ಸಾರಾಂಶ
- ಮೂವರು ಎಂಜಿನಿಯರ್‌ಗಳು ಸೇರಿದಂತೆ 7 ಆರೋಪಿಗಳ ವಿರುದ್ಧ ನಗರ ಠಾಣೆಗೆ ದೂರು
- 2020ರ ಮೇ 20ರಿಂದ 2021ರ ನ.4ರ ಅವಧಿಯಲ್ಲಿ ಈ ಕೃತ್ಯ ಎಸಗಿರುವ ಆರೋಪಿಗಳು - - - ಕನ್ನಡಪ್ರಭ ವಾರ್ತೆ ಹರಿಹರಕಾಮಗಾರಿ ನಡೆಸದೇ ಸುಳ್ಳು ದಾಖಲೆಗಳನ್ನು ಸೃಷ್ಠಿಸಿ ಹಾಗೂ ಕಾಮಗಾರಿ ವಿಸ್ತೀರ್ಣ ಹೆಚ್ಚಿಸಿ, ನಗರಸಭೆಯಿಂದ ಸುಮಾರು ₹1 ಕೋಟಿಯಷ್ಟು ಮೊತ್ತ ಪಡೆದು ಸರ್ಕಾರಕ್ಕೆ ಮೋಸ ಮಾಡಿದ್ದಾರೆ ಎನ್ನಲಾದ ಪ್ರಕರಣದಲ್ಲಿ ಮೂವರು ಎಂಜಿನಿಯರ್‌ಗಳು ಸೇರಿದಂತೆ ಒಟ್ಟು 7 ಆರೋಪಿಗಳ ವಿರುದ್ಧ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.
ನಗರಸಭೆಯಲ್ಲಿ ಈ ಹಿಂದೆ ಸಹಾಯಕ ಎಂಜಿನಿಯರ್ ಆಗಿದ್ದ ಅಬ್ದುಲ್ ಹಮೀದ್, ಕಿರಿಯ ಎಂಜಿನಿಯರ್ ನೌಷಾದ್ ಎಚ್.ಟಿ. (ಈಗ ನಿವೃತ್ತ), ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಬಿರಾದರ್ ಎಸ್.ಎಸ್. (ಈಗ ನಿವೃತ್ತ), ಗುತ್ತಿಗೆದಾರರಾದ ಮಹೇಶ್ ಜಿ.ಬಿ., ರಾಘವೇಂದ್ರ ಎಚ್., ಥರ್ಡ್ ಪಾರ್ಟಿ ಎಕ್ಸ್‌ಪರ್ಟ್ ದಾವಣಗೆರೆಯ ವಿಶಾಲ್ ಟೆಕ್ನೊಕಾನ್ ಸಂಸ್ಥೆಯ ದೀಪಕ್ ಎಸ್. ಮತ್ತು ಕಲಬುರ್ಗಿಯ ಬಾಲಾಜಿ ಟೆಕ್ನಿಕಲ್ ಕನ್ಸಲ್ಟೆಂಟ್ಸ್ ಸಂಸ್ಥೆಯ ವೇದಮೂರ್ತಿ ಆರೋಪಿಗಳು.2020ರ ಮೇ 20ರಿಂದ 2021ರ ನ.4ರ ಅವಧಿಯಲ್ಲಿ ಆರೋಪಿತರು ಈ ಕೃತ್ಯ ಎಸಗಿದ್ದಾರೆ ಎಂದು ಎಫ್‍ಐಆರ್‌ನಲ್ಲಿ ತಿಳಿಸಲಾಗಿದೆ. ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಸೂಚನೆ ಮೇರೆಗೆ ನಗರಸಭೆ ಪೌರಾಯುಕ್ತ ಸುಬ್ರಹ್ಮಣ್ಯ ಶೆಟ್ಟಿ ಠಾಣೆಗೆ ದೂರು ಸಲ್ಲಿಸಿದ್ದರು.
