ಸಾರಾಂಶ
ದಾವಣಗೆರೆ: ತಮ್ಮ ಹಿಂದುಸ್ಥಾನ್ ಯುನಿಲೀವರ್ ಲಿ. ಬಾಂಬೆ ಸಂಸ್ಥೆಯಲ್ಲಿ ಹಣ ತೊಡಗಿಸಿದರೆ ಶೇ.4ರಷ್ಟು ಲಾಭಾಂಶ ನೀಡುವುದಾಗಿ ಹೇಳಿ, ಒಬ್ಬರಿಂದ ₹10.30 ಲಕ್ಷ ಹಾಗೂ ಮತೊಬ್ಬರಿಂದ ₹19 ಲಕ್ಷ ತೊಡಗಿಸಿಕೊಂಡು, ಮೋಸ ಮಾಡಿದ್ದ ಆರೋಪಿಗೆ ಎರಡೂ ಪ್ರಕರಣಕ್ಕೆ ಸಂಬಂಧಿಸಿದಂತೆ ತಲಾ 3 ವರ್ಷದಂತೆ ಒಟ್ಟು 6 ವರ್ಷ ಜೈಲು ಶಿಕ್ಷೆ ಹಾಗೂ ₹45 ಸಾವಿರ ದಂಡ ವಿಧಿಸಿ, 3ನೇ ಹೆಚ್ಚುವರಿ ಸಿಜೆ ಮತ್ತು ಜೆಎಂಎಫ್‌ಸಿ ನ್ಯಾಯಾಲಯ ತೀರ್ಪು ನೀಡಿದೆ.
ಇಲ್ಲಿನ ಭಗತ್ ಸಿಂಗ್ ನಗರದ ಶ್ರೀ ಚೌಡೇಶ್ವರಿ ದೇವಸ್ಥಾನ ಪಕ್ಕದ 11ನೇ ಕ್ರಾಸ್, 1ನೇ ಮೇನ್ ವಾಸಿಯಾದ ಮಾಲತೇಶ ಎಂ.ಬಿ. ಬಾರಿಕರ್ (40) ಶಿಕ್ಷೆಗೆ ಗುರಿಯಾದ ಅಪರಾಧಿ.ಬಾಂಬೆಯ ಹಿಂದುಸ್ಥಾನ ಯುನಿಲೀವರ್ ಲಿ.ನಲ್ಲಿ ಹಣ ತೊಡಗಿಸಿದರೆ, ಶೇ.4ರಷ್ಟು ಲಾಭಾಂಶ ನೀಡುವುದಾಗಿ ಆರೋಪಿ ಮಾಲತೇಶ ಬಾರಿಕರ (40), ಉಷಾ ಮಾಲತೇಶ ಹಾಗೂ ಎಂ.ಜಿ. ಚೌಹಾಣ್ ಎಂಬುವರು ನಗರದ ಎಂ.ಕೆ.ತಿಪ್ಪೇಸ್ವಾಮಿ ಹಾಗೂ ಭಗತ್ ಸಿಂಗ್ ನಗರದ ವಾಸಿ ಆರ್.ಸಿ.ಸುನಿಲ್ ಅಹಮ್ಮದ್ ಎಂಬುವರಿಗೆ ನಂಬಿಸಿದ್ದರು. ತಿಪ್ಪೇಸ್ವಾಮಿ ₹10.30 ಲಕ್ಷ ಹಾಗೂ ಸುನೀಲ್ ಅಹಮ್ಮದ್ ₹19 ಲಕ್ಷ ಹೂಡಿದ್ದರು. ಆದರೆ, ಲಾಭಾಂಶ ನೀಡದೇ, ಹಣವನ್ನೂ ಮರಳಿಸದೇ ವಂಚನೆ ಮಾಡಿದ್ದರು. ಕೆಟಿಜೆ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಕೆಟಿಜೆ ನಗರ ಠಾಣೆ ಉಪ ನಿರೀಕ್ಷಕ, ತನಿಖಾಧಿಕಾರಿ ಪ್ರಭು ಡಿ.ಕೆಳಗಿನಮನಿ ಪ್ರಕರಣದ ತನಿಖೆ ಕೈಗೊಂಡು, ನ್ಯಾಯಾಲಯಕ್ಕೆ ಆರೋಪಿಗಳ ವಿರುದ್ಧ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.3ನೇ ಹೆಚ್ಚುವರಿ ಸಿಜೆ ಮತ್ತು ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶ ಎನ್.ಕೆ.ಸಿದ್ದರಾಜು ಅವರು ಒಂದನೇ ಆರೋಪಿ ಎಂ.ಬಿ.ಮಾಲತೇಶ ಬಾರಿಕರ್ ವಿರುದ್ಧದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಆತನಿಗೆ ಎರಡೂ ಪ್ರಕರಗಳಲ್ಲಿ ತಲಾ 3 ವರ್ಷದಂತೆ ಒಟ್ಟು 6 ವರ್ಷ ಶಿಕ್ಷೆ ಮತ್ತು ₹45 ಸಾವಿರ ದಂಡ ವಿಧಿಸಿ, ತೀರ್ಪು ನೀಡಿದರು. ಸರ್ಕಾರದ ಪರ ಸರ್ಕಾರಿ ವಕೀಲರಾದ ಬಿ.ಡಿ.ಚಿತ್ರಶೇಖರಪ್ಪ ನ್ಯಾಯ ಮಂಡನೆ ಮಾಡಿದ್ದರು.
- - - (-ಫೋಟೋ:)