ಒಳಗಾದ ಪ್ರಮುಖರಾಗಿದ್ದಾರೆ. ಇದಲ್ಲದೆ ಇನ್ನೂ ಹಲವಾರು ಜನ ದೂರುಗಳನ್ನು ಸಲ್ಲಿಸಿ ಪರಶುರಾಮನಿಂದ ತಾವು ವಂಚನೆಗೊಳಗಾದ ಬಗ್ಗೆ ಮಾಹಿತಿ ಪೊಲೀಸರಿಗೆ ನೀಡಿದ್ದಾರೆ.
ಪರಶುರಾಮ್ ಅನ್ಯ ಕಾರಣಗಳಿಗಾಗಿಯೂ ಲಕ್ಷಾಂತರ ರು. ವಂಚಿಸಿದ ಆರೋಪ ಎದುರಿಸುತ್ತಿದ್ದಾರೆ. ಕರ್ನಾಟಕ ಲೋಕಸೇವಾ ಆಯೋಗದ ನೇಮಕಾತಿಯ ಸಂಬಂಧ ಕಳೆದ 2019ರಲ್ಲಿಯೇ ಮೂವರಿಂದ ತಲಾ ನಾಲ್ಕು ಲಕ್ಷ ರು. ಹಾಗೂ ಪೋಲಿಸ್ ಪೇದೆ ನೇಮಕಾತಿಗಾಗಿ ಎರಡು ಲಕ್ಷ ರು., ಪೀಠೋಪಕರಣಗಳು ಹಾಗೂ ಪ್ರಥಮ ದರ್ಜೆ ಗುಮಾಸ್ತ ಹುದ್ದೆ ನೇಮಕಾತಿ ಹೆಸರಿನಲ್ಲಿ 19 ಲಕ್ಷ ರು., ಸೊಲ್ಲಾಪುರದವರಿಂದ ಪ್ರಥಮ ದರ್ಜೆ ಗುಮಾಸ್ತರ ಹುದ್ದೆ ನೇಮಕಾತಿಗಾಗಿ 3 ಲಕ್ಷ ರು., ಸುರುಪುರ ವ್ಯಕ್ತಿಯಿಂದ ಗುಮಾಸ್ತ ಹುದ್ದೆಗಾಗಿ 12 ಲಕ್ಷ ರು., ಅದೇ ರೀತಿ ಕಲಬುರ್ಗಿಯ ವ್ಯಕ್ತಿಯಿಂದ ಗುಮಾಸ್ತ ಹುದ್ದೆಗಾಗಿ ಹತ್ತು ಲಕ್ಷ ರು., ಅಫಜಲಪುರ ತಾಲೂಕಿನ ಮಂಗಳೂರು ವ್ಯಕ್ತಿಯಿಂದ ಗುಮಾಸ್ತರ ಹುದ್ದೆಗಾಗಿ, ಪೋಲಿಸ್ ಪೇದೆ ನೇಮಕಾತಿಗಾಗಿ 12 ಲಕ್ಷ ರು., ಸುರಪುರದ ವ್ಯಕ್ತಿಯಿಂದ ಆರು ಲಕ್ಷ ರು. ಸೇರಿದಂತೆ ಹಲವರಿಗೆ ವಂಚಿಸಿದ ಆರೋಪಗಳನ್ನು ಎದುರಿಸುತ್ತಿದ್ದಾರೆ.2ವರ್ಷ ಹಿಂದೆಯೇ ಕೆಲಸದಿಂದ ವಜಾ: ಕಳೆದ 2 ವರ್ಷದ ಹಿಂದೆಯೇ ಪರಶುರಾಮ್ ತಂದೆ ಗೌಡಪ್ಪಗೌಡ ಹಲವರಿಗೆ ಉದ್ಯೋಗ ಹಾಗೂ ಕೆಲಸದ ಆಮಿಷ ಒಡ್ಡಿ ಲಕ್ಷಾಂತರ ರು. ವಂಚಿಸಿದ ಆರೋಪದ ಕುರಿತು ಕ್ಷೇತ್ರದ ಶಾಸಕ ಹಾಗೂ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ಡಾ. ಅಜಯಸಿಂಗ್ ಅವರ ಗಮನಕ್ಕೆ ಬಂದಾಗ ಆತನಿಗೆ ವಿಚಾರಣೆಗೆ ಒಳಪಡಿಸಿ ತಕ್ಷಣವೇ ಆಪ್ತ ಸಹಾಯಕ ಹುದ್ದೆಯಿಂದ ತೆಗೆದುಹಾಕಿದ್ದರು ಎಂದು ತಿಳಿದುಬಂದಿದೆ.