ಸಾರಾಂಶ
ಕ್ರೀಡಾ ಕೋಟಾದಡಿ ಕೆಲಸ ಕೊಡಿಸುವುದಾಗಿ ವಂಚಿಸುತ್ತಿದ್ದ ಮಾಜಿ ಸೈನಿಕನ ಬಂಧನಕನ್ನಡಪ್ರಭ ವಾರ್ತೆ ಹೊಸದುರ್ಗ
ಸೇನೆ ಹಾಗೂ ರೇಲ್ವೆ ಇಲಾಖೆಯಲ್ಲಿ ಗ್ರಾಮೀಣ ಯುವಕರಿಗೆ ಕ್ರೀಡಾ ಕೋಟಾದಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ, ಸುಮಾರು 16 ಲಕ್ಷಕ್ಕೂ ಹೆಚ್ಚು ಹಣ ಪಡೆದು ಮೋಸ ಮಾಡಿರುವ ಪ್ರಕರಣ ತಾಲೂಕಿನ ಶ್ರೀರಾಂಪುರದಲ್ಲಿ ಬೆಳಕಿಗೆ ಬಂದಿದೆ. ಈ ಘಟನೆಗೆ ಸಂಭಂದಿಸಿದಂತೆ ಶಿವರಾಜ್ (45) ಹಾಗೂ ಭೀಮವ್ವ ಎಂಬುವವರ ಮೇಲೆ ಶ್ರೀರಾಂಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇಬ್ಬರನ್ನು ಶ್ರೀರಾಂಪುರ ಪೊಲೀಸರು ಬಂಧಿಸಿದ್ದಾರೆ.ಘಟನೆ ವಿವರ:ಸೇನೆಯಲ್ಲಿ ಕೆಲಸ ಮಾಡುತ್ತಿದ್ದ ಹುಬ್ಬಳ್ಳಿ ಮೂಲದ ಶಿವರಾಜ್ ಎಂಬಾತ ಕ್ರಿಮಿನಲ್ ಪ್ರಕರಣದಲ್ಲಿ ಭಾಗಿಯಾಗಿ ಸೇನೆಯಿಂದ ವಜಾಗೊಂಡಿದ್ದ. ನಂತರ ಶ್ರೀರಾಂಪುರ ಸಮೀಪದ ಗವಿರಂಗಾಪುರ ಬೆಟ್ಟದಲ್ಲಿ ಸ್ಥಗಿತಗೊಂಡಿರುವ ಖಾಸಗಿ ಶಾಲಾ ಕಟ್ಟಡವನ್ನು ಬಾಡಿಗೆ ಪಡೆದು ಅಲ್ಲಿ ಶಿವಾಜಿ ರಾಜ್ ಕ್ರೀಡೆ ಮತ್ತು ಸ್ಪರ್ಧಾತ್ಮಕ ಅಕಾಡೆಮಿ ನಡೆಸುತ್ತಿರುವುದಾಗಿ ಹೇಳಿಕೊಂಡಿದ್ದ., ಇದರಲ್ಲಿ ತರಬೇತಿ ಪಡೆದವರಿಗೆ ಕ್ರೀಡಾ ಕೋಟಾದಲ್ಲಿ ಸೇನೆ ಮತ್ತು ರೇಲ್ವೆ ಇಲಾಖೆಯಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ಅವರಿಂದ 10 ಸಾವಿರದಿಂದ 2 ಲಕ್ಷದವರೆಗೂ ಹಣ ಪೀಕಿದ್ದಾನೆ. ಯುವಕರಿಂದ ಪಡೆದ ಹಣವನ್ನು ಈತನ ಜತೆ ಕೈ ಜೋಡಿಸಿದ್ದ ಭೀಮವ್ವ ಎನ್ನುವವರ ಬ್ಯಾಂಕ್ ಖಾತೆಗೆ ಹಾಕಿಸಿಕೊಂಡು ಇಬ್ಬರೂ ಐಷಾರಾಮಿ ಜೀವನ ನಡೆಸುತ್ತಿದ್ದರು ಎನ್ನಲಾಗಿದೆ. ಈತನ ನಡವಳಿಕೆ ಬಗ್ಗೆ ಅನುಮಾನ ಬಂದ ಕೆಲ ಯುವಕರು ಮೊದಲು ನಮಗೆ ಕೆಲಸದ ಭರವಸೆ ಕೊಡಿಸಿ ನಂತರ ಹಣ ಕೊಡುತ್ತೇವೆ ಎಂದು ಹೇಳಿದ್ದಾರೆ. ಕೆಲ ಯುವಕರನ್ನು ಕರೆದುಕೊಂಡು ಕಳೆದ ತಿಂಗಳು ಬೆಂಗಳೂರಿನ ಸೇನಾ ಕಚೇರಿಗೆ ಕರೆದುಕೊಂಡು ಹೋಗಿದ್ದಾನೆ. ಆಗ ಯುವಕರನ್ನು ಕಚೇರಿಯ ಹೊರಗೆ ನಿಲ್ಲಿಸಿ ನಾನು ಅಧಿಕಾರಿಗಳೊಂದಿಗೆ ಮಾತನಾಡಿಕೊಂಡು ಬರುತ್ತೇನೆ ಎಂದು ಹೇಳಿ ಶಿವರಾಜ್ ಕಛೇರಿ ಒಳಗೆ ಹೋಗಿದ್ದಾನೆ. ಆಗ ಹೊರಗಡೆ ಹೋಗಿದ್ದ ಸೇನಾ ಇಲಾಕೆಯ ಅಧಿಕಾರಿಗಳು ಹೊರಗಡೆ ಯುವಕರ ಗುಂಪು ನಿಂತಿರುವುದನ್ನು ಕಂಡು ಏಕೆ ನಿಂತಿದ್ದೀರೀ ಎಂದು ಪ್ರಶ್ನಿಸಿದಾಗ ಕೆಲಸದ ಬಗ್ಗೆ ಮಾತನಾಡಿದ್ದಾರೆ. ಆಗ ಅವರ ಬಳಿ ಮಾಹಿತಿ ಪಡೆದ ಸೇನಾ ಅಧಿಕಾರಿಗಳು ಶಿವರಾಜ್ ಪೂರ್ವಾಪರ ಜಾಲಾಡಿ ಈತ ಒಬ್ಬ ಫ್ರಾಡ್ ಎಂದು ಹೇಳಿ ಯುವಕರಿಗೆ ತಿಳಿಸಿ ಪೊಲೀಸರಿಗೆ ದೂರು ನೀಡುವಂತೆ ಸೂಚಿಸಿದ್ದಾರೆ .ಈತನ ಬಂಡವಾಳ ತಿಳಿಯುತ್ತಿದ್ದಂತೆ ಅಲ್ಲಿಂದ ವಾಪಾಸ್ಸಾದ ಯುವಕರು ಶ್ರೀರಾಂಪುರ ಪೊಲೀಸರಿಗೆ ದೂರು ನೀಡಿದ್ದಾರೆ. ಯುವಕರ ದೂರಿನ ಮೇರೆಗೆ ಶಿವರಾಜ್ ಹಾಗೂ ಇತರರನ್ನು ಬಂಧಿಸಿರುವ ಶ್ರೀರಾಂಪುರ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಈತನ ಮೋಸದ ಜಾಲಕ್ಕೆ ಸಿಲುಕಿರುವವರು ಯಾರಾದರೂ ಇದ್ದರೆ ದೂರು ನೀಡುವಂತೆ ಹಾಗೂ ಇಂತಹ ಅಕಾಡೆಮಿಗಳ ಬಗ್ಗೆ ಪೂರ್ವಾಪರ ತಿಳಿಯದೆ ಈ ರೀತಿ ಮೋಸ ಹೋಗದಂತೆ ಶ್ರೀರಾಂಪುರ ಠಾಣೆ ಪಿಐ ಮಧುಕುಮಾರ್ ತಿಳಿಸಿದ್ದಾರೆ.ಈ ಸುದ್ದಿಗೆ ಪೂರಕ:
