ಕನ್ನಡಪ್ರಭ ವಾರ್ತೆ ವಿಜಯಪುರ

ಪೊಲೀಸ್ ಡ್ರೆಸ್‌ ಹಾಕಿಕೊಂಡು ನಾನು ಡಿ.ವೈ.ಎಸ್.ಪಿ ಇದ್ದು, ಪೊಲೀಸ್ ಇಲಾಖೆಯಲ್ಲಿ ಕೆಲಸ ಕೊಡಿಸುತ್ತೇನೆಂದು 2012ರಲ್ಲಿ‌ ಮೂರ್ನಾಲ್ಕು ಜನರಿಗೆ ವಂಚಿಸಿ ತಲೆ ಮರೆಸಿಕೊಂಡಿದ್ದ ಆರೋಪಿಯನ್ನು ವಿಜಯಪುರ ಪೊಲೀಸರು ಬಂಧಿಸಿದ್ದಾರೆ.

ಬಾಗಲಕೋಟೆ ಜಿಲ್ಲೆ ಹುನಗುಂದ ತಾಲೂಕಿನ ವರಗೊಡದಿನ್ನಿ ನಿವಾಸಿ ಗ್ಯಾನನಗೌಡ @ ಜ್ಞಾನಗೌಡ @ ಗಣೇಶ @ ಸಿ.ಸಂಪತ್‌ಕುಮಾರ ಸಿದ್ದನಗೌಡ ಪಾಟೀಲ ಬಂಧಿತ ಆರೋಪಿ.

ನಗರದ ಗಾಂಧಿನಗರ ನಿವಾಸಿ ವಿಠ್ಠಲ ಛಾಯಾಗೋಳ ಎಂಬುವವರ ಸಂಬಂಧಿಕರ ಮಗನಿಗೆ ಪೊಲೀಸ್‌ ನೌಕರಿ ಕೊಡಿಸುತ್ತೇನೆಂದು ಹೇಳಿ 2012ರಲ್ಲಿ ಸುಮಾರು ₹1.20 ಲಕ್ಷ ಪಡೆದುಕೊಂಡು ವಂಚಿಸಿದ್ದ. ಕೊಟ್ಟ ಹಣ ಮರಳಿ ಕೊಡಲು ಒತ್ತಾಯ ಮಾಡಿದ್ದಕ್ಕೆ ಸಹಚರರೊಂದಿಗೆ ಸೇರಿ ಪಿರ್ಯಾದಿಯನ್ನು 2014 ಮಾರ್ಚ್ 26ರಂದು ಕಾರಿನಲ್ಲಿ ಕಿಡ್ನಾಪ್ ಮಾಡಿ ಕೊಪ್ಪಳ‌ ಜಿಲ್ಲೆಯ ಹಲಗಿ ಗ್ರಾಮದ ಬಳಿ ಕೈಗಳಿಗೆ ಬೇಡಿ ಹಾಕಿ, ಗೋಣಿ ಚೀಲದಲ್ಲಿ ಹಾಕಿ ಕಾಲುವೆ ನೀರಿನಲ್ಲಿ ಎಸೆದಿದ್ದ. ಈ‌ ಕುರಿತು ದೂರು ದಾಖಲಾಗಿತ್ತು. ಪ್ರಕರಣ ತನಿಖೆ ಕೈಗೊಂಡ ಪೊಲೀಸರು ಆರೋಪಿ ಗ್ಯಾನನಗೌಡ @ ಜ್ಞಾನಗೌಡ @ ಗಣೇಶ @ ಸಿ.ಸಂಪತ್‌ಕುಮಾರ ಪಾಟೀಲ ಹಾಗೂ ಈತನಿಗೆ ಸಹಕರಿಸಿದ ಮಹಿಳೆ ಸೇರಿ ಮೂವರನ್ನು ಬಂಧಿಸಿ, ತನಿಖೆ ಪೂರ್ಣಗೊಳಿಸಿ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.