ಸುಳ್ಳು ದಾಖಲೆ ಸೃಷ್ಟಿ:ಸರ್ಕಾರಕ್ಕೆ ಮೋಸ ಮಾಡುವ ಉದ್ದೇಶದಿಂದ ಆರೋಪಿಗಳು ಪರಸ್ಪರ ಶಾಮೀಲಾಗಿ ನಗರದ ಜೆ.ಸಿ. ಬಡಾವಣೆ 1ನೇ ಕ್ರಾಸ್‍ನ ಕನ್ಸರ್‍ವೆನ್ಸಿಯಲ್ಲಿ 58 ಮೀ. ಸಿಸಿ ಚರಂಡಿ ನಿರ್ಮಿಸಿ 98 ಮೀ. ಕಾಮಗಾರಿ ಎಂದು ಸುಳ್ಳು ದಾಖಲೆ ಸೃಷ್ಟಿಸಿದ್ದರು. ಹಾಗೆಯೇ ವಾರ್ಡ್ ನಂ.1, 12, 13, 14, 19, 22, 23, 24, 25, 27 (ಎರಡು ಕಡೆ), 28 (ನಾಲ್ಕು ಕಡೆ), 29, ಎಪಿಎಂಸಿ ಆವರಣದ ಹಮಾಲರ ಬಡಾವಣೆ, ಜೆ.ಸಿ. ಬಡಾವಣೆ 2ನೇ ಮೇನ್, ಭರಂಪುರ ಹೀಗೆ 19 ಕಡೆ ಕಿರುನೀರು ಸರಬರಾಜು ಟ್ಯಾಂಕು ನಿರ್ಮಾಣ ಹಾಗೂ ಪೈಪ್‍ಲೈನ್ ಅಳವಡಿಕೆ ಮಾಡಲಾಗಿದೆ ಎಂದು ಸುಳ್ಳು ದಾಖಲೆ ಸೃಷ್ಠಿಸಿ ವಂಚನೆ ಎಸಗಿದ್ದಾರೆ. ಈ ಎಲ್ಲ ಸುಳ್ಳು ಕಾಮಗಾರಿಗಳಿಂದಾಗಿ ಸರ್ಕಾರಕ್ಕೆ ₹96,51,961 ನಷ್ಟ ಉಂಟಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಆರೋಪಿತರ ವಿರುದ್ಧ ದಾಖಲಿಸಿರುವ ಭಾರತೀಯ ದಂಡ ಸಂಹಿತೆಯ 406, 409, 417, 420, 465, 468 ಕಲಂಗಳಡಿ ಆರೋಪ ಸಾಬೀತಾದರೆ ಆರೋಪಿಗಳಿಗೆ 10 ವರ್ಷಗಳವರೆಗೆ ಅಥವಾ ಜೀವಾವಧಿ ಶಿಕ್ಷೆ ವಿಧಿಸಲು ಅವಕಾಶವಿದೆ.
ಡಿಸಿಗೆ ದೂರು ನೀಡಿದ್ದರು:ಗುತ್ತಿಗೆದಾರ ಮೊಹ್ಮದ್ ಮಜಹರ್ ನಗರಸಭೆಯ ಈ ಹಗರಣ ಹೊರಬರಲು ಕಾರಣರಾಗಿದ್ದಾರೆ. ವರ್ಷದ ಹಿಂದೆ ಅವರು ಅಗತ್ಯ ದಾಖಲೆಗಳೊಂದಿಗೆ ಜಿಲ್ಲಾಧಿಕಾರಿಗೆ ದೂರು ಸಲ್ಲಿಸಿದ್ದರು. ಡಿ.ಸಿ. ಅವರು ತಂಡ ರಚಿಸಿ ತನಿಖೆಗೆ ಆದೇಶಿಸಿದ್ದರು. ತನಿಖೆಯಲ್ಲಿ ಅಕ್ರಮ ಎಸಗಿರುವುದು ಕಂಡುಬಂದಿತ್ತು. ಇದನ್ನು ಆಧರಿಸಿ ದೂರು ನೀಡಲು ಪೌರಾಯುಕ್ತರಿಗೆ ಡಿಸಿ ಸೂಚಿಸಿದ್ದರು.
ಅಂದಾಜು ₹1 ಕೋಟಿ ಮೊತ್ತದಷ್ಟು ಅಕ್ರಮ ಪ್ರಕರಣದಲ್ಲಿ 7 ಜನರಷ್ಟೇ ಅಲ್ಲ, ಎ.ಇ.ಇ.ಗಿಂತ ಹಿರಿಯ ಅಧಿಕಾರಿಗಳು, ಕೆಲವು ಜನಪ್ರತಿನಿಧಿಗಳ ಪಾತ್ರವೂ ಇದೆ. ಅವರನ್ನು ಆರೋಪಿತರನ್ನಾಗಿಸಬೇಕಿತ್ತು ಎಂದು ಅಭಿಪ್ರಾಯಪಟ್ಟಿರುವ ದೂರುದಾರ ಮೊಹ್ಮದ್ ಮಜಹರ್, ಸೂಕ್ತ ತನಿಖೆ ನಡೆಸಿದರೆ ಇನ್ನೂ ಹಲವು ಕೋಟಿ ಮೊತ್ತದ ಅಕ್ರಮಗಳು ಬಯಲಿಗೆ ಬರುತ್ತವೆ ಎಂದು ತಿಳಿಸಿದ್ದಾರೆ.- - -