ಸಾರಾಂಶ
ಕನ್ನಡಪ್ರಭ ವಾರ್ತೆ ಬೆಳಗಾವಿ
ಸ್ವಸಹಾಯ ಸಂಘಗಳ ಹೆಸರು ಹೇಳಿ ಸಾಲ ಕೊಡುವ ನೆಪದಲ್ಲಿ ಸಾವಿರಾರು ಮಹಿಳೆಯರಿಗೆ ಕೋಟ್ಯಂತರ ರುಪಾಯಿ ವಂಚನೆ ಮಾಡಿದ ಮಹಿಳೆ ಮನೆಗೆ ನೂರಾರು ಮಹಿಳೆಯರು ಸೋಮವಾರ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ ಘಟನೆ ಬೆಳಗಾವಿ ತಾಲೂಕಿನ ಹಾಲಬಾವಿಯಲ್ಲಿ ನಡೆದಿದೆ.ಯಲ್ಲವ್ವ ಕಮಲೇಶಕುಮಾರ ಬನ್ನಿಬಾಗಿ ನೂರಾರು ಮಹಿಳೆಯರಿಗೆ ಪಂಗನಾಮ ಹಾಕಿದ ಆರೋಪ ಎದುರಿಸುತ್ತಿರುವ ಮಹಿಳೆ. ನೂರಾರು ಮಹಿಳೆಯರ ಹೆಸರಿನಲ್ಲಿ ರಾಣಿ ಚನ್ನಮ್ಮ, ವಾಲ್ಮೀಕಿ ಹಾಗೂ ವಿವಿಧ ಸ್ವ ಸಹಾಯ ಸಂಘಗಳಿಂದ ₹50 ಸಾವಿರ ಸಾಲ ತೆಗೆದಿದ್ದಾಳೆ. ಈ ಪೈಕಿ ಕೆಲ ಮಹಿಳೆಯರಿಗೆ ₹25 ಸಾವಿರ ಮಾತ್ರ ಕೊಟ್ಟಿದ್ದಾಳೆ. ಇನ್ನೂ ಕೆಲವರಿಗೆ ಯಾವುದೇ ಕೊಡದೆ ಸಾಲದ ರೂಪದಲ್ಲಿ ಹಣ ಪಡೆದು ಆ ಸಾಲವನ್ನು ಪಾವತಿಸುವ ಸಂಪೂರ್ಣ ಜವಾಬ್ದಾರಿ ತಾನೇ ತೆಗೆದುಕೊಳ್ಳುತ್ತೇನೆ ಎಂದು ನಂಬಿಸಿ ಹತ್ತಾರು ಕೋಟಿ ರುಪಾಯಿ ಪಡೆದಿದ್ದಾಳೆ. ಬಳಿಕ ಸಾಲ ಪಾವತಿಸದೇ ನೂರಾರು ಮಹಿಳೆಯರಿಗೆ ವಂಚನೆ ಮಾಡಿದ್ದಾಳೆ ಎಂಬ ಆರೋಪ ಕೇಳಿಬಂದಿದೆ. ತಾವು ಮೋಸ ಹೋಗಿರುವುದು ಗೊತ್ತಾದ ಕೂಡಲೇ ಹಲವಾರು ಬಾರಿ ಸಾಲ ಮರುಪಾವತಿಸುವಂತೆ ಮಹಿಳೆಯರು ವಂಚಕಿಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಇದರಿಂದಾಗಿ ರೊಚ್ಚಿಗೆದ್ದ ಮಹಿಳೆಯರು ಯಲ್ಲವ್ವ ಅವರ ಮನೆಗೆ ಮುತ್ತಿಗೆ ಹಾಕಿ ಬಡ್ಡಿ ಸಮೇತವಾಗಿ ಸಾಲ ಮರುಪಾವತಿಸುವಂತೆ ಆಗ್ರಹಿಸಿದರು. ಕಾಕತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನಾ ಸ್ಥಳಕ್ಕೆ ಡಿಸಿಪಿ ರೋಹನ ಜಗದೀಶ ಭೇಟಿ ನೀಡಿ ಪರಿಶೀಲಿಸಿದರು.