ಆರೋಪಿ ದಸ್ತಗೀರ ಜಾಮೀನು ಪಡೆದು ಹೊರಬಂದು ನ್ಯಾಯಾಲಯದ ವಿಚಾರಣೆಗೆ ಸತತ ಗೈರುಹಾಜರಾಗಿ ಸುಮಾರು 12 ವರ್ಷಗಳಿಂದ ತಲೆ ಮರೆಸಿಕೊಂಡಿದ್ದ, ನ್ಯಾಯಾಲಯ ಪ್ರಕರಣವನ್ನು ಎಲ್.ಪಿ.ಆರ್‌ ಎಂದು ಪರಿಗಣಿಸಿತ್ತು. ಆರೋಪಿ ತಲೆಮರೆಸಿಕೊಂಡ ಅವಧಿಯಲ್ಲಿ ಆತನ ಮೇಲೆ ತಾಳಿಕೋಟೆ ಪೊಲೀಸ್‌ ಠಾಣೆಯಲ್ಲಿ ಮತ್ತೊಂದು ಪ್ರಕರಣ ದಾಖಲಾಗಿದ್ದು, ರೇವಣಸಿದ್ದಪ್ಪ ಬಸಪ್ಪ ದೊಡಮನಿ ಇವರ ಮಗನಿಗೆ ತಾನು ಡಿಎಸ್‌ಪಿ ಎಂದು ನಟಿಸಿ, ಜೈಲರ್‌ ನೌಕರಿ ಕೊಡಿಸುತ್ತೇನೆಂದು ಹೇಳಿ ₹8 ಲಕ್ಷ ಪಡೆದು ವಂಚಿಸಿದ ಬಗ್ಗೆ ಪ್ರಕರಣ ದಾಖಲಾಗಿತ್ತು.


ಆರೋಪಿ ಪತ್ತೆಗೆ ಎಪಿಎಂಸಿ ಠಾಣೆಯ ಪಿಎಸ್‌ಐ ಹಾಗೂ ಸಿಬ್ಬಂದಿ ತಂಡ ರಚನೆ ಮಾಡಿ, ಪತ್ತೆ ಕಾರ್ಯ ವಹಿಸಲಾಗಿತ್ತು. ತಂಡ ಆರೋಪಿಯನ್ನು ಬೆಂಗಳೂರಿನಲ್ಲಿ ಬಂಧಿಸಿದೆ. ಆರೋಪಿಯ ಮೇಲೆ 2012ನೇ ಸಾಲಿನಿಂದ ಕ್ರಮವಾಗಿ ಮುದ್ದೇಬಿಹಾಳ, ಎಪಿಎಂಸಿ, ಆದರ್ಶನಗರ, ತಾಳಿಕೋಟೆ ಪೊಲೀಸ್‌ ಠಾಣೆಗಳಲ್ಲಿ ವಂಚನೆ ಪ್ರಕರಣಗಳು ದಾಖಲಾಗಿವೆ. ಸುಮಾರು 12 ವರ್ಷಗಳಿಂದ ತಲೆ ಮರೆಸಿಕೊಂಡ ಆರೋಪಿತನನ್ನು ತನಿಖಾ ತಂಡದ ಅಧಿಕಾರಿಗಳು ಅವಿರತವಾಗಿ ತನಿಖೆ ಕೈಗೊಂಡು ಪತ್ತೆ ಮಾಡಿದ್ದು, ತನಿಖಾ ತಂಡದ ಅಧಿಕಾರಿ ಹಾಗೂ ಸಿಬ್ಬಂದಿ ಜನರ ಕರ್ತವ್ಯವನ್ನು ‍ಶ್ಲಾಘಿಸಲಾಗಿದೆ ಎಂದು ಎಸ್.ಪಿ ಲಕ್ಷ್ಮಣ ನಿಂಬರಗಿ ತಿಳಿಸಿದ್ದಾರೆ.