ಒಂದು ಕೋಟಿ ರುಪಾಯಿಗೂ ಅಧಿಕ ಹಣ ವಂಚನೆಸೇನೆಯಲ್ಲಿ ಕೆಲಸ ಕೊಡಿಸುವುದಾಗಿ ಹೇಳಿಕೊಂಡು ಸೇನೆಯಿಂದ ವಜಾಗೊಂಡಿರುವ ಶಿವರಾಜ್ ಎಂಬಾತ ಶ್ರೀರಾಂಪುರದಲ್ಲಿ ಕ್ರೀಡಾ ಅಕಾಡೆಮಿ ಮಾಡಿಕೊಂಡು ಸುಮಾರು 150ಕ್ಕೂ ಹೆಚ್ಚು ಯುವಕರಿಂದ ಒಂದು ಕೋಟಿಗೂ ಅಧಿಕ ಮೊತ್ತದಲ್ಲಿ ಹಣ ಲಪಟಾಯಿಸಿ, ಮೋಸ ಮಾಡಿರುವುದಾಗಿ ಮಿಲಿಟರಿ ಇಂಟಲೆಜೆನ್ಸಿ ಅಧಿಕಾರಿ ರಾಹುಲ್ ತಿಳಿಸಿದ್ದಾರೆ. ಈ ಕುರಿತು ಕನ್ನಡಪ್ರಭದೊಂದಿಗೆ ಮಾತನಾಡಿ, ಈ ಬಗ್ಗೆ ಯುವಕರು ಕಳೆದ 2 ತಿಂಗಳ ಹಿಂದೆಯೇ ಪೊಲೀಸರಿಗೆ ದೂರು ನೀಡಲು ಮುಂದಾಗಿದ್ದಾರೆ. ಆದರೆ ಈ ಬಗ್ಗೆ ಪೊಲೀಸರು ದೂರು ಸ್ವೀಕರಿಸಿರಲಿಲ್ಲ. ಹಾಗಾಗಿ ಯುವಕರು ನೀಡಿದ ಮಾಹಿತಿ ಆಧಾರದ ಮೇರೆಗೆ ಆತನನ್ನು ಶ್ರೀರಾಂಪುರ ಪೊಲೀಸರು ಹಾಗೂ ಮಿಲಟರಿ ಇಂಟಲಿಜೆನ್ಸಿ ಅಧಿಕಾರಿಗಳು ಜಂಟಿಯಾಗಿ ಸೇರಿಕೊಂಡು ಆತನನ್ನು ಶಿಗ್ಗಾವಿಯಲ್ಲಿ ಬಂಧಿಸಿರುವುದಾಗಿ ತಿಳಿಸಿದರು.ಸೇನೆಯಲ್ಲಿ 3 ವರ್ಷ ಕೆಲಸ ಮಾಡಿದ್ದ ಶಿವರಾಜ್, ಕ್ರಿಮಿನಲ್ ಪ್ರಕರಣದಲ್ಲಿ ಸಿಲುಕಿ ಕೆಲಸದಿಂದ ವಜಾಗೊಂಡಿದ್ದ. ಹುಬ್ಬಳ್ಳಿ ಮೂಲದ ಈತ ಶ್ರೀರಾಂಪುರದಲ್ಲಿದ್ದ ಭೀಮವ್ವ ಎಂಬ ಮಹಿಳೆಯೊಂದಿಗೆ ಸೇರಿಕೊಂಡು ಸಮೀಪದ ಬೆಟ್ಟದ ತಪ್ಪಲಿನ ಕಟ್ಟಡವೊಂದರಲ್ಲಿ ನಕಲಿ ದಾಖಲೆ ಸೃಷ್ಟಿಸಿ ಅಕಾಡೆಮಿ ನಡೆಸುತ್ತಿರುವುದಾಗಿ ದಾವಣಗೆರೆ, ಚಿತ್ರದುರ್ಗ ಹಾಗೂ ಹಾವೇರಿ ಬಾಗಗಳಿಂದಲೂ ಯುವಕರಿಗೆ ನಂಬಿಸಿ ಯುವಕರಿಂದ ಸುಮಾರು ಒಂದು ಕೋಟಿಗೂ ಅಧಿಕ ಹಣ ಪಡೆದಿರುವ ಬಗ್ಗೆ ಮಾಹಿತಿ ಇದೆ ಎಂದು ತಿಳಿಸಿದರು.ಈತ ಶಿಗ್ಗಾವಿಯಲ್ಲಿ ಇಂತಹುದೆ ಮತ್ತೊಂದು ನಕಲಿ ಅಕಾಡೆಮಿ ತೆರೆದಿದ್ದು, ಯುವಕರು ಇಂತಹ ಮೋಸದ ಜಾಲಕ್ಕೆ ಸಿಲುಕಬಾರದು. ಈ ಬಗ್ಗೆ ಯುವಕರು ಜಾಗ್ರತೆ ವಹಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.